ಸುದ್ದಿಒನ್, ಚಿತ್ರದುರ್ಗ, ಏ. 02 : ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಗೆ ಇನ್ನು ಅನೇಕ ಕ್ಷೇತ್ರಗಳಲ್ಲಿ ಸಮಾನ ಅವಕಾಶಗಳು ದೊರೆಯದೇ ಇದ್ದರೂ ಸಹಿತ, ನಾವು ಕಳೆದ ಒಂಬೈನೂರು ವರ್ಷಗಳ ಇತಿಹಾಸವನ್ನೊಮ್ಮೆ ಅವಲೋಕಿಸಿದಾಗ ಪುರುಷ ಪ್ರಾಬಲ್ಯದ ಕಾಲದಲ್ಲಿನ ಹೆಣ್ಣಿನ ಸ್ಥಿತಿ ಹೇಗಿರಬೇಡ. ಊಹಿಸಿಕೊಳ್ಳಲು ಆಗದು. ಆದರೆ 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಮದುವೆಯಾದರೂ ಲೌಕಿಕ ಪ್ರಪಂಚದ ಗೊಡವೆ ಬೇಡ ಎಂದು ಧಿಕ್ಕರಿಸಿ ತನ್ನ ಪತಿ ಚೆನ್ನಮಲ್ಲಿಕಾರ್ಜುನ ಎನ್ನುವ ಪಾರಮಾರ್ಥಿಕ ಗಂಡನನ್ನು ಹುಡುಕುತ್ತ ಕಲ್ಯಾಣದ ಅಣ್ಣ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವನ್ನು ಪ್ರವೇಶಿಸುವಾಗ ಅಲ್ಲಿನ ಶರಣತಿಂಥಿಣಿಯೊಳಗೆ ಉತ್ತರವನ್ನು ಯಾವ ರೀತಿ ಕೊಟ್ಟಿರಬಹುದು. ಸನ್ನಿವೇಶ ನೆನಪಿಸಿಕೊಂಡರೆ ಭಯವಾಗುತ್ತದೆ. ಆ ಧೈರ್ಯ ಬರಲು ಅಕ್ಕನಂಥವರಿಗೆ ಮಾತ್ರ ಸಾಧ್ಯ ಎಂದು ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೂ ಕನ್ನಡ ವಿಭಾಗದ ಮುಖ್ಯಸ್ಥರೂ ಆದ ಡಾ. ಗಾಯತ್ರಿ ಟಿ. ಅವರು ವಿಷಯ ಮಂಡಿಸುತ್ತ ಮಾತನಾಡಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ವೈರಾಗ್ಯನಿಧಿ ಅಕ್ಕಮಹಾದೇವಿ ಅವರ ಜಯಂತ್ಯುತ್ಸವ (ಶರಣೋತ್ಸವ)ದಲ್ಲಿ ಭಾಗವಹಿಸಿ ವಿಷಯಾವಲೋಕನ ಮಾಡುತ್ತ, ಚಿತ್ರದುರ್ಗದಂತಹ ಐತಿಹಾಸಿಕ ಮುರುಘಾಮಠಕ್ಕೆ ಮೊದಲ ಸಲ ಬಂದಿರುವುದು. ಮೊದಲ ಸಲ ಬಂದಾಗ ಏನೋ ಒಂದು ರೀತಿಯಲ್ಲಿ ಮನದಲ್ಲಿ ಮೌನ ಒಂದುಕಡೆ, ನೆಮ್ಮದಿ ಮತ್ತೊಂದೆಡೆ. ಅಕ್ಕಮಹಾದೇವಿ ಸಂಸಾರದ ಎಲ್ಲ ಜಂಜಡಗಳನ್ನು ತೊರೆದು ಕಾಡು-ಮೇಡು ಅಲೆದು ಅದ್ಯಾವ ರೀತಿ ಕಲ್ಯಾಣ ತಲುಪಿ ಅನುಭವ ಮಂಟಪ ಪ್ರವೇಶಿಸಿರಬೇಡ ಎನ್ನುವುದು ಈಗಲೂ ನಮಗೆ ಕುತೂಹಲ ಮತ್ತು ಆಶ್ಚರ್ಯ ಆಗುತ್ತದೆ. ಈ ಸಮಾರಂಭವೂ ಸಹ ಅನುಭವ ಮಂಟಪಕ್ಕೆ ಸಾಕ್ಷೀಕರಿಸುವಂತಿದೆ. ಅಲ್ಲಿ ವರ್ಗ ವರ್ಣ ಲಿಂಗಭೇದ, ಜಾತಿ, ವಯಸ್ಸು ಯಾವುದೇ ತಾರತಮ್ಯವಿಲ್ಲದೆ ಸರ್ವಸಮಾನ ವೇದಿಕೆಗೆ ಅದು ಕನ್ನಡಿ ಹಿಡಿದಂತಿತ್ತು. ಅದು ಸರ್ವಜನರ ಸಂಗಮದ ಸಂಗವೇ ಆಗಿತ್ತು. ಅದರ ಮುಂದುವರೆದ ಭಾಗ ಎನ್ನುವಂತೆ ಇಂದು ಅಕ್ಕನ ಜಯಂತಿಗಾಗಿ ಬಾಲ ಕುಸುಮಗಳಿಂದ ಹಿಡಿದು ಹಿರಿಯ ಜೀವಗಳೆಲ್ಲರೂ ನೂರಾರು ಸಂಖ್ಯೆಯಲ್ಲಿ ಸೇರಿರುವುದು ಕವಿವಾಣಿಯ ಸರ್ವಜನಾಂಗದ ಶಾಂತಿಯ ತೋಟವನ್ನು ನೆನಪಿಸುವಂತಿದೆ ಎಂದು ಸ್ಮರಿಸಿದರು.
12ನೇ ಶತಮಾನದಲ್ಲಿ ಇಡೀ ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯವು ದೊಡ್ಡ ಕೊಡುಗೆಯನ್ನು ನೀಡಿದೆ. ಬಸವಾದಿ ಶರಣರು ಸಾಮಾಜಿಕ ಆರ್ಥಿಕ ಧಾರ್ಮಿಕ ಹಾಗೂ ಸಾಂಸ್ಕøತಿಕ ಪ್ರಗತಿಯನ್ನು ಸಾಧಿಸುವಲ್ಲಿ ಯಶಸ್ಸು ಕಂಡರು. ಬಸವಣ್ಣನವರ ನೇತೃತ್ವದಲ್ಲಿ ಅಂದಿನ ಹಿರಿಕಿರಿಯ ಶರಣರೆಲ್ಲ ಸೇರಿಕೊಂಡು ಉಜ್ವಲ ಪರಂಪರೆಗೆ ನಾಂದಿಹಾಡಿದರು. ಅದರ ಬಳುವಳಿಯೇ ಅಕ್ಕಮಹಾದೇವಿ. ಅಕ್ಕ ವಚನಕಾರರ ಉಜ್ವಲ ನಕ್ಷತ್ರ ಎಂದೇ ಹೇಳಬೇಕು. ಶ್ರೇಷ್ಠ ಅನುಭಾವಿ, ಕನ್ನಡದ ಮೊಟ್ಟಮೊದಲ ಕವಯತ್ರಿ ಅಷ್ಟೇ ಅಲ್ಲ ಸ್ತ್ರೀ ಕುಲಕ್ಕೆ ಗೌರವ ತಂದುಕೊಡುವ ಕೆಲಸ ಆಕೆಯಿಂದ ನಡೆಯಿತು. ಹೆಣ್ಣಿಗೆ ಆ ಕಾಲದಲ್ಲಿ ಯಾವ ಸ್ಥಾನಮಾನ ಇತ್ತು ಎನ್ನುವುದನ್ನು ಊಹಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಅಂತಹ ಕಠಿಣ ವ್ಯವಸ್ಥೆಯಲ್ಲಿ ಸ್ತ್ರೀಕುಲದ ಅಸ್ಮಿತೆಯನ್ನು ಉಳಿಸಲು ಆದರ್ಶಕ್ಕಾಗಿ ಒಂದು ವ್ಯವಸ್ಥೆಯನ್ನೇ ಧಿಕ್ಕರಿಸಿ ಬಂದಳು. ಸಾಮಾಜಿಕ ಮತ್ತು ರಾಜಪ್ರಭುತ್ವ ಎರಡನ್ನೂ ವಿರೋಧಿಸಿದ ಅಕ್ಕನ ಇಡೀ ಬದುಕೇ ಹೋರಾಟದ ಹಾದಿಯಾಗಿತ್ತು. ಈ ಹೋರಾಟ ಕೇವಲ ತನಗಾಗಿ ಅಲ್ಲ. ಇಡೀ ಹೆಣ್ಣುಸಂಕುಲಕ್ಕಾಗಿಯೇ ಆಕೆಯ ಹೋರಾಟ ಮೀಸಲಿತ್ತು ಎಂದರೆ ತಪ್ಪಿಲ್ಲ ಎಂದರು.
ಬಸವಾದಿ ಶರಣರ ಸಮಕಾಲೀನ ಶರಣೆಯಾದ ಅಕ್ಕನ ಕಾಲ. ಈಗಿನ ಮಲೆನಾಡಿನ ಬಳ್ಳಿಗಾವಿಯ ಉಡುತಡಿಯ ಅಕ್ಕರೆಯ ಮಹಾಬೆರÀಗು ಈ ಅಕ್ಕ. ಶಿವನ ಆರಾಧಕ ಧಾರ್ಮಿಕ ಕುಟುಂಬವಾದ್ದರಿಂದ ಸಹಜವಾಗಿ ಈಕೆಯ ಮೇಲೆ ಧಾರ್ಮಿಕ ಪ್ರಭಾವ ಹೆಚ್ಚಾಗಿ ಬಾಲ್ಯ ಮುಗಿದು ಯೌವ್ವನಾವಸ್ಥೆಗೆ ಬಂದಾಗ ತನ್ನನ್ನು ಕೌಶಿಕ ಮದುವೆಯಾಗಲು ಇಷ್ಟಪಟ್ಟಾಗ ಅನೇಕ ಷರತ್ತುಗಳೊಂದಿಗೆ ವಿವಾಹವಾಗಿ ಮುಂದೆ ಅವನ್ನು ಮುರಿದ ಕೌಶಿಕನನ್ನು ಜತೆಗೆ ಮನೆಯನ್ನೇ ತೊರೆದ ಅಕ್ಕ ಉಡುತಡಿ ಬಿಟ್ಟು ಕಲ್ಯಾಣದ ಕಡೆಗೆ ಹೊರಡುತ್ತಾಳೆ. ಸಂಸಾರವೇ ಬೇಡ ಎಂದು ತನ್ನ ಕೇಶರಾಶಿಯನ್ನೇ ವಸ್ತ್ರವನ್ನಾಗಿ ಮಾಡಿಕೊಂಡು ಹೊರಟಾಗ ಹಾದಿಯಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾಳೆ. ಈ ಕಷ್ಟದ ಹಾದಿಯಲ್ಲಿ ತನ್ನೊಂದಿಗಿದ್ದದ್ದು ಚನ್ನಮಲ್ಲಿಕಾರ್ಜುನ ಎನ್ನುವ ಅಲೌಕಿಕ ಶಕ್ತಿ ಮಾತ್ರ ಎಂದು ಆಕೆ ನಂಬಿ ನಡೆಯುತ್ತಾಳೆ. ಕೊನೆಗೆ ಕಲ್ಯಾಣದ ಅನುಭವ ಮಂಟಪದ ದಾರಿಯಲ್ಲಿ ಕಿನ್ನರಿ ಬ್ರಹ್ಮಯ್ಯನ ಪರೀಕ್ಷೆಗೆ ಒಳಪಟ್ಟು ನಂತರ ಅನುಭವ ಮಂಟಪದ ಪ್ರವೇಶಕ್ಕೆ ಅಲ್ಲಮಪ್ರಭುಗಳು ಅಕ್ಕನ ವೈರಾಗ್ಯದ ಗಟ್ಟಿನಿಲುವು ಪರೀಕ್ಷಿಸಲು ತನ್ನ ಗಂಡ ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದಾಗ ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ನನ್ನ ಗಂಡ ಎಂಬ ಮಾತಿನ ಮೂಲಕ ಉತ್ತರ ಕೊಟ್ಟಾಗ ಇಡೀ ಅನುಭವ ಮಂಟಪದಲ್ಲಿ ಸೇರಿದ್ದ ಶರಣಗಣ ನಿಬ್ಬೆರಗಾಗುತ್ತದೆ. ಚೆನ್ನಮಲ್ಲಿಕಾರ್ಜುನನನ್ನು ತಾನು ಮಾನಸಿಕವಾಗಿ ಒಪ್ಪಿಕೊಂಡಿದ್ದೇನೆ. ಹಾಗಾಗಿ ಲೋಕದ ಗೊಡವೆ ಬೇಡ ಎನ್ನುವ ಪ್ರಶ್ನೆ-ಉತ್ತರ ನಡೆದಿರುತ್ತದೆ. ಅಕ್ಕ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಸೈ ಎನಿಸಿಕೊಳ್ಳುತ್ತಾಳೆ. ಹೀಗೆ ಅಕ್ಕ ಅನುಭವ ಮಂಟಪದ ಕಣ್ಮಣಿಯಾಗಿ ಶರಣರೊಂದಿಗೆ ನೆಲೆ ನಿಂತು ವಾದ ಪ್ರತಿವಾದಗಳ ಮೂಲಕ ಅನೇಕ ವಚನಗಳನ್ನು ರಚಿಸುತ್ತಾಳೆ. ಅವಿರಳಜ್ಞಾನಿ ಎಂಬ ಬಿರುದಿಗೆ ಭಾಜನರಾದ ಚೆನ್ನಬಸವಣ್ಣನವರೇ ಅಕ್ಕನ ವಚನಗಳನ್ನು ಮೆಚ್ಚಿದ ಉದಾಹರಣೆ ಇದೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸ್ತ್ರೀಕುಲಕ್ಕೆ 12ನೇ ಶತಮಾನ ಅಕ್ಕನ ಮೂಲಕ ಒಂದು ಬಳುವಳಿಯಾಗಿ ಕೊಟ್ಟಿತೆಂದರೆ ಅತಿಶಯೋಕ್ತಿಯಾಗದು. ಅಕ್ಕನ ವ್ಯಕ್ತಿತ್ವವನ್ನು ಕುರಿತು ಅಲ್ಲಮಪ್ರಭುಗಳೇ ತಲೆಬಾಗಿದರೆಂದರೆ ಎಂತಹ ನಿಲುವು ಆಕೆಯದಾಗಿರಬೇಕು. ಅಕ್ಕನ ವ್ಯಕ್ತಿತ್ವ ವರ್ಣಿಸಲು ಬಣ್ಣಿಸಲು ಪದಗಳು ಸಾಲವು. ಅಕ್ಕ ನಮಗೆಲ್ಲ ಮಾದರಿ ಎಂದು ವಿಶ್ಲೇಷಿಸುತ್ತ ಅಕ್ಕನ ಅರಿವನ್ನು ಲಿಂಗಭೇದವಿಲ್ಲದೆ ತಿಳಿದುಕೊಳ್ಳಬೇಕೆಂದು ಸಲಹೆ ಮಾಡಿದರು.
ಸಮ್ಮುಖ ವಹಿಸಿದ್ದ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಜಗತ್ತಿನ ಮೊಟ್ಟಮೊದಲ ಸಂಸತ್ ಅಥವಾ ಮೊದಲ ಪಾರ್ಲಿಮೆಂಟ್ ಅಂದರೆ ಅನುಭವ ಮಂಟಪ. ಅಲ್ಲಿಗೆ ಅತ್ಯಂತ ಚಿಕ್ಕವಯಸ್ಸಿನ ಅಕ್ಕಮಹಾದೇವಿ ಬರಲು ಕಾರಣ ಆಕೆಗೆ ದಿವ್ಯಜ್ಞಾನ ಪ್ರಾಪ್ತವಾಗಿತ್ತು. ಈ ಜೀವನ ಯಾವುದರಿಂದ ಬಂದಿತ್ತೆಂದರೆ ಗರ್ಭಸಂಸ್ಕಾರದ ಬಲದಿಂದ. ಅಕ್ಕಮಹಾದೇವಿ ಗರ್ಭದಲ್ಲಿ ತನ್ನ ತಾಯಿ ಗುರುಗಳಿಂದ ಗರ್ಭಸಂಸ್ಕಾರ ದೀಕ್ಷೆ ಪಡೆದಿದ್ದರಿಂದ ಶಿವಸಂಪನ್ನ ಸಾಕ್ಷಾತ್ಕಾರವಾಗಿ ಆಕೆ ಶರಣೆಯರಲ್ಲಿ ಶಿರೋಮಣಿಯಾಗಿ ನಮ್ಮ ಮುಂದಿದ್ದಾಳೆ. ಆಕೆಯ ಅನೇಕ ವಚನಗಳು ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ದಾರಿದೀಪಗಳಾಗಿವೆ ಎಂದು ನುಡಿದರು.
ಸಾನ್ನಿಧ್ಯ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಕಾರಣ ನಾವೇನು ಜಗನ್ಮಾತೆ ಮಹಾದೇವಿ ಅಕ್ಕ ಅಂತ ಕರಿತೇವಲ್ಲ ಆಕೆಯ ಜಯಂತಿಗೆ ನೀವೆಲ್ಲ ಸಾಕ್ಷಿಯಾಗಿರೋದು ವಿಶೇಷ. ಒಬ್ಬ ಹೆಣ್ಣುಮಗಳು ತನ್ನ ಜೀವಿತಾವಧಿಯಲ್ಲಿ ಜೀವನದಲ್ಲಿ ಪರಮಾನಂದ ಇದೆ ಎಂದು ನಡೆದುಕೊಂಡ ವ್ಯಕ್ತಿತ್ವ ಅದು ಅಕ್ಕಮಹಾದೇವಿ ಮಾತ್ರ. ಅಕ್ಕ ಪ್ರಕೃತಿ ಧರ್ಮಪಾಲಕಿ. ಇಡೀ ಜಗತ್ತು ಅಕ್ಕನ ವ್ಯಕ್ತಿತ್ವಕ್ಕೆ ಗೌರವ ಕೊಡಬೇಕಿದೆ. ಆದರಣೀಯ ಸ್ಥಾನ ನೀಡಬೇಕಿದೆ. ಅನುಭವ ಮಂಟಪದಲ್ಲಿ ಎದುರಾದ ಪ್ರಶ್ನೆಗಳಿಗೆ ಧೀರೋದಾತ್ತ ಉತ್ತರ ನೀಡುತ್ತ ಸಾಗಿದ ಪರಿ ಊಹೆಗೆ ನಿಲುಕದ್ದು. ಅಕ್ಕನ ಶ್ರೇಷ್ಠ ವ್ಯಕ್ತಿತ್ವ ಮತ್ತೆ ಮತ್ತೆ ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳಬೇಕಿದೆ. ಆಕೆಯ ಬಗ್ಗೆ ಹೇಳುತ್ತ ಹೋದರೆ ನಾಲಗೆ ಸೋಲುತ್ತದೆ. ಅಂತಹ ಆಧ್ಯಾತ್ಮಲೋಕದ ಮುಕುಟಮಣಿ ಎಂದು ಸ್ಮರಿಸಿದ ಶ್ರೀಗಳು, ನಾಳೆ ಇದೇ ರೀತಿಯ ಮತ್ತೊಬ್ಬ ಶಿವಯೋಗಿ ಪರಂಪರೆಯ ಅತ್ಯದ್ಭುತ ಸಾಧಕರಾದ ಅಥಣಿ ಮುರುಘೇಂದ್ರ ಶಿವಯೋಗಿಗಳವರ 105ನೇ ಸ್ಮರಣೋತ್ಸವವಿದೆ. ಅವರು ಜಗದ್ಗುರು ಪದವಿ ಮೀರಿದ ವ್ಯಕ್ತಿತ್ವದವರು. ಈ ಎಲ್ಲ ಮಹನೀಯರ ವಿಚಾರಧಾರೆಗಳು ಮನನ ಮಾಡಿಕೊಂಡಲ್ಲಿ ಸಾರ್ಥಕ ಬದುಕು ನಡೆಸಲು ಸಹಾಯವಾಗುತ್ತದೆಂದು ನುಡಿದರು.
ಈ ಸಂದರ್ಭದಲ್ಲಿ ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ಕಲ್ಕೆರೆಯ ಪೂರ್ಣಾನಂದರು, ಹೊಳಲ್ಕೆರೆಯ ತಿಪ್ಪೇರುದ್ರಸ್ವಾಮಿ, ನಾಗೇನಹಳ್ಳಿಯ ಗೋವಿಂದ ಸ್ವಾಮೀಜಿ ಸೇರಿದಂತೆ ಬಾಲ್ಯವಿವಾಹ ವಿರೋಧಿ ಸಮಿತಿಯ ಅಧ್ಯಕ್ಷೆ ಡಿ.ಎಸ್.ಹಳ್ಳಿ ಕವಿತಾ ಹನುಮಂತರೆಡ್ಡಿ, ರೈತಸಂಘದ ಮುಖಂಡರಾದ ಶಾಂತಮ್ಮ, ಅನ್ನಪೂರ್ಣ ಸಜ್ಜನ್, ಡಾ|| ದೊಡ್ಡಮಲ್ಲಯ್ಯ, ಜಿ.ಟಿ. ನಂದೀಶ್, ಟಿ.ಪಿ. ಜ್ಞಾನಮೂರ್ತಿ, ಬಸವರಾಜ ಕಟ್ಟಿ, ನೀಲಮ್ಮ, ಕವಿ ಗಂಗಾಧರಪ್ಪ, ಕಣಿವೆಮಾರಮ್ಮ ಸಂಘದ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಸಮಾಜಗಳ, ಸಂಘ-ಸಂಸ್ಥೆಗಳ ಅನೇಕ ಪದಾಧಿಕಾರಿಗಳು, ಮಹಿಳಾಪರ ಸಂಘಟನೆಗಳ ಪ್ರತಿನಿಧಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಮಹಿಳಾ, ಪುರುಷ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.
ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಜಮುರಾ ಕಲಾವಿದ ಉಮೇಶ್ ಪತ್ತಾರ್ ಅಕ್ಕಮಹಾದೇವಿಯವರ ವಚನ ಪ್ರಾರ್ಥನೆ ಮಾಡಿದರು. ಅಧ್ಯಾಪಕಿ ಡಾ. ಸ್ನೇಹಲತಾ ಸ್ವಾಗತಿಸಿದರು. ಅಧ್ಯಾಪಕಿ ಪೂಜಾ ಕಾರ್ಯಕ್ರಮ ನಿರೂಪಿಸಿ ಶರಣು ಸಮರ್ಪಣೆ ಮಾಡಿದರು.























