ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ರಾಜಕೀಯ ಇಚ್ಚಾಶಕ್ತಿ ಕೊರತೆ : ಈಚಘಟ್ಟದ ಸಿದ್ದವೀರಪ್ಪ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 09 :
ಬರಗಾಲ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಗೆ ಅಪ್ಪರ್ ಭದ್ರಾ ಯೋಜನೆ ಜೀವನಾಡಿಯಾಗಿದೆ. ಆದರೆ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಈ ಯೋಜನೆ ಕಳೆದ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಈ ವೇಳೆಗಾಗಲೇ ಈ ಭಾಗಕ್ಕೆ ನೀರು ಹರಿದು ಬರಬೇಕಾಗಿತ್ತು. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತಿಕ್ಕಾಟದಿಂದಾಗಿ ಕಾಮಗಾರಿ ಕುಂಟುತ್ತಾ ಸಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಾಧ್ಯಕ್ಷರಾದ ಈಚಘಟ್ಟದ ಸಿದ್ದವೀರಪ್ಪ ಸರ್ಕಾರ ಹಾಗೂ ಚುನಾಯುತ ಪ್ರತಿನಿಧಿಗಳ ವಿರುದ್ದ ಕಿಡಿ ಕಾರಿದ್ಧಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಳೆ ಇಲ್ಲದೇ ಈ ಭಾಗಕ್ಕೆ ಅಪ್ಪರ್ ಭದ್ರಾ ಯೋಜನೆಯೇ ಆಸರೆ.ಆದರೆ ಇದು ಪೂರ್ಣಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ.. ಈ ಹಿನ್ನಲೆಯಲ್ಲಿ ರೈತ ಸಂಘಟನೆಗಳು ಬೀದಿಗಿಳಿದ್ದಿವೆ.ಇತ್ತೀಚಿನ ದಿನಗಳಲ್ಲಿ ಹಿಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟು ಬಿತ್ತಿದ ಬೆಳೆ ಕೈಗೆ ಬಾರದೇ ರೈತರು ನೆಲಕಚ್ಚಿದ್ದಾರೆ.. ಈತನ ಉಳುವಿಗೆ ಸರ್ಕಾರಗಳು ಧಾವಿಸಬೇಕಾಗಿದೆ ಎಂದು ಆಗ್ರಹಿಸಲಾಯಿತು.

2008 ರಿಂದ ಈವರೆಗೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಟುತ್ತಾ ತೆವಳುತ್ತಾ ಸಾಗಿದೆ. ವರ್ಷದಲ್ಲಿ ಎರಡು ಮೂರು ಬಾರಿ ರಾಜಕಾರಣಿಗಳು ನೀರು ಹರಿಸುವ ಸುಳ್ಳು ಭರವಸೆಗಳನ್ನು ಜನರಲ್ಲಿ ಬಿತ್ತುತ್ತಾ ವಂಚಿಸುತ್ತಿದ್ದಾರೆ. ಈಗಲೂ ಜಿಲ್ಲೆಯಲ್ಲಿ ನೀರು ತುಂಬಿಸಲು ಯಾವುದೇ ಕೆರೆಗಳನ್ನು ಸಿದ್ಧಗೊಳಿಸಿಲ್ಲ. ರೈತರ ಜಮೀನುಗಳಿಗೆ ನೀರು ಹರಿಸಲು ಅಜ್ಜಂಪುರ, ಕಡೂರು, ಹಿರಿಯೂರು ಮತ್ತು ಹೊಸದುರ್ಗ ಜಮೀನುಗಳಿಗೆ ಡ್ರಿಪ್ ಅಳವಡಿಸಿರುವುದನ್ನು ಬಿಟ್ಟರೆ ಮತ್ತಾವುದೇ ಭಾಗದಲ್ಲಿ ಕೆಲಸಗಳು ಆಗಿರುವುದಿಲ್ಲ. ಹೊಳಲ್ಕೆರೆಯಲ್ಲಿ ಡ್ರಿಪ್ ಯೋಜನೆ ಆಗಿರುವುದಿಲ್ಲ. ಜಿಲ್ಲೆಯಲ್ಲಿ ತಾರತಮ್ಯವಿಲ್ಲದೆ ಪ್ರತಿ ರೈತರ ಜಮೀನಿಗೆ ನೀರು ಹರಿಸಲೇಬೇಕು ಇದೇ ಬೇಸಿಗೆಯಲ್ಲಿ ತುಂಗಾ ದಿಂದ ಭದ್ರಾ ದವರೆಗಿನ ಕಾಮಗಾರಿಗಳಿಗೆ ಮತ್ತು ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಮಾಡಲು ಎಲ್ಲಾ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಮಳೆಗಾಲದಲ್ಲಿ ನೀರು ಹರಿಸಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಈ ಚಳುವಳಿಯನ್ನು ಕೇವಲ ತಾಲ್ಲೂಕು ಜಿಲ್ಲೆ ಅಲ್ಲ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಕೊಂಡಯ್ಯಬೇಕಾಗಿದೆ. ನಾವು ಇನ್ನು ನೀರಿನ ಮೋಸದ ಭರವಸೆಗಳಿಗೆ ಮಣಿಯುವುದಿಲ್ಲ ಎಂಬ ಧೃಡ ಸಂಕಲ್ಪದೊಂದಿಗೆ ಎಲ್ಲಾ ಜನಪರ, ನೆಲಜಲ ಭಾಷಪರ, ಜಿಲ್ಲೆಯ ಎಲ್ಲಾ ಅಭಿವೃದ್ಧಿಪರ ಸಂಘಟನೆಗಳು ನಾಗರೀಕರು ಸಮಾನ ಜವಾಬ್ದಾರಿಯಿಂದ ಹೋರಾಟಕ್ಕೆ ಇಳಿಯಲಾಗಿದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಒಂದು ಸಾವಿರ ಅಡಿ ತಲುಪಿರುವುದಲ್ಲದೆ 144.43% ಅಂತರ್ಜಲ ಅಪಾಯದ ಮಟ್ಟವನ್ನು ಮೀರಿ ನೀರು 2 ಬಳಸುತ್ತಿದ್ದೇವೆ ಪರಿಣಾಮವಾಗಿ ಪ್ಲೋರೈಡ್ ಇತರೆ ಅಪಾಯಕಾರಿ ಲವಣಾಂಶಗಳು ನೀರಿನಲ್ಲಿ ಸೇರಿ ಕೃಷಿ ಭೂಮಿಯನ್ನು ಕಲುಷಿತಗೊಳಿಸುತ್ತಿವೆ. ಇದು ದೊಡ್ಡ ಜೀವಪರ ಅಪಾಯಕ್ಕೆ ಮುನ್ಸೂಚನೆಯಾಗಿದೆ. ಇದರಿಂದ ರಕ್ಷಿಸಲು ನಾಲೆನೀರು ಹರಿಯಲೇಬೇಕಿದೆ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ, ಭೂಮಿಗೆ ಪರಿಹಾರವನ್ನು ಕೇಳುವ ರೈತರಿಗೆ ಸಕಾಲಕ್ಕೆ ಹಣ ಪೂರೈಸದಿದ್ದರೆ ಜಿಲ್ಲೆಗೆ ನೀರು ಹರಿಸಲು ಸಾಧ್ಯವೇ, ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಬೇಕು. ಜನರೇ ಕೇಳದೆ ಇದ್ದ ಗ್ಯಾರಂಟಿ ಯೋಜನೆಗಳಿಗೆ ಅಧಿಕಾರದ ಆಮಿಷಕ್ಕೆ ಒಳಗಾಗಿ ಪ್ರತಿ ವರ್ಷ 52,000 ಕೋಟಿ ಖರ್ಚು ಮಾಡುವ ಸರಕಾರ ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣವಾದ ಭದ್ರಾ ಮೇಲ್ದಂಡೆ ಯೋಜನೆ 18 ವರ್ಷಗಳಲ್ಲಿ ಕೇವಲ 10 ಸಾವಿರ ಕೋಟಿ ಖರ್ಚು ಮಾಡಿರುವುದು ಯಾವ ನ್ಯಾಯ ಈ ಬಜೆಟ್ಟಿನಲ್ಲಿ 5000 ಕೋಟಿಗಳನ್ನು ಕಾಯ್ದಿರಿಸಿ ಕೆಲಸಕ್ಕೆ ವೇಗ ತಂದುಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ 2022-23 ನೇ ಸಾಲಿನ ಬಜೆಟ್‍ನಲ್ಲಿ ಹೇಳಿದಂತೆ ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿರೂಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿಫೆ.04 ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ. ಅಪ್ಪರ್ ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರ ಈ ಬರುವ ಬಜೆಟ್‍ನಲ್ಲಿ 5000 ಕೋಟಿ ರೂ ಮೀಸಲಿಡಬೇಕು. ಇದರ ಅಂಗವಾಗಿ ಫದೆ. 10 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಸದುರ್ಗ, ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ಬಂದ್ ಮಾಡಲಾಗುವುದು ಹಾಗೂ ಫೆ. 12.ರಂದು ಚಳ್ಳಕೆರೆ ಬಂದ್ ಮಾಡಲಾಗುವುದು. ಇದರೊಂದಿಗೆ ಇದೇ ದಿನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕೆ ಪಾದಯಾತ್ರೆಯನ್ನು ಪ್ರಾರಂಭಿಸಲಾಗುವುದು ಎಂದರು.

ಫೆ. 13. ರಂದು ಪಾದಯಾತ್ರೆಯೂ ಚಿತ್ರದುರ್ಗ ನಗರಕ್ಕೆ ಆಗಮಿಸಿ ಎಂ.ಜಿ ಸರ್ಕಲ್‍ನಿಂದ ಓಬವ್ವ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಹಾಗೂ ಓಬವ್ವ ವೃತ್ತದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು.ಸದರಿ ಸಮಾವೇಶದ ಸಂದರ್ಭದಲ್ಲಿ ನೀರಾವರಿ ಸಚಿವರು ಮನವಿ ಸ್ವೀಕರಿಸಬೇಕು ಹಾಗೂ ನಮ್ಮ ಬೇಡಿಕೆಗಳ ಈಡೇರಿಕೆಯ ಬಗ್ಗೆ ಭರವಸೆ ನೀಡಬೇಕು. ಇಲ್ಲದೇ ಹೋದರೆ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಗೋಷ್ಟಿಯಲ್ಲಿ ಸಿದ್ದರಾಮಣ್ಣ, ಎರೆಹಳ್ಳಿ ತಿಪ್ಪೇಸ್ವಾಮಿ ಭಾಗವಹಿಸಿದ್ದರು.

Share This Article
Enable Notifications OK No thanks