ದೇವರು, ಧರ್ಮದ ಹೆಸರಿನಲ್ಲಿ ಶೋಷಣೆ ಬೇಡ : ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು

3 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 12 : ಅಸ್ಪøಶ್ಯತೆ ತೊಲಗಬೇಕೆಂಬ ಉದ್ದೇಶವಿಟ್ಟುಕೊಂಡು ಮೊದಲು ನಾನು ಊಟ ಮಾಡಿದ್ದೆ ಮಾದಿಗರ ಮನೆಯಲ್ಲಿ. ದೇವಸ್ಥಾನದೊಳಗೆ ಮಾದಿಗರಿಗೆ ಪ್ರವೇಶ ನಿರಾಕರಿಸುವುದು ನನಗೆ ಇಷ್ಟವಿಲ್ಲ. ಇಂತಹ ಆಚರಣೆಗಳಿಂದ ಯಾವ ದೇಶವೂ ಉದ್ದಾರವಾಗಲ್ಲ. ಯಾವ ಧರ್ಮವು ರಕ್ಷಿಸುವುದಿಲ್ಲ ಎಂದು ನಿಡುಮಾಮಿಡಿ ಜಂಗಮ ಮಠ, ನಿಡುಮಾಮಿಡಿ, ಸತ್ಯಸಾಯಿ ಜಿಲ್ಲೆ ಆಂಧ್ರಪ್ರದೇಶದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.

 

1979-82 ಬ್ಯಾಚ್‍ನ ಎಸ್.ಜೆ.ಎಂ.ಗೆಳೆಯರ ಬಳಗದ ಹಳೆ ವಿದ್ಯಾರ್ಥಿಗಳಿಂದ ಕೂನಬೇವು ಗ್ರಾಮದಲ್ಲಿ ಗುರುವಾರ ಅರಿವು ಮೂಡಿಸಿದ ಕಾಲೇಜಿನ ಅಧ್ಯಾಪಕರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 

ಜಾತಿ-ಮತ, ಮೇಲು-ಕೀಳೆಂಬ ಭಾವನೆ ಮೊದಲು ನಿರ್ಮೂಲನೆಯಾಗಬೇಕು. ಸರ್ವ ಸಮಾನತೆ, ಮಾನವ ಘನತೆ ಪ್ರತಿಯೊಬ್ಬರಿಗೂ ಬೇಕು. ನಾನು ಪೀಠಕ್ಕೆ ಹೋಗಿ ಮೂರು ತಿಂಗಳಲ್ಲೆ ಸಹ ಪಂಕ್ತಿ ಭೋಜನ ಏರ್ಪಡಿಸಿದ್ದೆ. ಆಗ ಮೇಲ್ಜಾತಿಯವರು ಉಣ್ಣದೆ ವಿರೋಧಿಸಿದರು. ಮಠದಲ್ಲಿ ಅಡುಗೆ ಮಾಡಲು ದಲಿತ ವ್ಯಕ್ತಿಯನ್ನು ನೇಮಿಸಿದಾಗ ಸವರ್ಣಿಯರು ತಗಾದೆ ತೆಗೆದು ಊಟ ಮಾಡಲಿಲ್ಲ. ಉಳಿದದ್ದು, ಕೇವಲ ದಲಿತರು ಮಾತ್ರ. ಭಾರತದ ಚರಿತ್ರೆಯಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಅರ್ಚಕನನ್ನು ನೇಮಿಸಿದೆ. ದೇವರ ದೃಷ್ಠಿಯಲ್ಲಿ ಎಲ್ಲರೂ ಸಮಾನರೆ. ಮೂರುವರೆ ಸಾವಿರ ವರ್ಷಗಳ ಹಿಂದೆಯೇ ಚಾರುವಾಸ ಮೌಢ್ಯದ ವಿರುದ್ದ ಸಿಡಿದೆದ್ದರು. ನಿಸರ್ಗಕ್ಕೆ ವಿರುದ್ದವಾಗಿ ಯಾರು ಹೋಗಲು ಆಗಲ್ಲ. ದೇವರು, ಧರ್ಮದ ಹೆಸರಿನಲ್ಲಿ ಶೋಷಣೆ ಬೇಡ ಎಂದರು.

 

ಸಮಾಜದಲ್ಲಿ ಸುಧಾರಣೆ ತರಲು ಹೊರಟಾಗ ಅನೇಕ ವಿರೋಧಗಳು ಹುಟ್ಟುಕೊಳ್ಳುತ್ತವೆ. ಹನ್ನೆರಡನೆ ಶತಮಾನದಲ್ಲಿ ಕ್ರಾಂತಿಕಾರಿ ಬಸವಣ್ಣನವರು ಸಾಕಷ್ಟು ವಿರೋಧಗಳನ್ನು ಎದುರಿಸಬೇಕಾಯಿತು. ಬಸವಣ್ಣನವರ ವಚನಗಳು ಮರು ಚಿಂತನೆಯಾಗಬೇಕು. ಪಾಪದ ಹಣ, ಕಳ್ಳ ಮಾರ್ಗದಲ್ಲಿ ದುಡಿದ ಹಣವನ್ನು ಕೆಲವರು ದೇವರ ಹುಂಡಿಗೆ ಹಾಕಿ ಪಾಪ ಕಳೆದುಕೊಳ್ಳಲು ದೊಡ್ಡ ದೊಡ್ಡ ದೇವಾಲಯಗಳಿಗೆ ಹೋಗುತ್ತಾರೆ. ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳಿಗೆ ಬದಲಾವಣೆ ಬೇಕಾಗಿಲ್ಲ. ಇರುವ ವ್ಯವಸ್ಥೆ ಮುಂದುವರೆಯಬೇಕೆಂಬ ಆಸೆ ಅವರದು. ಒಂದು ವೇಳೆ ಬದಲಾವಣೆಯಾದರೆ ಸ್ಥಾನ ಪಲ್ಲಟವಾಗುತ್ತದೆಂಬ ಭಯ. ಶೋಷಣೆ ವಿರುದ್ದ ಪ್ರತಿಭಟಿಸುವ ಜಾಗೃತಿ ಎಲ್ಲಿಯವರೆಗೂ ಜನರಲ್ಲಿ ಮೂಡುವುದಿಲ್ಲವೋ ಅಲ್ಲಿಯತನಕ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.

 

ಜಾತಿಯತೆ, ಅಸ್ಪøಶ್ಯತೆ ಇಲ್ಲದಿದ್ದರೆ ಜಗತ್ತಿನಲ್ಲಿಯೇ ಭಾರತ ಸರ್ವ ಶ್ರೇಷ್ಠ ದೇಶವಾಗಿರುತ್ತಿತ್ತು. ಸಂಕುಚಿತ ಭಾವನೆಯಿಂದ ಹೊರ ಬರುವ ಮನಸ್ಥಿತಿ ಎಲ್ಲರೂ ಬೆಳೆಸಿಕೊಂಡಾಗ ಸಮಾಜದಲ್ಲಿ ಬದಲಾವಣೆ ಸಾಧ್ಯ. 44 ವರ್ಷಗಳ ಹಿಂದಿನ ಗೆಳೆಯರು ಸ್ನೇಹ ಸಮ್ಮಿಲನ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ. ವಿದ್ಯಾಗುರುಗಳು, ಧರ್ಮಗುರುಗಳ ಸಂಗಮವಾಗಿ ಹಳೆಯ ನೆನಪುಗಳು ಮರುಕಳಿಸುತ್ತವೆ. ಇದರಿಂದ ಜೀವನದಲ್ಲಿ ಇನ್ನು ಹೆಚ್ಚು ಕ್ರಿಯಾಶೀಲ, ಕಾಯಕ ನಿಷ್ಟೆಯನ್ನು ಮೈಗೂಡಿಸಿಕೊಳ್ಳಬಹುದು ಎಂದು ತಿಳಿಸಿದರು.

 

45 ನೇ ವರ್ಷದ ಸ್ನೇಹ ಸಮ್ಮಿಲವನ್ನು ಅದ್ದೂರಿಯಾಗಿ ಆಚರಿಸಿ. ಒಬ್ಬರಿಂದ ಇದು ಸಾಧ್ಯವಿಲ್ಲ. ಎಲ್ಲರೂ ಒಂದಾಗಿ ಸ್ಮರಣ ಸಂಚಿಕೆಯನ್ನು ಹೊರ ತಂದು ನಿಮ್ಮ ಹಳೆಯ ನೆನಪುಗಳನ್ನು ಬರವಣಿಗೆ ಮೂಲಕ ಹಂಚಿಕೊಳ್ಳಿ. ವೃತ್ತಿ ಯಾವುದೇ ಇರಲಿ ಸೇವೆಯಲ್ಲಿ ತೃಪ್ತಿ ಕಾಣಿ. ಇಂತಹ ಸಮ್ಮಿಲನ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ಧರ್ಮದವರು ಸಿಗುತ್ತಾರೆಂದರು.

 

ಮುಸ್ಟೂರಿನ ಡಾ.ರುದ್ರಮುನಿ ಶಿವಯೋಗಿಸ್ವಾಮಿ ಮಾತನಾಡಿ ಪ್ರೌಡಾವಸ್ಥೆಯ ಜೀವನವನ್ನು ಮೆಲಕು ಹಾಕಿಕೊಳ್ಳಲು ಸ್ನೇಹ ಸಮ್ಮಿಲನ ಅತ್ಯಂತ ಉಪಕಾರಿಯಾಗಲಿದೆ. ಪ್ರೀತಿ, ವಿಶ್ವಾಸ, ಆತ್ಮೀಯತೆಯನ್ನು ಬೆಳೆಸಿಕೊಳ್ಳಬೇಕು. ಮನುಷ್ಯ ಸಂಬಂಧಗಳ ನಡುವೆ ಪ್ರಕೃತಿ, ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಬೇಕು. ಕಲ್ಪವೃಕ್ಷ ಸ್ವಾರ್ಥಕ್ಕಾಗಿ ಏನನ್ನು ಬಳಸಿಕೊಳ್ಳುವುದಿಲ್ಲ. ಎಲ್ಲವನ್ನು ಸಾರ್ವಜನಿಕರಿಗೆ ಧಾರೆ ಎರೆಯುತ್ತದೆ. ಪ್ರಾಣಿ, ಪಕ್ಷಿಗಳಲ್ಲಿ ಸ್ವಾರ್ಥತೆಯಿಲ್ಲವೆಂದ ಮೇಲೆ ಮನುಷ್ಯ-ಮನುಷ್ಯರ ನಡುವೆ ಏಕೆ ಸ್ವಾರ್ಥ ಎಂದು ಪ್ರಶ್ನಿಸಿದರು?

 

ನಿವೃತ್ತ ಪ್ರಾಚಾರ್ಯರಾದ ಜೆ.ಮಹಾಂತೇಶ್ ಮಾತನಾಡಿ ಉಸಿರು ಸದಾ ಹಸಿರಾಗಿರಬೇಕಾದರೆ ಸ್ನೇಹ ಬಹಳ ಮುಖ್ಯ. ಹಳೆಯ ಸವಿ ನೆನಪುಗಳು ಬದುಕಿನಲ್ಲಿ ಆಸೆ ಹಂಬಲ, ಪ್ರೋತ್ಸಾಹವನ್ನು ನೀಡುತ್ತವೆ. ಇಂತಹ ಸ್ನೇಹ ಸಮ್ಮಿಲನ ವರ್ಷಕ್ಕೊಮ್ಮೆಯಾದರು ನಡೆಯಬೇಕು. ವಿದ್ಯಾರ್ಥಿ ಜೀವನದ ನೆನಪುಗಳು ಮರು ಜೀವನ ತಂದುಕೊಡುವ ಭಾವನೆ ಮೂಡಿಸುತ್ತದೆಂದು ನುಡಿದರು.

 

ನಿವೃತ್ತ ಪ್ರಾಧ್ಯಾಪಕರಾದ ವೀರಮ್ಮ ಮಾತನಾಡುತ್ತ ಇಂತಹ ಸ್ನೇಹ ಸಮ್ಮಿಲನವನ್ನು ಮರೆಯಲು ಆಗುವುದಿಲ್ಲ. ನಾನು ವಿದ್ಯಾರ್ಥಿಯಾಗಿದ್ದ ಒಳ್ಳೊಳ್ಳೆ ಗುರುಗಳಿದ್ದರು. ಶಿಷ್ಯನಿಂದ ಸೋಲಬೇಕೆಂಬ ಆಸೆ ಗುರುಗಳಿಗಿರುತ್ತದೆ. ಶಿಷ್ಯ ಗುರುವನ್ನು ಮೀರಿ ಬೆಳೆದಾಗ ಸಿಗುವ ಆನಂದ ಅಷ್ಟಿಷ್ಟಲ್ಲ. ಗುರು ಪರಂಪರೆ ನಿಲ್ಲಬಾರದು. ಮುಂದುವರೆಯಬೇಕು. ಶಿಷ್ಯಂದಿರು ಗುರುಗಳಿಗೆ ಎಲ್ಲಾ ಕಡೆ ಸಿಗುತ್ತಾರೆ. ಇಂದಿನ ಪೀಳಿಗೆಗೆ ಸ್ನೇಹದ ಮಹತ್ವ ತಿಳಿಸುವ ಅಗತ್ಯವಿದೆ ಎಂದರು.

 

ಕೂನಬೇವು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಹನುಮಂತರಾಯ, ಮಂಜುನಾಥ, ನಿವೃತ್ತ ಪ್ರಾಂಶುಪಾಲರಾದ ಕೆ.ಸಿ.ರಮೇಶ್, ಸಿರಿಯಣ್ಣ, ಶ್ರೀಶೈಲ, ರಾಂದಾಸ್, ರಾಮನಾಯ್ಕ, ಸುಜಾತ, ಸಾವಿತ್ರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೊಂಚೆ ಸತೀಶ್, ಕೂನಬೇವು ಗ್ರಾಮ ಪಂಚಾಯಿತಿ ಪಿಡಿಓ. ಧನಂಜಯ ಸೇರಿದಂತೆ 44 ವರ್ಷಗಳ ಹಿಂದಿನ ಸ್ನೇಹಿತರು ಸಮ್ಮಿಲನ ಕಾಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಹಿಂದಿನ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೀಮಪ್ಪ ಹಾಗೂ ನಿವೃತ್ತ ಯೋಧರುಗಳನ್ನು ಸನ್ಮಾನಿಸಲಾಯಿತು.

Share This Article