ಹಾವೇರಿ.ಜುಲೈ.27: ಐದು ದಶಕಗಳ ಕಾಲ ಸುಖ-ದುಃಖಗಳಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ಆ ದಂಪತಿಯ ಬಂಧ ಎಷ್ಟೊಂದು ಗಾಢವಾಗಿತ್ತೆಂದರೆ, ಕೊನೆಯ ಪಯಣದಲ್ಲೂ ಅವರಿಬ್ಬರೂ ಬೇರೆಯಾಗಲಿಲ್ಲ. ಪತ್ನಿ ನಿಧನರಾದ ಬೆನ್ನಲ್ಲೇ ತೀವ್ರ ಆಘಾತಕ್ಕೊಳಗಾದ ಪತಿಯೂ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದ ಮನಕಲಕುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಶಾಂತಮ್ಮ (65) ಹಾಗೂ ಜುಂಜಪ್ಪ ಬಾರ್ಕಿ (75) ಸಾವಿನಲ್ಲೂ ಒಂದಾದ ಅಪರೂಪದ ದಂಪತಿ. ಭಾನುವಾರ ಮಧ್ಯರಾತ್ರಿ ಸುಮಾರು 12 ಗಂಟೆಯ ವೇಳೆಗೆ ಶಾಂತಮ್ಮ ಅವರು ಮಲಗಿದ್ದಲ್ಲೇ ಸಾವನ್ನಪ್ಪಿದ್ದರು. 5 ದಶಕಗಳ ಕಾಲ ತನಗೆ ಆಸರೆಯಾಗಿದ್ದ ಧರ್ಮಪತ್ನಿಯನ್ನಿಲದೇ ಬದುಕುವುದು ಸಾಧ್ಯವಿಲ್ಲವೆಂದು ರಾತ್ರಿಯಿಡೀ ಕಣ್ಣೀರಿಟ್ಟ ಜುಂಜಪ್ಪ, ತೀವ್ರ ಆಘಾತಕ್ಕೊಳಗಾಗಿದ್ದರು. ಸೋಮವಾರ ಬೆಳಿಗ್ಗೆ ದುಃಖದ ಭರದಲ್ಲಿ ಮನೆಯಲ್ಲೇ ಕುಸಿದುಬಿದ್ದ ಅವರು ಜೀವ ತೊರೆದಿದ್ದಾರೆ.
ಸುಮಾರು 45 ವರ್ಷಗಳಿಂದ ಅತ್ಯಂತ ಅನ್ಯೋನ್ಯವಾಗಿ ಬಾಳಿ ಬದುಕಿದ್ದ ಈ ಜೋಡಿಯ ಅಗಲಿಕೆಗೆ ಇಡೀ ಹೆಸರೂರು ಗ್ರಾಮವೇ ಕಂಬನಿ ಮಿಡಿದಿದೆ. ಗ್ರಾಮಸ್ಥರು ದಂಪತಿಯ ಮೃತದೇಹಗಳನ್ನು ಪಕ್ಕಪಕ್ಕದಲ್ಲೇ ಕುಳ್ಳಿರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಬಳಿಕ ಕುಟುಂಬಸ್ಥರ ಆಶಯದಂತೆ ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಕ್ರಿಯೆಯನ್ನು ನೆರವೇರಿಸಿ, ಪ್ರೀತಿಯ ಅನುಬಂಧಕ್ಕೆ ಭಾವುಕ ವಿದಾಯ ಹೇಳಲಾಯಿತು.









