ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ನಗರಸಭೆ ಸುಪರ್ದಿಗೆ ಸೇರಿರುವ ಇಂದಿರಾ ಷಾಪಿಂಗ್ ಕಾಂಪ್ಲೆಕ್ಸ್ ನ ಸುಮಾರು 94 ಮಳಿಗೆಗಳು ಶಿಥಿಲಗೊಂಡಿದ್ದು ಮೆಲ್ಚಾವಣಿ ಅಸ್ಥಿಪಂಜರದಂತ್ತಾಗಿದ್ದು ಕೆಲವು ಕಡೆ ಗೋಡೆಗಳು ಬಿರುಕು ಬಿಟ್ಟು ಅಪಾಯ ಸ್ಥಿತಿಯಲ್ಲಿವೆ.
ಇಂತಹ ಅಪಾಯ ಸ್ಥಿತಿಯಲ್ಲಿರುವ ಮಳಿಗೆಗಳನ್ನು ನೆಲಸಮ ಮಾಡಲು ಮುಂದಾಗಿರುವ ಪೌರಾಯುಕ್ತೆ ಡಾ.ನಾಗವೇಣಿ ಅವರ ನಿಟ್ಟ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚಿಗೆ ವ್ಯಕ್ತವಾಗಿದೆ.
ಮಾ.25 ರಂದು ನೂರಾರು ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮಳಿಗೆಗಳನ್ನು ತೆರವಿನ ಕಾರ್ಯಾಚರಣೆ ನಡೆಸಲಾಗಿತ್ತು. ಮಳಿಗೆಗಳನ್ನು ಬಾಡಿಗೆ ಪಡೆದವರು ಯಾರೂ ವ್ಯಾಪಾರ ಮಾಡುತ್ತಿಲ್ಲ. ನಗರಸಭೆಯಿಂದ ಕಡಿಮೆಗೆ ಬಾಡಿಗೆ ಪಡೆದು ಬೇರೆಯವರಿಗೆ 30 ರಿಂದ 40 ಸಾವಿರಕ್ಕೆ ಬಾಡಿಗೆ ನೀಡಿರುವ ಆರೋಪಗಳು ಸಹ ಕೇಳಿ ಬಂದಿವೆ.
ಸುಮಾರು 50 ವರ್ಷಗಳ ಹಳೆಯ ಮಳಿಗೆಗಳು ಬೀಳುವ ಸ್ಥಿತಿ ತಲುಪಿವೆ. ದಿನಕ್ಕೆ 10 ರಿಂದ 20 ಸಾವಿರ ವ್ಯಾಪಾರ ಮಾಡಿಕೊಳ್ಳುವ ಲಾಭದಿಂದ ಮಳಿಗೆಗಳ ಖಾಲಿ ಮಾಡಲು ಬಾಡಿಗೆದಾರರು ಒಪ್ಪುತ್ತಿಲ್ಲ. ನಗರಸಭೆಯಿಂದ ನೋಟಿಸ್ ಕೊಟ್ಟ ತಕ್ಷಣವೇ ನ್ಯಾಯಾಲಯಕ್ಕೆ ಹೋಗುವ ಪರಿಪಾಟು ಬೆಳೆಸಿಕೊಂಡಿದ್ದಾರೆ.
ಸುಮಾರು 11 ವರ್ಷಗಳಿಂದ ಕೋರ್ಟ್ ನಡೆಯುತ್ತಿದೆ. ಈಗಾಗಲೇ ಮಳಿಗೆಗಳ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಂಡಿರುವ ನ್ಯಾಯಾಲಯ, ಷಾಪಿಂಗ್ ಕಾಂಪ್ಲೆಕ್ಸ್. ಗಳನ್ನ ಕೂಡಲೇ ಖಾಲಿ ಮಾಡಿಸಿ ನೆಲಸಮಗೊಳಿಸಲು ಕ್ರಮ ವಹಿಸುವಂತೆ ನಗರಸಭಾ ಆಡಳಿತಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭ ಮಾಡಲಾಗಿದೆ.




















