ಸುದ್ದಿಒನ್, ಚಿತ್ರದುರ್ಗ: ಅಧಿಕಾರಿಗಳು, ಸಚಿವರು, ಶಾಸಕರ ಹೆಸರಲ್ಲೇ ವಂಚನೆ ಮಾಡುವವರಿದ್ದಾರೆ. ಸ್ವಲ್ಪವೂ ಭಯವೇ ಇಲ್ಲದೆ. ಚಿತ್ರದುರ್ಗದಲ್ಲಿ ಡಿಸಿ, ಎಡಿಸಿ ಹೆಸರನ್ನ ಬಳಸಿಕೊಂಡು ನಗರಾಭಿವೃದ್ಧಿ ಕೋಶದ ಸಿಬ್ಬಂದಿ ಲಕ್ಷ ಲಕ್ಷ ದೋಚಿದ್ದಾರೆ. ಆ ಪ್ರಕರಣ ಹೊರಬಂದು ಈಗ ಜೈಲಿನಲ್ಲಿ ಕೂರುವಂತಾಗಿದೆ ಆ ಐವರು ಸಿಬ್ಬಂದಿಗಳು. ಜಿಲ್ಲಾಧಿಕಾರಿ ಹಾಗೂ ಎಡಿಸಿ ಅವರ ಡಿಜಿಟಲ್ ಸಹಿಯನ್ನ ಬಳಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ, ಈ ರೀತಿ ಹಣ ದೋಚಿದ್ದಾರೆ.
ಈ ಸಂಬಂಧ ಈಗಾಗಲೇ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶ್ ಸಿಟಿ ಲೆವೆಲ್ ಟೆಕ್ನಿಕಲ್ ಸೆಲ್ ಸಿಬ್ಬಂದಿಗಳ ವೇತನದ ಹೆಸರಿನಲ್ಲಿ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್ ಸಲ್ಲಿಸಿರುವುದು ತಿಳಿದು ಬಂದಿದೆ. ಖಜಾನೆ ಇಲಾಖೆಯು ಡಿಜಿಟಲ್ ಸಹಿ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆ ಈ ಅಕ್ರಮ ಬೆಳಕಿಗೆ ಬಂದಿದೆ.
ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನ ಆಧಾರದ ಮೇಲೆ ಹೊರಗುತ್ತಿಗರ ನೌಕರರಾದ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ್, ಮೆಹಬೂಬ್ ಭಾಷಾ ಹಾಗೂ ವಿಎಂಹೆಚ್ ಎಂಟರ್ಪ್ರೈಸಸ್ ನ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ. ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಸಹಿ ಸರ್ಟಿಫಿಕೇಟ್ ಕೀ ಕಳವು ಮಾಡಿ ದುರುಪಯೋಗ ಪಡೊಸಿಕೊಂಡಿರುವ ಆರೋಪವೂ ಹೊರ ಬಂದಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಸಮರ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.






