ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 02 : ನಗರದ ವಿದ್ಯಾನಗರದ ಏಳುಕೋಟಿ ಬಡಾವಣೆಯ ನಿವಾಸಿ ಹಾಗೂ ರೇಣುಕಾ ಅಗ್ರೋ ಪರ್ಟಿಲೈರ್ಸ್ ಮಾಲೀಕರಾದ ಶಿವಲಿಂಗಪ್ಪ (52 ವರ್ಷ) ಇಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಗರದ ಹೊರವಲಯದಲ್ಲಿನ ಎನ್.ಹೆಚ್-48 ರಸ್ತೆಯ ಬಳಿ ಪಾಕಶಾಲಾ ಹೋಟೆಲ್ ಸಮೀಪ ರಸ್ತೆಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ರಂಜಿತಾರವರು ಪತಿ ಶಿವಲಿಂಗಪ್ಪ ನವರು ಕಾಣೆಯಾಗಿರುವುದಾಗಿ ಮಾರ್ಚ್ 31 ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇಂದು ಬೆಳಿಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಮೇರೆಗೆ ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್.ಪಿ, ಎ.ಎಸ್.ಪಿ. ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.

ಇಂದು ಅವರ ಮೃತದೇಹ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯಾರೋ ದುಷ್ಕರ್ಮಿಗಳು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಪತ್ನಿ ದೂರು ನೀಡಿದ್ದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



















