ವಿಶೇಷ ವರದಿ :
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್,ಚಿತ್ರದುರ್ಗ ಮಾರ್ಚ್. 12.
ಹೃದಯರೋಗ, ನರ ದೌರ್ಬಲ್ಯ, ಕಣ್ಣಿನ ದೃಷ್ಠಿ ದೋಷದ ಕಡೆಗೆ ಎಲ್ಲರೂ ಕಾಳಜಿ ವಹಿಸುವುದು ಸಹಜ. ಆದರೆ ದೇಹದಲ್ಲಿರುವ ವಿಷಕಾರಕ ಪದಾರ್ಥಗಳನ್ನು ಮೂತ್ರದ ಮೂಲಕ ಹೊರ ಹಾಕುವ ಪ್ರಮುಖವಾದ ಅಂಗ ಕಿಡ್ನಿ ಕಡೆ ಯಾರು ಗಮನ ಕೊಡದ ಪರಿಣಾಮ ಸಾವು-ನೋವುಗಳ ಸಂಖ್ಯೆ ದಿನದಿಂದೆ ದಿನೆ ಜಾಸ್ತಿಯಾಗುತ್ತಿರುವುದು ದುರಂತ.
ಪ್ರತಿ ವರ್ಷ ಮಾರ್ಚ್ 12 ರಂದು ವಿಶ್ವ ಕಿಡ್ನಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆಯಾದರೂ ಕಿಡ್ನಿ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ವೈದ್ಯರುಗಳಿಗೂ ಮಾಹಿತಿ ಅಷ್ಟಕ್ಕಷ್ಟೆ. ಕಿಡ್ನಿ ತೊಂದರೆಯಿದೆ ಎನ್ನುವುದನ್ನು ವೈದ್ಯರುಗಳು ಪತ್ತೆ ಹಚ್ಚಿ ಚಿಕಿತ್ಸೆ ನೀಡುವಷ್ಟರಲ್ಲಿ ಶೇ.80 ರಷ್ಟು ಕಿಡ್ನಿ ಹಾಳಾಗಿರುತ್ತದೆ. ಆಗ ಅನಿವಾರ್ಯವಾಗಿ ರೋಗಿ ಡಯಾಲಿಸಿಸ್‍ಗೆ ಒಳಗಾಗಬೇಕಾಗುತ್ತದೆ. ಒಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳಬೇಕೆಂದರೆ ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ಹಾಸಿಗೆ ಮೇಲೆ ಅಂಗಾತ ಮಲಗಿರಬೇಕು.
ಅಪ್ಪಿತಪ್ಪಿಯೂ ದೇಹ ಕೊಂಚವೂ ಅಲುಗಾಡುವಂತಿಲ್ಲ. ಒಂದರ್ಥದಲ್ಲಿ ಹೇಳಬೇಕೆಂದರೆ ನರಕಯಾಥನೆ.
ಭಾರತದಲ್ಲಿ ಮೊದಲ ಬಾರಿಗೆ 1964 ರಲ್ಲಿ ಡಯಾಲಿಸಿಸ್ ಆರಂಭಗೊಂಡಿತು. 1971 ರಲ್ಲಿ ಕಿಡ್ನಿ ಕಸಿ ವಿಧಾನ ಕಂಡು ಹಿಡಿಯಲಾಯಿತು. ಪ್ರತಿ ಐದು ಮಂದಿಯಲ್ಲಿ ಒಬ್ಬರಿಗೆ ಕಿಡ್ನಿ ತೊಂದರೆಯಿರುತ್ತದೆ. ಮದ್ಯಪಾನ, ಧೂಮಪಾನ ಸೇವಿಸುವುದಿಲ್ಲ, ಗುಟ್ಕಾ ಅಭ್ಯಾಸವಿಲ್ಲ. ನಮಗೇಕೆ ಕಿಡ್ನಿ ಕೈಕೊಡುತ್ತದೆ ಎನ್ನುವ ತಪ್ಪು ಕಲ್ಪನೆ ಸರಿಯಲ್ಲ. 21 ರಿಂದ 30 ವರ್ಷ ಹಾಗೂ 51 ರಿಂದ 60 ವರ್ಷದ ವಯೋಮಾನದವರಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಾಲು ಊತ, ವಾಂತಿ, ಊಟ ಕಂಡಾಕ್ಷಣ ವಾಯಕರಿಕೆ ಬರುವಂತಾಗುವುದು ಕಿಡ್ನಿ ಸಮಸ್ಯೆಯ ಲಕ್ಷಣವಿರಬಹುದು. ಆಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಒಳಿತು.
ಒಂದು ದಿನಕ್ಕೆ 1440 ವಿಷಕಾರಕ ಅಂಶಗಳನ್ನು ದೇಹದಿಂದ ಹೊರ ಹಾಕುವ ಕಿಡ್ನಿ ಮಾನವನ ರಕ್ತವನ್ನು ಶುದ್ದಿಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಕಿಡ್ನಿ ಬಗ್ಗೆ ಯಾರಲ್ಲೂ ಅಸಡ್ಡೆ ಬೇಡ. ಸಮಸ್ಯೆಯಿಂದ ನರಳುವವರು ಆರಂಭದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಜೋಪಾನವಾಗಿ ಕಾಪಾಡಿಕೊಳ್ಳಿ.






