ಜನಪ್ರಿಯ ಕ್ವಿಜ್ ಕಾರ್ಯಕ್ರಮ ಕೌನಬನೆಗಾ ಕರೋಡ್ ಪತಿ ನಲ್ಲಿ ಸಸ್ಯಾಹಾರ ಮತ್ತು ಪ್ರಾಣಿ ಹಿಂಸೆಯ ಕುರಿತು ನಡೆದ ಚರ್ಚೆ ಗಮನಸೆಳೆದಿದೆ. ಸ್ಪರ್ಧಿಯೊಬ್ಬರು ಹಾಲು, ಚರ್ಮ ಹಾಗೂ ರೇಷ್ಮೆ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹೇಳಿದ ಮಾತು ನಿರೂಪಕ ಅಮಿತಾಭ್ ಬಚ್ಚನ್ ಅವರನ್ನು ಆಶ್ಚರ್ಯಚಕಿತರನ್ನಾಗಿಸಿದೆ.
ಕಾರ್ಯಕ್ರಮದ ವೇಳೆ ಸಿದ್ಧಾರ್ಥ್ ಶರ್ಮ ಎಂಬ ಸ್ಪರ್ಧಿ, ಕಳೆದ ಏಳು ವರ್ಷಗಳಿಂದ ತಾನು ಹಾಲು ಕುಡಿಯುವುದಿಲ್ಲ ಎಂದು ಹೇಳಿದ್ದು, ಹಾಲು ಮೂಲತಃ ಕರುಗಳಿಗೆ ಉದ್ದೇಶಿತವಾದುದು ಎಂದು ಅಭಿಪ್ರಾಯಪಟ್ಟರು. ಹೀಗಾಗಿ ಹಾಲು ಹಾಗೂ ಅದರ ಉತ್ಪನ್ನಗಳನ್ನು ಬಳಸುವುದು ಪ್ರಾಣಿ ಹಿಂಸೆಗೆ ಸಮಾನ ಎಂದು ತಿಳಿಸಿದ್ದಾರೆ.
ಇದಕ್ಕೆ ಪೂರಕವಾಗಿ, ಸಿದ್ಧಾರ್ಥ್ ಅವರ ಪತ್ನಿಯೂ ತಮ್ಮ ಪತಿ ಚರ್ಮದ ಶೂಗಳು ಸೇರಿದಂತೆ ಯಾವುದೇ ಪ್ರಾಣಿ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ಹೇಳಿದರು. ಅಲ್ಲದೆ, ರೇಷ್ಮೆ ಹುಳುಗಳನ್ನು ಕೊಂದು ನೂಲು ತೆಗೆಯುವ ಪ್ರಕ್ರಿಯೆ ಇರುವುದರಿಂದ ರೇಷ್ಮೆ ಬಟ್ಟೆಗಳನ್ನೂ ತ್ಯಜಿಸಿದ್ದಾರೆ ಎಂದು ವಿವರಿಸಿದರು.
ಈ ವಿಚಾರಗಳನ್ನು ಕೇಳಿದ ಅಮಿತಾಭ್ ಬಚ್ಚನ್, “ಇದು ನನಗೆ ಹೊಸ ವಿಚಾರ. ನೀವು ನನ್ನ ಕಣ್ಣು ತೆರೆಸಿದ್ದೀರಿ. ಈ ಬಗ್ಗೆ ನಾನು ಎಂದಿಗೂ ಯೋಚಿಸಿರಲಿಲ್ಲ” ಎಂದು ಪ್ರತಿಕ್ರಿಯಿಸಿದರು. ಜೊತೆಗೆ, ಮನೆಗೆ ತೆರಳಿ ಕುಟುಂಬ ಸದಸ್ಯರೊಂದಿಗೆ ಈ ವಿಚಾರ ಹಂಚಿಕೊಳ್ಳುವುದಾಗಿ ಹೇಳಿದರು.ಇದೀಗ 17ನೇ ಸೀಸನ್ ನಡೆಸುತ್ತಿರುವ ‘ಕೆಬಿಸಿ’ ಕಾರ್ಯಕ್ರಮವು ವಿವಿಧ ಸಾಮಾಜಿಕ ವಿಷಯಗಳ ಚರ್ಚೆಗೆ ವೇದಿಕೆಯಾಗಿ ಮುಂದುವರಿಯುತ್ತಿರುವುದು ಗಮನಾರ್ಹವಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












