ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಗಾಣಗಟ್ಟೆಯ ಮಾಯಮ್ಮನ ದೇವಸ್ಥಾನ ಭಕ್ತರ ನೆಚ್ಚಿನ ಸ್ಥಳವಾಗಿದ್ದು ನಿತ್ಯ ನೂರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಮಾಯಮ್ಮ ದೇವಿಯು ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವಳಾಗಿದ್ದು
ಹಲವಾರು ವರ್ಷಗಳ ಹಿಂದೆ ತನ್ನ ವಾಹನ ಕೋಣನ ಮೇಲೆ ಕುಳಿತು ಗಾಣಗಟ್ಟೆಗೆ ಬಂದು ನೆಲೆಸಿದಳು ಎಂದು ಈ ದೇವಸ್ಥಾನದ ಭಕ್ತರು ನಂಬುತ್ತಾರೆ.
ನಂಬಿ ಬಂದ ನಂಬಿ ಬಂದ ಭಕ್ತರ ಕಷ್ಟ,ಸಮಸ್ಯೆಗಳಿಗೆ ದೇವಿಯು ತ್ವರಿತ ರೀತಿಯಲ್ಲಿ ಪರಿಹಾರ ನೀಡುವಳೆಂಬ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಹಿಂದೆ ಇದೊಂದು ಸಾಧಾರಣ ಗ್ರಾಮವಾಗಿದ್ದು ದೇವಾಲಯ ಕೂಡ ಚಿಕ್ಕದಾಗಿಯೇ ಇದ್ದಿತು. ಇಂದು ಒಳಿತು ಕಂಡ ಭಕ್ತರು ತಮ್ಮ ಜೊತೆಗಾರರಿಗೆ, ನೆಂಟರಿಷ್ಟರಿಗೆ ತಮ್ಮ ಬಂಧುಗಳಿಗೆ ಹೀಗೆ ಎಲ್ಲರಿಗೂ ದೇವಿಯ ಕೃಪಾಶೀರ್ವಾದ ಸಿಗುವಂತಾಗಲಿ ಎಂದು ಬಾಯಿಯಿಂದ ಬಾಯಿ ದೇವಿಯ ಮಹಿಮೆ ಹರಡಿ ಇಂದು ಲಕ್ಷಾಂತರ ಭಕ್ತರು ದೇವಿಗೆ ನಡೆದುಕೊಳ್ಳುತ್ತಾರೆ. ಈ ಭಾಗದ ಅಕ್ಕಪಕ್ಕದ ಜಿಲ್ಲೆ ತಾಲೂಕುಗಳ ಪ್ರತಿ ವಾಹನದ ಮೇಲು ಗಾಣಗಟ್ಟೆ ಮಾಯಮ್ಮನ ಹೆಸರು ಕಡ್ಡಾಯವಾಗಿ ಇದ್ದೇ ಇರುತ್ತದೆ. ಹೀಗಾಗಿ ಗಾಣಗಟ್ಟೆಗೆ ಬರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
ಪೂಜೆ ಹಾಗೂ ಭಕ್ತರ ಕಾಣಿಕೆ ಸೇವೆ ರೂಪದಲ್ಲಿ ಹಣ್ಣು, ಕಾಯಿ, ಹೂ.. ಅರ್ಪಿಸುವ ಪದ್ಧತಿ ಇಲ್ಲಿದ್ದರೂ ಈ ದೇವಿಗೆ ನೋಟುಗಳ ಹಾರವೇ ಬಲು ಪ್ರಿಯವಾಗಿದ್ದು ಭಕ್ತರಿಂದ ನೋಟುಗಳ ಹಾರವನ್ನು ಈ ದೇವಿಯು ಪಡೆಯುತ್ತಾಳೆ.
ತಮ್ಮ ಭಕ್ತಿಯ ಸಂಕೇತವಾಗಿ ಹಣವನ್ನು ಮಾಯಮ್ಮನಿಗೆ ಕಾಣಿಕೆಯಾಗಿ ಅರ್ಪಿಸುತ್ತಾರೆ. ತಾವು ಅಂದುಕೊಂಡ ಕಾರ್ಯವು ನೆರವೇರಿದರೆ ಭಕ್ತರು ತಮ್ಮ ಶಕ್ತಿ ಇದ್ದಷ್ಟು ಹಣವನ್ನು ಕಾಣಿಕೆಯಾಗಿ ಅರ್ಪಿಸುವ ಹರಕೆ ಹೊತ್ತುಕೊಳ್ಳುತ್ತಾರೆ.
ಮಕ್ಕಳಿಲ್ಲದ ಕೆಲ ಭಕ್ತರು ಹರಕೆ ಕಟ್ಟಿಕೊಂಡ ನಂತರ ಹುಟ್ಟಿದ ಮಗುವಿನ ತೂಕದಷ್ಟು ಹಣ ನೀಡುವುದಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಇನ್ನು ಕೆಲವರು ಮಗುವಿನ ತೂಕದಷ್ಟು ಹೂ, ಹಣ್ಣು, ಬೆಲ್ಲ ಇತ್ಯಾದಿಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಸೀರೆ, ಗಾಜಿನ ಬಳೆಗಳನ್ನು ಹರಕೆ ರೂಪದಲ್ಲಿ ಸಲ್ಲಿಸುವ ಪರಿಪಾಠವೂ ಇಲ್ಲಿದೆ.
ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಂದ ಮತ್ತು ನೆರೆಯ ಆಂಧ್ರಪ್ರದೇಶದಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಅಮವಾಸ್ಯೆಯ ದಿನಗಳಂದು ಸಾವಿರಾರು ಜನರು ದೇವಿಯ ದರ್ಶನಕ್ಕೆ ಬರುತ್ತಾರೆ.
ಪ್ರತಿ ದಿನ ಸಂಜೆ 6.30ಕ್ಕೆ ದೇವಿಯನ್ನು ಗದ್ದುಗೆಯಿಂದ ಎಬ್ಬಿಸಿ ಊರು ಸುತ್ತಿಸಿ ಪುನಃ ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಕರೆತರುವ ಸಂಪ್ರದಾಯ ಇಲ್ಲಿ ಬೆಳೆದು ಬಂದಿದೆ. ಈ ಸಮಯದಲ್ಲಿ ಭಕ್ತರು ತಮ್ಮ ಕೋರಿಕೆ ನೆರವೇರುತ್ತದೆಯೋ,ಇಲ್ಲವೋ ಎಂಬುದನ್ನು ಎರಡು ಪ್ರತ್ಯೇಕ ಚೀಟಿಗಳಲ್ಲಿ ಬರೆದು ದೇವಸ್ಥಾನದ ಯಾವುದೋ ಮೂಲೆಯಲ್ಲಿ ಮಣ್ಣಿನ ಕೆಳಗೆ ಬಚ್ಚಿಡುತ್ತಾರೆ.
ದೇವಿಯನ್ನು ಹೊತ್ತ ಅರ್ಚಕರು ಚೀಟಿ ಇರುವ ಸ್ಥಳ ಪತ್ತೆ ಹಚ್ಚಿ ತೆಗೆದುಕೊಡುತ್ತಾರೆ. ಅದರ ಆಧಾರದ ಮೇಲೆ ಭಕ್ತರು ತಮ್ಮ ಕೆಲಸ ಆಗುವ ಕಡೆಗೆ ಗಮನಿಸುತ್ತಾರೆ.
ಮಾಯಮ್ಮಗೆ ನಡೆಕೋ, ದೇವಿಯಿಂದ ಪಡೆದುಕೋ ಎಂಬ ಮಾತು ಈ ಭಾಗದ ಜನರಲ್ಲಿ ಪ್ರಚಲಿತದಲ್ಲಿದೆ.
ಗುಣವಾಗದ ಕಾಯಿಲೆಗಳಿಂದ ನರಳುತ್ತಿರುವವರು, ಉತ್ತಮ ಆರೋಗ್ಯಕ್ಕೆ ಮಾಯಮ್ಮನ ಸನ್ನಿಧಿಯಲ್ಲಿ ಒಂದು ರಾತ್ರಿ ಕಳೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದ್ದು ಪ್ರತಿನಿತ್ಯ ದೇವಸ್ಥಾನದ ಆವರಣದಲ್ಲಿ ಹತ್ತಾರು ಭಕ್ತರು ಒಂದು ರಾತ್ರಿ ಕಳೆಯುತ್ತಾರೆ. ರೋಗಪೀಡಿತರ ಹೆಸರಿನಲ್ಲಿ ಕೋಳಿಯನ್ನು ಊರ ಹೊರಗಡೆ ತೆಗೆದುಕೊಂಡು ಹೋಗಿ ಬಲಿ ನೀಡಲಾಗುತ್ತದೆ.
ಇದರ ಜೊತೆಗೆ ಪ್ರತಿವರ್ಷ ನವರಾತ್ರಿ ಸಮಯದಲ್ಲಿ ಒಂಬತ್ತು ದಿನಗಳ ಕಾಲ ದೇವಿಯ ಪಾರಾಯಣ ಜರುಗುತ್ತದೆ. ಕಾರ್ತಿಕ ಮಾಸದಲ್ಲಿ ದೇವಿಯ ಉತ್ಸವ, ವಿಶೇಷ ಪೂಜೆ ನಡೆಯುತ್ತದೆ. ಹಬ್ಬಗಳ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ದೇವಸ್ಥಾನಕ್ಕೆ ಬರುತ್ತಾರೆ.
ಪ್ರತಿ ವರ್ಷ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಮಾಯಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ರಥೋತ್ಸವ ಸಮಯದಲ್ಲಿ ಮಾತ್ರ ದೇವಿಗೆ ಬಲಿ ನಡೆಯುತ್ತದೆ. ಜಾತ್ರೆಯ ಸಮಯದಲ್ಲಿ ಭಕ್ತರು ದೇವಸ್ಥಾನದ ಬಯಲಿನಲ್ಲಿಯೇ ಅಡುಗೆ ಮಾಡಿ ಅಮ್ಮನಿಗೆ ನೈವೇದ್ಯ ಮಾಡುತ್ತಾರೆ.
ಪ್ರತಿ ಅಮವಾಸ್ಯೆಗೆ ಅನ್ನ ಸಂತರ್ಪಣೆಯನ್ನು ದೇವಸ್ಥಾನದಲ್ಲಿ ನಡೆಯುತ್ತದೆ. ಬಂದ ಭಕ್ತರಿಗೆ ತಂಗಲು ವಸತಿ ಸೌಲಭ್ಯ ಕೂಡ ಇಲ್ಲಿದೆ. ಇತ್ತೀಚಿನ ದಶಕದಲ್ಲಿ
ದೇವಸ್ಥಾನಕ್ಕೆ ರಾಜಗೋಪುರ ನಿರ್ಮಾಣವಾಗಿದೆ. ಗಾಣಗಟ್ಟೆಗೆ ಹೋಗಲು ಕೊಟ್ಟೂರು, ಕೂಡ್ಲಿಗಿ, ಜಗಳೂರು, ಖಾನಾಹೊಸಹಳ್ಳಿ, ಉಜ್ಜಿನಿಯಿಂದ ಬಸ್ ಹಾಗೂ ಖಾಸಗಿ ವಾಹನಗಳ ಸೌಲಭ್ಯವಿದೆ.







