ಬೆಂಗಳೂರು: 2026-27ನೇ ಸಾಲಿನ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡಿದ್ದಾರೆ. ಅದರಲ್ಲಿ ಆರೋಗ್ಯ ಇಲಾಖೆಗೂ ಅನುದಾನವನ್ನು ನೀಡಿದ್ದಾರೆ. ಹಾಗಾದ್ರೆ ಏನೆಲ್ಲಾ ಅನುದಾನ ನೀಡಿದ್ರು ಎಂಬ ಮಾಹಿತಿ ಇಲ್ಲಿದೆ.
* 18 ವರ್ಷದ ಒಳಗಿನ ಮಕ್ಕಳ ಡಯಾಬಿಟಿಸ್ ಚಿಕಿತ್ಸೆಗೆ ಉಚಿತ ಇನ್ಸುಲಿನ್
* ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಹಲವು ಯೋಜನೆಗಳನ್ನ ನೀಡಿದೆ.
ಇನ್ನು ಬಹಳ ಮುಖ್ಯವಾಗಿ ಶತಮಾನದ ಇತಿಹಾಸವಿರುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮರುನಾಮಕರಣ ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆ ಇನ್ಮುಂದೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣಗೊಳ್ಳುತ್ತಿದೆ. ಬಜೆಟ್ ನಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಹಾಗಾದ್ರೆ ಈ ಶಾಂತವೇರಿ ಗೋಪಾಲಗೌಡ ಯಾರು ಎಂಬುದನ್ನು ನೋಡುವುದದರೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗದವರು. ಬಡ ಕೃಷಿ ಕುಟುಂಬದಲ್ಲಿ ಜನಿಸಿದವರು. ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿ, 1942 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದ್ದವರು.
ರಾಮ್ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾದವರು. 1852, 1962, 1967 ಒಟ್ಟು ಮೂರು ಬಾರಿ ಆಗಿನ ಮೈಸೂರು ರಾಜ್ಯದ ವಿಧಾನಸಭೆಗೆ ಆಯ್ಕೆಯಾದವರು. ಅಷ್ಟೇ ಅಲ್ಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಡಬೇಕೆಂದು ವಿಧಾನಸಭೆಯಲ್ಲಿ ತೀವ್ರವಾಗಿ ಆಗ್ರಹಿಸಿದವರಲ್ಲಿ ಇವರು ಕೂಡ ಮೊದಲಿಗರು. ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಲ್ಪನೆಯನ್ನು ಕರ್ನಾಟಕದಲ್ಲಿ ಮೊದಲು ಪ್ರತಿಪಾದಿಸಿದವರು. ಇದು ಮುಂದೆ ದೇವರಾಜ ಅರಸು ಅವರ ಕಾಲದ ಭೂಸುಧಾರಣಾ ಕಾಯ್ದೆಗೆ ಬಲವಾದ ಅಡಿಪಾಯವಾಯಿತು.





