ಬೆಂಗಳೂರು: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸುವ ವಿಚಾರಕ್ಕೆ ಸರ್ಕಾರ ಮಾಡಿದ್ದ ನಿಯಮದಿಂದ ಪೋಷಕರಂತು ಕಂಗಲಾಗಿದ್ದರು. ಶಾಲೆಗೆ ಸೇರಿಸುವ ಸಮಯಕ್ಕೆ ಮಕ್ಕಳಿಗೆ 6 ವರ್ಷ ತುಂಬಿರಲೇ ಬೇಕಿತ್ತು. ಒಂದೇ ಒಂದು ತಿಂಗಳು ಕಡಿಮೆ ಇದ್ದರು ನೋ ಅಡ್ಮಿಷನ್. ಇದರಿಂದ ಬಹಳಷ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಇದೀಗ ಆ ನಿಯಮದಲ್ಲಿ ಸಡಿಲಿಕೆಯಾಗಿದೆ.
ಈ ನಿಯಮದಿಂದ ಬೇಸತ್ತ ಪೋಷಕರು ಸರ್ಕಾರಕ್ಕೆ ಸಾಕಷ್ಟು ಮನವಿಯನ್ನು ಮಾಡಿದ್ದರು. ಪೋಷಕರ ಮನವಿಯನ್ನು ಪುರಸ್ಕರಿಸಿರುವ ಸರ್ಕಾರ, ಇಂದು 2026-27ನೇ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿ ಪ್ರವೇಶಕ್ಕೆ ವಯಸ್ಸಿನ ಅರ್ಹತಾ ಮಾನದಂಡದಲ್ಲಿ 60 ದಿನಗಳ ಸಡಿಲಿಕೆಯನ್ನು ಘೋಷಣೆ ಮಾಡಿದೆ. ಪ್ರಸಕ್ತ ವರ್ಷಕ್ಕೆ ಅನ್ವಯವಾಗುವಂತೆ ಮಕ್ಕಳ ಶಾಲಾ ಪ್ರವೇಶಕ್ಕೆ ನಿಗದಿಪಡಿಸಿದ್ದ 6 ವರ್ಷಗಳ ವಯೋಮಿತಿಗೆ 60 ದಿನಗಳ ಕಾಲ ವಿನಾಯಿತಿ ನೀಡಲಾಗಿದೆ ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು.

ಈಗ 60 ದಿನಗಳ ಸಡಿಲಿಕೆಯಿಂದಾಗಿ 2020ರ ಜುಲೈ 31ರೊಳಗೆ ಜನಿಸಿರುವ ಮಗುವಿಗೆ ಪ್ರವೇಶ ಸಿಗಲಿದೆ. ಇದರಿಂದ ಬೆಂಗಳೂರಿನ ಮೂರು ಲಕ್ಷಕ್ಕೂ ಅಧಿಕ ಮಕ್ಕಳಿಗೆ ಅನುಕೂಲವಾಗಲಿದೆ. ಹೊಸ ಆದೇಶಕ್ಕೆ ಅನುಗುಣವಾಗಿ ಪ್ರವೇಶ ಸಾಫ್ಟ್ವೇರ್ ನಲ್ಲಿ ಬದಲಾವಣೆಗಳನ್ನು ಮಾಡಲಾಗುವುದು. UKG ಮುಗಿಸಿದರೂ 6 ವರ್ಷ ಪೂರ್ಣಗೊಳ್ಳದ ಮಕ್ಕಳು ಅನಿವಾರ್ಯವಾಗಿ ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಮಗುವಿನ ಮಾನಸಿಕ ಸ್ಥಿತಿಯ ಮೇಲೆ ಹಾಗೂ ಪೋಷಕರ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಹೊಸ ಆದೇಶದಿಂದ ಪೋಷಕರು ಕೊಂಚ ನಿರಾಳರಾದಂತೆ ಆಗಿದೆ.



















