ಬೇಸಿಗೆ ಕಾಲದಲ್ಲಿಯೇ ಕರ್ನಾಟಕದಲ್ಲಿ ಮಳೆಯ ಚಟುವಟಿಕೆಗಳು ಜೋರಾಗುತ್ತಿದ್ದು, ಹವಾಮಾನದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಬಂಗಾಳಕೊಲ್ಲಿಯ ಆಂಧ್ರಪ್ರದೇಶ ಕರಾವಳಿ ಸಮೀಪ ಹಾಗೂ ಉತ್ತರ ಭಾರತದ ಭಾಗಗಳಲ್ಲಿ ಉಂಟಾದ ಮೇಲ್ಮೈ ಸುಳಿಗಾಳಿ ಮತ್ತು ಚಂಡಮಾರುತ ಪ್ರಸರಣದ ಪರಿಣಾಮವಾಗಿ ಮಾರ್ಚ್ 23ರಿಂದ 28ರವರೆಗೆ ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು–ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದರ ನಡುವೆಯೇ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾರ್ಚ್ 23 ಮತ್ತು 24ರಂದು ತಾಪಮಾನ ಏರಿಕೆಯಾಗುವ ಸಾಧ್ಯತೆ ಇದ್ದು, ಉಷ್ಣ ಅಲೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಂತರ ಮಾರ್ಚ್ 28ರವರೆಗೆ ಕರಾವಳಿ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಗಾಳಿಯ ವೇಗ ಗಂಟೆಗೆ 40ರಿಂದ 50 ಕಿಲೋಮೀಟರ್‌ವರೆಗೆ ಇರಬಹುದು ಎಂದು ತಿಳಿಸಲಾಗಿದೆ.
ಮುಂದಿನ 48 ಗಂಟೆಗಳವರೆಗೆ ರಾಜ್ಯದ ವಾತಾವರಣದಲ್ಲಿ ಹೆಚ್ಚಿನ ಬದಲಾವಣೆ ಕಾಣಿಸದಿದ್ದರೂ, ಮಾರ್ಚ್ 23ರಿಂದ ಪೂರ್ವ ಮುಂಗಾರು ಮಾರುತಗಳು ಸಕ್ರಿಯವಾಗಲಿವೆ. ಇದರ ಪರಿಣಾಮವಾಗಿ ಬೆಳಗಾವಿ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೋಲಾರ, ರಾಯಚೂರು, ಬಳ್ಳಾರಿ, ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಧ್ಯಂತರವಾಗಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಇದೇ ವೇಳೆ ರಾಮನಗರ, ಮಂಡ್ಯ, ಕೊಪ್ಪಳ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಒಣಹವಾಮಾನ ಮುಂದುವರಿಯಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಸದ್ಯ ಮಳೆಯ ಮುನ್ಸೂಚನೆ ಇಲ್ಲ. ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮುಂದಿನ ಎರಡು ದಿನಗಳವರೆಗೆ ಇದೇ ಸ್ಥಿತಿ ಇರಲಿದೆ. ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.















