Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆ ಹಾಗೂ ಬಡಾವಣೆಯ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

 

ಗೋಪಾಲಪುರ ಬಡಾವಣೆಯು ಚಿತ್ರದುರ್ಗ ನಗರದ ಮಧ್ಯಭಾಗದಲ್ಲಿರುವ ಜನವಸತಿ ಪ್ರದೇಶವಾಗಿದೆ. ನಗರದ ಅತ್ಯಂತ ಹಳೆಯ ಜನವಸತಿ ಪ್ರದೇಶವಾದ ಇದು ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯಿಂದ ಉತ್ತರಕ್ಕೆ ವಾಸವಿ ಮಹಲ್ ರಸ್ತೆ ,ಪ್ರಸನ್ನ ಟಾಕೀಸ್ ರಸ್ತೆಯಿಂದ ಮುಂದೆ ಸಾಗಿದರೆ ನೇರ ಗೋಪಾಲಪುರ ಬಡಾವಣೆಗೆ ಗೋಪಾಲಪುರ ರಸ್ತೆಯು ತಲುಪುತ್ತದೆ. ಒಂದು ಕಿಲೋಮೀಟರ್ ಉದ್ದದ ಈ ರಸ್ತೆಯು ಮುಂದೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ತಲುಪುತ್ತದೆ.ಪಶ್ಚಿಮದಲ್ಲಿ ಸಮಾನಾಂತರವಾಗಿ ರಾಮದಾಸ್ ಕಾಂಪೌಂಡ್ ಹಾಗೂ ಹೊಸ ಬೋವಿ ಕಾಲೋನಿ ಇದೆ.ಪೂರ್ವದಲ್ಲಿ ಜೆ.ಸಿ.ಆರ್.ಬಡಾವಣೆ ಇದೆ.ಇವೆರಡೂ ಮುಂದುವರೆದು ರಾಷ್ಟ್ರೀಯ ಹೆದ್ದಾರಿ ನಾಲ್ಕಕ್ಕೆ ತಲುಪುತ್ತದೆ .ನಗರಸಭೆ ವ್ಯಾಪ್ತಿಯ 20ನೇ ವಾರ್ಡ್ ನಲ್ಲಿ ಈ ಬಡಾವಣೆ ಸೇರುತ್ತದೆ.
ಜನನಿಬಿಡ ರಸ್ತೆಯಾದ ಗೋಪಾಲಪುರ ರಸ್ತೆಯು ಎಲ್ಲಾ ಉತ್ತಮ ಸೌಲಭ್ಯ ಹೊಂದಿರುವ ಬಡಾವಣೆಯಾಗಿದೆ.ಮಧ್ಯಮ ವರ್ಗದವರೇ ಇಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಚಿತ್ರದುರ್ಗ ನಗರದ ಅತ್ಯಂತ ಹಳೆಯ ಬಡಾವಣೆಯಾದ ಇಲ್ಲಿ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಕಣ್ಣುಹಾಯಿಸಿದರೆ ಎಲ್ಲೆಡೆ ವಿಶಾಲ ಬಯಲು ಅಲ್ಲೊಂದು ಇಲ್ಲೊಂದು ಹೆಂಚಿನ ಮನೆಗಳು , ಹತ್ತಾರು ಗುಡಿಸಲು,ಸಣ್ಣ ಕಲ್ಲಿನ ದಿಬ್ಬಗಳು , ಕಲ್ಲಿನ ಮಟ್ಟಿಗಳೇ ಕಂಡುಬರುತ್ತಿದ್ದವು .
ಈಗ ಅಲ್ಲೆಲ್ಲಾ ಜನಸಂಖ್ಯೆ ಹೆಚ್ಚಾದಂತೆ ಮನೆಗಳು ಹೆಚ್ಚಾಗಿ ಜನವಸತಿಯಾಗಿದೆ.

ಇತಿಹಾಸ:
ಹಿಂದೆ ಇದೊಂದು ಸಣ್ಣ ಗ್ರಾಮವಾಗಿದ್ದು, ನಗರದ ಹೊರವಲಯದಲ್ಲಿ ಇದ್ದಿತ್ತು.
ಚಿತ್ರದುರ್ಗದ ಕೋಟೆಯಿಂದ 3 ಕಿಲೋಮೀಟರ್ ದೂರವಿದ್ದ ಈ ಗ್ರಾಮವು ಇಂದು ಸಂಪೂರ್ಣ ನಗರದ ಮಧ್ಯಭಾಗದಲ್ಲಿದೆ .
ಕ್ರಿಸ್ತಶಕ 14 ನೇ ಶತಮಾನದಲ್ಲಿ ಕಾಮಯ್ಯ ದಣ್ಣಾಯಕನ ಮಗ ಹಿರಿಯ ಬಲ್ಲಪ್ಪ ಡಣ್ಣಾಯಕನು ಹೊಯ್ಸಳರ ಮೂರನೇ ದೊರೆ ವೀರಬಲ್ಲಾಳನ ಮಾಂಡಲೀಕನಾಗಿದ್ದು ಚಿತ್ರದುರ್ಗದ ಸಂಸ್ಥಾನವನ್ನು ಆಳುತ್ತಿರುವಾಗ ಬಲ್ಲಪ್ಪ ಡಣ್ಣಾಯಕನು ಕ್ರಿ.ಶ.1338 ರಲ್ಲಿ ಚಿತ್ರದುರ್ಗದ ಕೋಟೆಯಲ್ಲಿರುವ ಗೋಪಾಲಸ್ವಾಮಿ ದೇವರಿಗೆ ಚಿಮ್ಮತ್ತೂರ ನಾಡಿನ ನಗರೇರು ಗ್ರಾಮವನ್ನು ಗೋಪಾಲಪುರವೆಂದು ನಾಮಕರಣ ಮಾಡಿ ಉಂಬಳಿ ಹಾಕಿದ್ದಾನೆ. ಹಿಂದೆ ಈ ಗೋಪಾಲಪುರದಲ್ಲಿ ಗೋವುಗಳನ್ನು ಸಾಕುತ್ತಿದ್ದ ಗೋವು ಪಾಲಕ ಜನರೇ ಹೆಚ್ಚಾಗಿದ್ದರು.ಇಲ್ಲಿಂದ ಕೋಟೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಲು, ಮೊಸರು, ತುಪ್ಪ, ಸರಬರಾಜು ಆಗುತ್ತಿತ್ತು.

ಗೋಪಾಲಪುರ ರಸ್ತೆಯು ಅತ್ಯಂತ ಜನನಿಬಿಡವಾದ ರಸ್ತೆಯಾಗಿದೆ. ಅಂಗಡಿಗಳು, ಹೋಟೆಲ್ ಗಳು ಹಾಗೂ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ನಡೆಯುವ ಉತ್ತಮ ಸ್ಥಳವಾಗಿದೆ. ಗೋಪಾಲಪುರ ಬಡಾವಣೆಯಲ್ಲಿ ರೇಣುಕಾ ಯಲ್ಲಮ್ಮ ,ತಿಪ್ಪಿನಗಟ್ಟಮ್ಮ ದೇವಸ್ಥಾನ ಹಾಗೂ ಹೊಸ ಬೋವಿ ಕಾಲೋನಿಯಲ್ಲಿ ಪೆದ್ದಮ್ಮ-ಯಲ್ಲಮ್ಮ ದೇವಸ್ಥಾನಗಳಿವೆ. ಇವು ಸ್ಥಳೀಯ ಶೈಲಿಯಲ್ಲಿದ್ದು, ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ಮಾಡಲಾಗಿದೆ.

ಗೋಪಾಲಪುರದ ಆಂಜನೇಯಸ್ವಾಮಿ ದೇವಾಲಯ :
ಆಂಜನೇಯಸ್ವಾಮಿ ದೇವಾಲಯವು ಗೋಪಾಲಪುರದ ಉತ್ತರಕ್ಕೆ ಇದ್ದು, ರಾಷ್ಟ್ರೀಯ ಹೆದ್ದಾರಿ 4 ರ ರೈಲ್ವೆ ಹಳಿಯ ಆಚೆಗೆ ಈಗಿನ ವಿದ್ಯಾನಗರದಲ್ಲಿದ್ದು ಹಿಂದೆ ಇದು ಗೋಪಾಲಪುರಕ್ಕೆ ಸೇರಿದ ಪ್ರದೇಶವಾಗಿತ್ತು.
ಈ ಆಂಜನೇಯಸ್ವಾಮಿ ಶಿಲ್ಪವನ್ನು ವ್ಯಾಸರಾಯರು ಪ್ರತಿಷ್ಟಾಪಿಸಿದ್ದಾರೆಂದು ಹೇಳಲಾಗುತ್ತದೆ. ದೇವಾಲಯವು ಸ್ಥಳೀಯ ಶೈಲಿಯಲ್ಲಿದ್ದು, ದಕ್ಷಿಣಾಭಿಮುಖವಾಗಿದೆ. ದೇವಾಲಯದ ಆವರಣದಲ್ಲಿ ಅರಳಿಮರ ಹಾಗೂ ನಾಗರಕಲ್ಲು ,ನಾಗರಕಟ್ಟೆಗಳಿವೆ .ಈ ನಾಗರಕಲ್ಲುಗಳಿಗೆ ಇಂದಿಗೂ ಗೋಪಾಲಪುರ ರಸ್ತೆ ಹಾಗೂ ಬಡಾವಣೆಯ ಜನರು ನಾಗರಚೌತಿ /ಪಂಚಮಿ ,ಗಣಪತಿ ಹಬ್ಬದಂದು ಹಾಲು ಎರೆಯುವ ಸಂಪ್ರದಾಯವಿದೆ .ಶ್ರಾವಣ ಶನಿವಾರಗಳಂದು ವಿಶೇಷ ಪೂಜೆ -ಪ್ರಾರ್ಥನೆ ನಡೆಯುತ್ತದೆ. ಗೋಪಾಲಪುರ ಬಡಾವಣೆಯಲ್ಲಿ ಎಲ್ಲಾ ಜಾತಿಯ ಜನರು ವಾಸವಾಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...