ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 : ರಂಗಭೂಮಿ ನಿಂತ ನೀರಲ್ಲ ಹರಿಯುವ ನದಿಯಂತೆ, ಪ್ರತಿಯೊಬ್ಬರ ದೈನಂದಿನ ಜೀವನವೂ ಒಂದು ಕಲೆಯಾಗಿದೆ ಎಂದು ನಿನಾಸಂ ಪದವಿಧರ ರಾಮುಭೋದೆ ತಿಳಿಸಿದರು.

ನಗರದ ವೆಸ್ಟ್ರನ್ ಹಿಲ್ಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಭೂಮಿರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು.
ಇಂದಿನ ಸಮಾಜ ಡಿಜಿಟಲ್ ಸಮಾಜವಾಗಿದ್ದು, ಮಾನಸೀಕವಾಗಿ, ಸಂವೇದನಾ ಗ್ರಹಿಕೆ ಅರ್ಥೈಸಿಕೊಂಡು ಮಕ್ಕಳಿಗ ಪಾಠ ಮಾಡುವುದು ಕೂಡ ಬಹುಮುಖ್ಯವಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ರಂಗಕಲೆ ನಶಿಸಿ ಹೋಗುತ್ತಿದೆ. ಆಧುನಿಕ ಭರಾಟೆಯಲ್ಲಿ ನಟನೆ, ಕಲಾ ಕೌಶಲ್ಯಗಳು ಹಾಗೂ ಪ್ರತಿಭಾವಂತಿಕೆಗೆ ಅವಕಾಶ ಸಿಗಲಾರದೇ ನಶಿಸಿಹೋಗುತ್ತಿವೆ. ಕೆಲವರಿಗೆ ಕಲೆಗೆ ತಕ್ಕ ಅವಕಾಶಗಳು ಸಿಕ್ಕರು ಅರ್ಹತೆಯುಳ್ಳ ಪ್ರತಿಭೆಗಳು ಮುನ್ನಾಲೆಗೆ ಬಾರದಂತ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಎಸ್.ಸಿದ್ದರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾಟಕಗಳು ತೆರೆಮರೆಗೆ ಸರಿಯುತ್ತಿವೆ. ಚುಟುಕು ಸಿನಿಮಾ, ರೀಲ್ಸ್ ಹಾಗೂ ಮೊಬೈಲ್ ಭರಾಟೆ ಮದ್ಯೆ ನಾಟಕಗಳು, ಮತ್ತು ರಂಗಭೂಮಿ ಕಲೆ ವಿನಾಶದ ಅಂಚಿನಲ್ಲಿವೆ. ಈ ಹಿಂದೆ ಹಬ್ಬ ಹರಿದಿನಗಳಲ್ಲಿ ರಾತ್ರಿಯಿಡೀ ನಾಟಕ ಪ್ರದರ್ಶನ ನಡೆಯುತ್ತಿದ್ದವು. ಊರಿಂದ ಊರಿಗೆ ನೆಂಟರಿಷ್ಟು, ಬಂಧುಗಳು ಎತ್ತಿನಗಾಡಿ ಕಟ್ಟಿಕೊಂಡು ನಾಟಕ ವೀಕ್ಷಿಸುತ್ತಿದ್ದರು. ಬಂಧುಗಳ ಉಭಯ ಕುಶಲೋಪರಿ ವಿಚಾರಿಸುವ ಬಾಂದವ್ಯದ ಸಂಪ್ರದಾಯ ರೂಡಿಯಲ್ಲಿತ್ತು. ಆದರೆ ಇತ್ತೀಚೆಗೆ ಮೊಬೈಲ್ ಘೀಳಿಗೆ ಬಿದ್ದಿರುವ ಯುವ ಸಮಾಜ ರಂಗಭೂಮಿಯತ್ತ ಆಸಕ್ತಿ ತೋರುತ್ತಿಲ್ಲ. ಯುವಕರು ವಿಕೃತಿ ಭಾವವನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ. ದುಶ್ಚಟಕ್ಕೆ ಮಾರು ಹೋಗುತ್ತಿದ್ದಾರೆ. ಹೀಗಾಗಿ ನಾಟಕಗಳನ್ನು ನಟಿಸುವುದಿರಲಿ, ನೋಡುಗರ ಸಂಖ್ಯೆ ಕೂಡ ವಿರಳವಾಗಿದೆ. ರಂಗಭೂಮಿ ಕಲೆ ಕೇವಲ ಅಭಿವೃಚಿವುಳ್ಳವರಿಗೆ ಮಾತ್ರ ಸೀಮಿತವೆಂಬ ಭಾವ ಸೃಷ್ಟಿಯಾಗಿರೋದು ವಿಪರ್ಯಾಸ ಎನಿಸಿದೆ ಎಂದು ತಿಳಿಸಿದರು.
ಹಿನ್ನೆಲೆ ಗಾಯಕ ಮತ್ತು ರಂಗಭೂಮಿ ಕಲಾವಿದ ಡಾ.ಪ್ರಜ್ವಲ್ ಡಾ,ಪ್ರಜ್ವಲ್ ಮಾತನಾಡಿ, ನಟನೆ ಅನ್ನೋದು ಒಂದು ವಿದ್ಯೆ. ಇದರ ಹಿಂದೆ ಸಾಕಷ್ಟು ಕಲಾವಿದರ ಶ್ರಮ ಇರುತ್ತದೆ. ಕಸ ಗೂಡಿಸುವುದರಿಂದ ಹಿಡಿದು, ಬಣ್ಣ ಹಚ್ಚುವುದು ಹಾಗು ಲೈಟಿಂಗ್ ಹಾಕುವ ಕೆಲಸವನ್ನು ಕಲಾವಿದನೇ ಮಾಡುತ್ತಾನೆ. ಈ ಕಲೆಯೊಂದಿಗೆ ಮನದಲ್ಲಿನ ಸ್ವಾರ್ಥ ಹಾಗು ನಾನು ಎಂಬ ಅಹಂ ನಿಗ್ರಹಿಸಲಿದೆ. ನಮ್ಮ ಪ್ರತಿಭೆ ಅನಾವರಣಕ್ಕೆ ರಂಗಭೂಮಿ ಉತ್ತಮ ಅವಕಾಶ ಕಲ್ಪಿಸಿದೆ. ಓರ್ವ ವ್ಯಕ್ತಿ ಹಲವು ಪಾತ್ರಗಳನ್ನು ರಂಗಭೂಮಿಯಲ್ಲಿ ನಿರ್ವಹಿಸಬಹುದು ಎಂದರು.
ವೆಸ್ಟ್ರನ್ ಹಿಲ್ಸ್ ಸಂಸ್ಥೆಯ ಪ್ರಾಚಾರ್ಯರಾದ ಡಾ,ಮಂಜುಳ ಮಾತನಾಡಿ, ನಾಟಕಗಳು ಸಮಾಜವನ್ನು ಸರಿ ದಾರಿಯಲ್ಲಿ ಸಾಗಿಸಲು ಜಾಗೃತಿದಾಯಕ ಆಗಿದ್ದವು. ಆದರೆ ಇತ್ತಿಚೆಗೆ ನಾಟಕಗಳು ಮದ್ಯ ಕರ್ನಾಟಕ ಭಾಗದಲ್ಲಿ ಅಪರೂಪ ಎನಿಸಿವೆ. ಹೀಗಾಗಿ ಬಿಇಡಿ ವಿದ್ಯಾರ್ಥಿಗಳು ಇಂತಹ ಕಲಾ ಕೌಶಲ್ಯಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ಮತ್ತು ರಂಗಭೂಮಿ ಕಲಾವಿದ ಡಾ.ಪ್ರಜ್ವಲ್ ಅವರು ರಂಗ ಗೀತೆಗಳನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ರಂಗ ಸಂದೇಶವನ್ನು ವಾಚಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಬಾದರದಿನ್ನಿ ಆರ್ಟ್ಸ್ ಅಕಾಡೆಮಿಯ ಕಾರ್ಯದರ್ಶಿ ಪ್ರಕಾಶ್ ಬಾದರದಿನ್ನಿ, ಕಲಾವಿದರಾದ ಗುರುಕಿರಣ, ರಾಘವೇಂದ್ರ, ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಮತ್ತಿತರರು ಇದ್ದರು.





















