ಸುದ್ದಿಒನ್, ಚಿತ್ರದುರ್ಗ, ಮಾ.6: ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಹಣ ಕಾಯ್ದಿರುವಂತೆ ಹಾಗೂ ಕೇಂದ್ರ ಸರ್ಕಾರ ಘೋಷಿತ 5,300 ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಶುಕ್ರವಾರ ತೀವ್ರ ಅಸ್ವಸ್ಥಗೊಂಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಇಟ್ಟಿಲ್ಲದ ವಿಷಯ ಹಾಗೂ ಒತ್ತಡಕ್ಕೆ ಮಣಿದು ಉಪವಾಸ ಕೈಬಿಟ್ಟ ಕೆಲವೇ ಸಮಯದಲ್ಲಿ ತಮ್ಮ ಮನೆಯಲ್ಲಿ ಕುಸಿದುಬಿದ್ದಿದ್ದು, ಕುಟುಂಬಸ್ಥರು, ರೈತಮುಖಂಡರು ತಕ್ಷಣವೇ ಹಿರಿಯೂರು ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಐದು ದಿನಗಳಿಂದ ಕೇವಲ ನೀರು ಸೇವನೆ ಮೂಲಕ ಉಪವಾಸ ಕುಳಿತಿದ್ದ ತಿಪ್ಪೇಸ್ವಾಮಿ ಅವರನ್ನು ಸಿದ್ದಯ್ಯನಕೋಟೆ ಸ್ವಾಮೀಜಿ ಹಾಗೂ ಅನೇಕ ಮುಖಂಡರು ಮನವೊಲಿಸಿ ಸತ್ಯಾಗ್ರಹದಿಂದ
ಬಿಡುಗಡೆಗೊಳಿಸಿದ್ದರು. ಒಲ್ಲದ ಮನಸ್ಸಿನಿಂದಲೂ ಸ್ವಾಮೀಜಿ ಕುಡಿಸಿದ ಎಳನೀರು ಸೇವಿಸಿದ್ದ ತಿಪ್ಪೇಸ್ವಾಮಿ, ಬಜೆಟ್‌ನಲ್ಲಿ ಹಣ ಇಟ್ಟಿಲ್ಲ, ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆ ಮಾಡುವ ಮನಸ್ಸು ತೋರುತ್ತಿಲ್ಲ. ಹೀಗಾದರೇ
ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ, ಬರಡು ನೆಲಕ್ಕೆ ನೀರು ಹರಿಯುವುದು ಯಾವಾಗ ಎಂದು ತೀವ್ರ ನೋವಿನಲ್ಲಿಯೇ ಭಾಷಣ ಮಾಡಿದ್ದರು.
ಉಪವಾಸ ಕುಳಿತಿರುವ ನಮ್ಮನ್ನು ಜಿಲ್ಲಾಧಿಕಾರಿ ಆರೋಗ್ಯ ವಿಚಾರಿಸುವ ಸೌಜನ್ಯ ತೋರಲಿಲ್ಲ. ಕೇಂದ್ರ-ರಾಜ್ಯ ಸರ್ಕಾರಗಳು ಮೋಸ ಮಾಡುತ್ತಲೇ ಇವೆ. ಪತ್ರಿಕೆಯೊಂದರಲ್ಲಿ ನಮ್ಮನ್ನು ಹಂಗಿಸುವ ರೀತಿ ಸುದ್ದಿ ಪ್ರಕಟಿಸಿ, ಹೋರಾಟವನ್ನೇ ಹತ್ತಿಕ್ಕುವ ಕೆಲಸ
ಮಾಡಲಾಗಿದೆ. ಇದಕ್ಕೆ ನಾವು ಜಗ್ಗುವುದಿಲ್ಲ. ಹೋರಾಟ ತೀವ್ರಗೊಳ್ಳಲೇಬೇಕು. ನನ್ನ ಜೀವ ಹೋದ್ರೂ ಪರವಾಗಿಲ್ಲ, ಜಿಲ್ಲೆಗೆ ನೀರು ಹರಿಯಬೇಕೆಂದು ಪ್ರತಿ ಭಾಷಣದಲ್ಲೂ
ಹೇಳುತ್ತಿದ್ದರು.
ಜೊತೆಗೆ ಎಳನೀರು ಸೇವನೆ ಬಳಿಕ ಮಾತನಾಡಿದ್ದ ತಿಪ್ಪೇಸ್ವಾಮಿ, ಶೀಘ್ರದಲ್ಲಿಯೇ ಸಭೆ ಕರೆದು, ಚರ್ಚೆ ನಡೆಸಿ, ಜಿಲ್ಲಾದ್ಯಂತ ಪ್ರತಿ ಹಳ್ಳಿ ಹಳ್ಳಿಯಲ್ಲೂ ತೀವ್ರ ಸ್ವರೂಪದ ಚಳವಳಿ ಕೈಗೊಳ್ಳಲೇಬೇಕೆಂದು ಹೇಳಿದ್ದರು. ಎಳನೀರು ಸೇವನೆ ಬಳಿಕ ಉಪವಾಸ ಸತ್ಯಾಗ್ರಹ ಕೈಬಿಟ್ಟು ಹಿರಿಯೂರಿನ ತಮ್ಮ ಮನೆಗೆ ತೆರಳಿದ ತಕ್ಷಣವೇ ಕುಸಿದುಬಿದ್ದಿದ್ದು, ಕುಟುಂಬಸ್ಥರು, ರೈತ ಮುಖಂಡರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಕಾರಣಕ್ಕೆ ವೈದ್ಯರ ಸೂಚನೆ ಮೇರೆಗೆ ತುಮಕೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಕ್ರೋಶ: ಐದು ದಿನಗಳ ಉಪವಾಸ ಕುಳಿತ ನಮ್ಮನ್ನು ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು, ಸಚಿವರು, ಸಂಸದರು ವಿಚಾರಿಸಿ, ಮನವೊಲಿಸುವ ಕೆಲಸವನ್ನೇ ಮಾಡಲಿಲ್ಲ ಎಂದು ರೈತಸಂಘದ
ರಾಜ್ಯ ಕಾರ್ಯಾಧ್ಯಕ್ಷರಾದ ಈಚಘಟ್ಟ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಸಿದ್ರಾಮಣ್ಣ, ಕೊರಟಗೆರೆ ಮಹೇಶ್ ಇತರರು ದೂರಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಉಪವಾಸ ಕೈಗೊಂಡ ದಿನವೇ ಜಿಲ್ಲಾಧಿಕಾರಿ ಆಗಮಿಸಬೇಕಿತ್ತು. ಆದರೆ, ಕಚೇರಿಯಲ್ಲಿಯೇ ಇದ್ದರೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಭರವಸೆ ಮಾತು ಹೇಳಲಿಲ್ಲ. ಒಂದೊಮ್ಮೆ ಆಗಮಿಸಿ ಮನವೊಲಿಸುವ ಜೊತೆಗೆ, ಸಚಿವರು,
ಶಾಸಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿಸಿ ಭರವಸೆ ಕೊಟ್ಟಿದ್ದರೇ ಬಹುಶಃ ಉಪವಾಸ ಸತ್ಯಾಗ್ರಹ ಕೈಬಿಡುತ್ತಿದ್ದರು. ಅಂತಹ ಪ್ರಯತ್ನವನ್ನೇ ಮಾಡಲಿಲ್ಲ. ಈಗ ಆಡಳಿತ ವರ್ಗ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನನಾಯಕ ಕೆ.ಟಿ.ತಿಪ್ಪೇಸ್ವಾಮಿ ಅನಾರೋಗ್ಯಕ್ಕೆ
ಈಡಾಗಿದ್ದಾರೆ ಎಂದು ನೋವು ವ್ಯಕ್ತಪಡಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು, ಸಚಿವರು, ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ತಿಪ್ಪೇಸ್ವಾಮಿ ಅವರ ಆರೋಗ್ಯದ ಉಸ್ತುವಾರಿ ವಹಿಸಿಕೊಳ್ಳಬೇಕು. ಜೊತೆಗೆ ಆಸ್ಪತ್ರೆ ವೆಚ್ಚ ಭರಿಸಬೇಕು. ಈ ಮೂಲಕವಾದರೂ ಮಾನವೀಯತೆಯನ್ನು ಈಗಲಾದರೂ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.
















