ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಮಾರ್ಚ್. 24 : ಕನ್ನಡ ಸಾಹಿತ್ಯದಲ್ಲಿ ಕೇಳುಗ ಮತ್ತು ಹೇಳುಗ ಸಂಸ್ಕೃತಿಗೆ ಒಂದು ಪರಂಪರೆಯಿದೆ ಎಂದು ಪ್ರಾಂಶುಪಾಲ ಪ್ರೊ. ಕರಿಯಪ್ಪ ಮಾಳಿಗೆ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿಲ್ಲಿ (ಸ್ವಾಯತ್ತ) ಮಂಗಳವಾರ ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಚಳ್ಳಕೆರೆ ಜಾನಪದ ಸಿರಿಯಜ್ಜಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪಠ್ಯಕ್ರಮ ಬೋಧನಾ ಕೌಶಲ ಮತ್ತು ಕನ್ನಡ ಬಳಕೆಯ ನೆಲೆಗಳು ಕುರಿತ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂಪಭಾರತ, ಗದಾಯುದ್ಧ, ಜೈಮಿನಿ ಭಾರತ, ಹರಿಶ್ಚಂದ್ರಕಾವ್ಯ, ಕುಮಾರವ್ಯಾಸ ಭಾರತ ಪಠ್ಯಗಳನ್ನು ನಮ್ಮ ಕಾಲದ ಗುರುಗಳು ಹೇಳುತ್ತಿದ್ದನ್ನು ಕೇಳಿ ಸಾಕಷ್ಟು ಪ್ರಭಾವಿತರಾಗಿದ್ದೆವು. ಆ ಪಠ್ಯ ವಿಷಯಗಳು ಇಂದಿಗೂ ನೆನಪಿನಲ್ಲಿವೆ. ಆದರೆ ಇಂದಿನ ವಿದ್ಯಾರ್ಥಿಗಳು ಬರೀ ಸಾರಾಂಶಕ್ಕೆ ಸೀಮಿತವಾಗಿದ್ದು ಅವುಗಳನ್ನು ಕಲಿಯಲೇಬೇಕಾದ ಅಗತ್ಯವಿದೆ.
ಕನ್ನಡದ ಕಾವ್ಯ ಪಠ್ಯಗಳನ್ನು ಕಲಿಯುವುದೆಂದರೆ ರಸ ಸ್ವಾದದ ಸಂವೇದನೆಗಳು ಹೆಚ್ಚಾಗಿ ನೆನಪಿನ ಶಕ್ತಿ ಹೆಚ್ಚಿಸುವುದಲ್ಲದೆ ಅವು ಅರಿವನ್ನು ವಿಸ್ತರಿಸುತ್ತದೆ. ಆದರೆ ಇಂದಿನ ಪೀಳಿಗೆಯೂ ಅದನ್ನು ಓದುವ ಮತ್ತು ಕೇಳಿಸಿಕೊಳ್ಳುವ ವ್ಯವದಾನವನ್ನು ಕಳೆದುಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಮಹಾಂತೇಶ ಪಾಟೀಲ ಮಾತಾನಾಡಿ ಕನ್ನಡ ಸೀಮೆಯನ್ನು ಗುರುತಿಸಿದ ಕಾವೇರಿಯಿಂದ ಗೋದಾವರಿಗೆ ವಿಸ್ತರಿಸಿದನ್ನು ಹೇಳುವ ವಾಕ್ಯವೂ ಕನ್ನಡಿಗರಿಗೂ ಆಸ್ಮಿತೆಯಾಗಿದೆ. ಪಂಪ, ರನ್ನ, ಜನ್ನ, ರಾಘವಾಂಕ, ಕುಮಾರವ್ಯಾಸ, ಆಂಡಯ್ಯ ಕಾವ್ಯಗಳು ಕನ್ನಡ ಬಳಕೆಯನ್ನು ತಿರುಳ್ಗನ್ನಡದಲ್ಲಿ ಬರೆದು ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ದೇವನೂರು, ಸಿದ್ಧಲಿಂಗಯ್ಯ, ಕೆ.ಬಿ.ಸಿದ್ಧಯ್ಯ ಸೇರಿದಂತೆ ವರ್ತಮಾನದ ಸೃಜನಶೀಲ ಬರಹಗಾರರು ಬಳಸುವ ಭಾಷೆಯೂ ಪ್ರಾದೇಶಿಕ ಆಡುನುಡಿಯನ್ನು ತಮ್ಮ ಸಾಹಿತ್ಯದಲ್ಲಿ ತರುವ ಮೂಲಕ ಕನ್ನಡದಲ್ಲಿ ಭಾಷಾ ಪ್ರಯೋಗಶೀಲತೆಯನ್ನು ಪರಿಚಯಿಸಿದ್ದಾರೆ ಎಂದು ಹೇಳಿದರು.
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಟಿ.ಗಾಯಿತ್ರಮ್ಮ ಮಾತನಾಡಿ, ಕನ್ನಡ ಕಾವ್ಯ ಮತ್ತು ಮಾಧ್ಯಮಗಳಲ್ಲಿ ಭಾಷೆ ಬಳಕೆ ಯಾವ ರೀತಿಯಾಗುತ್ತಿದೆಂಬುದನ್ನು ಸೂಕ್ಷö್ಮವಾಗಿ ಆವಲೋಕಿಸಬೇಕಿದೆ.
ಇಂಗ್ಲೀಷ್ ಭಾಷೆಯೂ ದೇಶದ ಹಲವು ಭಾಷೆಗಳ ಎದುರಾಳಿ ಭಾಷೆಯಾಗಿದ್ದು ಇದೀಗ ಹಿಂದಿ ಹೇರಿಕೆಯೂ ಕನ್ನಡ ಸೇರಿ ಇತರೆ ಭಾಷೆಗಳಿಗೆ ಸಂಕಷ್ಟವನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲಸಕಾರ್ಯಗಳು ಕನ್ನಡ ಕಟ್ಟುವ, ಬೆಳೆಸುವಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಖ್ಯಾತ ವಿಮರ್ಶಕಿ ಡಾ.ಆರ್.ತಾರಿಣಿ ಶುಭದಾಯಿನಿ ಮಾತನಾಡಿ ಎಲ್ಲಾ ಭಾಷೆಗಳನ್ನು ಕಲಿಯುವ ಜೊತೆಗೆ ಕನ್ನಡವನ್ನು ಒತ್ತಾಯಪೂರ್ವಕವಾಗಿ ಅಲ್ಲದೇ ಸಹಜ ಜೀವನದಲ್ಲಿ ತಾನಾಗೆ ಕನ್ನಡದಲ್ಲಿ ಆಲೋಚಿಸುವ, ಕೆಲಸ ಮಾಡುವ, ಮತ್ತು ಸೃಜನಶೀಲವಾಗಿ ಬರೆಯುವುದನ್ನು ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಚಿತ್ತಯ್ಯ ಉಪ್ಪಾರಹಟ್ಟಿ, ಡಾ. ವೇದಾಂತ ಏಳಂಜಿ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಲಕ್ಷ್ಮಿ, ಸಹಾಯಕ ಪ್ರಾಧ್ಯಾಪಕಿ ಪ್ರೊ.ಸಲ್ಮಾ, ಪ್ರೊ, ಗಿರೀಶ್ ಗೌಡ, ಉಪನ್ಯಾಸಕ ಜಿ.ಯಶೋಧರ, ಹನುಮಂತಪ್ಪ, ಪ್ರಾಧ್ಯಾಪಕ ಮಧುಸೂದನ, ಮುರಳಿಧರ ಹಾಜರಿದ್ದರು.


















