ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ಚಿತ್ರದುರ್ಗ ಇತಿಹಾಸ ಸಂಶೋಧನೆಗೆ ಹುಲ್ಲೂರು ಶ್ರೀನಿವಾಸ ಜೋಯಿಸರ ಕೊಡುಗೆ ದೊಡ್ಡದು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರಾದ ಡಾ.ಲಕ್ಷ್ಮಣ್ ತೆಲಗಾವಿ ತಿಳಿಸಿದರು.
ರೇಣುಕಾ ಪ್ರಕಾಶನ, ಚಿತ್ರದುರ್ಗ ಇತಿಹಾಸ ಕೂಟ, ಸಂಶೋಧನ ತಂಡ, ರಾಜಾವೀರ ಮದಕರಿನಾಯಕ ಸಾಂಸ್ಕøತಿಕ ಬಳಗದ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಏರ್ಪಡಿಸಲಾಗಿದ್ದ ಇತಿಹಾಸ ಸಂಶೋಧನ ಪ್ರಸಕ್ತ ಹುಲ್ಲೂರು ಶ್ರೀನಿವಾಸ ಜೋಯಿಸ ಸ್ಮಾರಕ ಉಪನ್ಯಾಸ ಮಾಲೆಯಲ್ಲಿ ಜೋಯಿಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
29-3-1892 ರಂದು ಜನಿಸಿದ ಹುಲ್ಲೂರು ಶ್ರೀನಿವಾಸ ಜೋಯಿಸಲು 8-11-1956 ರಲ್ಲಿ ನಿಧನರಾದರು. 65 ವರ್ಷಗಳ ಕಾಲ ಬದುಕಿದ್ದ ಅವರು 34 ವರ್ಷಗಳನ್ನು ಇತಿಹಾಸ, ಸಂಶೋಧನೆಗಾಗಿಯೇ ಸವೆಸಿದರು. ಹಲವಾರು ಗ್ರಂಥಗಳು ಇವರಿಗೆ ಸಮರ್ಪಣೆಯಾಗಿವೆ. ತ.ರಾ.ಸು.ರವರು ಜೋಯಿಸರ ಜೊತೆ ಹತ್ತಿರದ ಸಂಬಂಧವಿಟ್ಟುಕೊಂಡಿದ್ದರು. ಉನ್ನತ ಸ್ಥಾನಮಾನಗಳನ್ನು ಪಡೆದಿದ್ದರು ಅವರ ಬದುಕು ತುಂಬಾ ಸರಳವಾಗಿತ್ತೆಂದು ಸ್ಮರಿಸಿದರು.
ಸರ್ಕಾರಿ ನೌಕರಿಗೆ ರಾಜಿನಾಮೆಯಿತ್ತು ಚಿತ್ರದುರ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದ ಹುಲ್ಲೂರು ಶ್ರೀನಿವಾಸ ಜೋಯಿಸರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆವಾಸವನ್ನು ಅನುಭವಿಸಿದರು.
ರಂಗಯ್ಯನಬಾಗಿಲು ಬಳಿಯಿರುವ ಪ್ರಾಚ್ಯವಸ್ತು ಸಂಗ್ರಹಾಲಯದ ಸಂಸ್ಥಾಪಕರೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಕರ್ನಾಟಕದ ಶ್ರೇಷ್ಟ ಇತಿಹಾಸಕಾರರಲ್ಲಿ ಹುಲ್ಲೂರು ಶ್ರೀನಿವಾಸ ಜೋಯಿಸಲು ಪ್ರಮುಖರು. ಸ್ವಾತಂತ್ರ್ಯ ಪ್ರೇಮಿಯಾಗಿದ್ದ ಇವರು ಗಾಂಧಿ ಅನುಯಾಯಿಯಾಗಿದ್ದರು. ಇವರ ಗಂಡುಗಲಿ ಕುಮಾರರಾಮ ಕಾದಂಬರಿಯಾಗಿದೆ. ಶಾಸನ, ಇತಿಹಾಸ, ಜಾನಪದ ಹೀಗೆ ನಾಲ್ಕು ಪ್ರಕಾರಗಳಲ್ಲಿ ಇವರ ಸೇವೆ ಅನನ್ಯ. ಚಿತ್ರದುರ್ಗದ ಬಖ್ಯೆರು ಬಗ್ಗೆ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಮೂರು ತಿಂಗಳ ಕಾಲ ಹೈದರಾಲಿ ಚಿತ್ರದುರ್ಗದ ಕೋಟೆ ಮೇಲೆ ದಾಳಿಯಿಡುತ್ತಾನೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದಂತೆ ಮೂಲ ದಾಖಲಾತಿಗಳನ್ನು ಸಂಗ್ರಹಿಸಿ ಯಥಾವತ್ತಾಗಿ ಪ್ರಕಟಿಸಿದವರು ಹುಲ್ಲೂರು ಶ್ರೀನಿವಾಸ ಜೋಯಿಸರು ಎಂದು ಗುಣಗಾನ ಮಾಡಿದರು.
ವಿಶ್ರಾಂತ ಜಂಟಿ ನಿರ್ದೇಶಕ ಟಿ.ವಿ.ಸುರೇಶ್‍ಗುಪ್ತ ಮಾತನಾಡಿ ಇತಿಹಾಸ ಕ್ಷೇತ್ರ ಕುರಿತು ಬರೆಯುವವರು ಸಾಕಷ್ಟ್ರು ಕಾರ್ಯಕ್ಷೇತ್ರದ ಕೆಲಸ ಮಾಡಬೇಕು. ಹುಲ್ಲೂರು ಶ್ರೀನಿವಾಸ ಜೋಯಿಸರು ಮುನ್ನೂರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಎಲ್ಲದಕ್ಕೂ ಅವರ ಉತ್ತರ ದಾಯಿತ್ವವಿದೆ. ವಕೀಲ ವೃತ್ತಿಯಲ್ಲಿ ತೊಡಗಿದ್ದ ಜೋಯಿಸರಿಗೆ ಸಾಕಷ್ಟು ಕಕ್ಷಿದಾರರಿದ್ದರು. ತಮ್ಮ ಬಳಿ ಬರುತ್ತಿದ್ದ ಕಕ್ಷಿದಾರರುಗಳು ಇತಿಹಾಸ ಪಾತ್ರಧಾರಿಗಳಾಗಿದ್ದರೆಂದು ಒಂದು ಕಡೆ ಬರೆದುಕೊಂಡಿದ್ದಾರೆ. ಪ್ರಾಣಿ ದಯೆ ಅವರಲ್ಲಿತ್ತು.
ಬರವಣಿಗೆಯಲ್ಲಿ ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ. ಕಟು ಸತ್ಯವನ್ನೇ ಬರೆಯುತ್ತೇನೆಂದು ಹೇಳುತ್ತಿದ್ದರು. ದಿಟ್ಟತನ ವೈಶಿಷ್ಠ್ಯಪೂರ್ಣ ಗುಣವುಳ್ಳವರಾಗಿದ್ದ ಹುಲ್ಲೂರು ಶ್ರೀನಿವಾಸ ಜೋಯಿಸರು ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಭಾಗವಹಿಸಿ ಇಂದಿಗೂ ಎಲ್ಲರ ಮನದಲ್ಲಿ ಮಹಾನ್ ಚೇತನರಾಗಿ ಉಳಿದಿದ್ದಾರೆಂದರು.
ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡುತ್ತ ಚಿತ್ರದುರ್ಗದ ಇತಿಹಾಸ ಸಂಶೋಧನೆಗೆ ಆಯಾಮ ಕೊಟ್ಟವರು ಹುಲ್ಲೂರು ಶ್ರೀನಿವಾಸ ಜೋಯಿಸರು. ಚಿತ್ರದುರ್ಗದ ಬೆಟ್ಟ, ಗುಡ್ಡ, ಶಾಸನಗಳನ್ನು ಅಧ್ಯಯನ ಮಾಡದೆ ಹೋಗಿದ್ದರೆ ಇತಿಹಾಸ ನಿರ್ನಾಮವಾಗಿರುತ್ತಿತ್ತು. ಹಾಗಾಗಿ ಜೋಯಿಸರು, ಲಕ್ಷ್ಮಣ ತೆಲಗಾವಿರವರು ಚಿತ್ರದುರ್ಗದ ಅಮೂಲ್ಯ ರತ್ನಗಳು ಎಂದು ಹೆಮ್ಮೆಯಿಂದ ನುಡಿದರು.
ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಮಾತನಾಡಿ ಕರ್ನಾಟಕದ ಶ್ರೇಷ್ಟ ವಿದ್ವಾಂಸರಲ್ಲಿ ಹುಲ್ಲೂರು ಶ್ರೀನಿವಾಸ ಜೋಯಿಸರು ಒಬ್ಬರು. ಇತಿಹಾಸ ಸಂಶೋಧನೆ ಎನ್ನುವುದು ದುರ್ಗಮವಾದುದು. ಅನೇಕ ನೋವು-ಅವಮಾನ, ಕಷ್ಟ ಎಲ್ಲವನ್ನು ಸಹಿಸಿಕೊಳ್ಳಬೇಕು. ನಿಸ್ಪಕ್ಷವಾಗಿ ಕೆಲಸ ಮಾಡಿದಾಗ ಯಾವುದೇ ಸಂಶೋಧನೆಯಾಗಲಿ ಗೆಲ್ಲುತ್ತದೆ. ದುರ್ಗದ ಕಲ್ಲುಬಂಡೆಗಳ ಮೇಲೆ ಬಹುದೊಡ್ಡ ಹುಚ್ಚಿಟ್ಟುಕೊಂಡು ಹುಲ್ಲೂರು ಶ್ರೀನಿವಾಸ ಜೋಯಿಸರು ಕೆಲಸ ಮಾಡಿದ್ದಾರೆ.
ಅನೇಕ ವಿದ್ವಾಂಸರುಗಳನ್ನು ಕೊಟ್ಟ ನಾಡು ಚಿತ್ರದುರ್ಗ. ಇತಿಹಾಸ ಸಂಶೋಧನ ಕಾರ್ಯಚಟುವಟಿಕೆಗಳನ್ನು ಅಧ್ಯಯನ ಮಾಡುವುದು ಸಂಶೋಧನೆ. ಚಿತ್ರದುರ್ಗದಲ್ಲಿ ಹುಲ್ಲೂರು ಶ್ರೀನಿವಾಸ ಜೋಯಿಸರ ಪುತ್ಥಳಿ/ಪ್ರತಿಮೆಯಾಗಬೇಕು. ಕನಿಷ್ಟ ಪಕ್ಷ ಯಾವುದಾದರೂ ಒಂದು ರಸ್ತೆಗೆ ಜೋಯಿಸರ ಹೆಸರನ್ನಾದರೂ ಇಡಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳನ್ನು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ರಾಜಾಜಯಚಂದ್ರ ವೀರಮದಕರಿನಾಯಕ, ಮೃತ್ಯುಂಜಯ, ನಿರಂಜನದೇವರಮನೆ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣಮತಿ ಮಹಂತೇಶ್ ಸೇರಿದಂತೆ ಹುಲ್ಲೂರು ಶ್ರೀನಿವಾಸ ಜೋಯಿಸರ ಅಪಾರ ಅಭಿಮಾನಿಗಳು ಉಪನ್ಯಾಸ ಮಾಲೆಯಲ್ಲಿ ಭಾಗವಹಿಸಿದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್