ಸುದ್ದಿಒನ್, ಚಿತ್ರದುರ್ಗ, ಜನವರಿ. 17 : ಜಿಲ್ಲೆಯ ರೈತರು, ಕಾರ್ಮಿಕರು, ಶ್ರಮಿಕರ ದಶಕಗಳ ಕನಸು ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಂಡು 16 ವರ್ಷ ಪೂರೈಸುತ್ತಿದ್ದರೂ ಕಾಮಗಾರಿ
ಪೂರ್ಣಗೊಳ್ಳದಿರುವುದು ಅತ್ಯಂತ ಬೇಸರದ ವಿಷಯ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಹೇಳಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರಾ
ಮೇಲ್ದಂಡೆ ಯೋಜನೆ ಜಾರಿಯಿಂದ ಲಕ್ಷಾಂತರ ಜನರ ಬದುಕು ಹಸನುಗೊಳ್ಳಲಿದೆ. ಆದರೆ, ಯೋಜನೆ ಜಾರಿ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರದ ಮಧ್ಯೆ ಇರುವ ಕಂದಕ ಬಯಲುಸೀಮೆ ಜನರನ್ನು ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಚುನಾವಣೆ ಸಂದರ್ಭ ನರೇಂದ್ರ ಮೋದಿ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ
ಅವರು ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಂಬಂಧ ಕೊಟ್ಟ ಮಾತು ಈಡೇರಿಸಬೇಕಿದೆ.
ಬಜೆಟ್‌ನಲ್ಲಿ 5300 ಕೋಟಿ ರೂ. ಯೋಜನೆಗೆ ಘೋಷಿಸಿದ್ದರೂ ಇಲ್ಲಿಯವರೆಗೂ ಬಿಡುಗಡೆ
ಮಾಡಿಲ್ಲ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣಕಾಸಿನ ಪರಿಸ್ಥಿತಿ ಅವಲೋಕಿಸಿದರೆ ಎಲ್ಲವೂ
ಕೇಂದ್ರದ ಹಿಡಿತದಲ್ಲಿದೆ. ಅದರಲ್ಲೂ ಈಚೆಗೆ ನರೇಗಾ ಯೋಜನೆ ಹೆಸರು ಬದಲಾವಣೆ ಜೊತೆಗೆ
ರಾಜ್ಯ ಸರ್ಕಾರದ ಮೇಲೆ ಹೆಚ್ಚು ಆರ್ಥಿಕ ಹೊರೆ ಹಾಕಲಾಗಿದೆ. ಹೀಗೆ ವಿವಿಧ ರೀತಿ
ರಾಜ್ಯಗಳ ಮೇಲೆ ಕೇಂದ್ರ ಸರ್ಕಾರದ ಸವಾರಿ ಮಾಡುತ್ತಿದೆ. ಇದರಿಂದ ರಾಜ್ಯಗಳ ಆರ್ಥಿಕ
ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದರು.
ಇಂತಹ ವೇಳೆ ರಾಷ್ಟ್ರದ ಬಹುದೊಡ್ಡ ಯೋಜನೆ ಆಗಿರುವ ಭದ್ರಾ ಮೇಲ್ದಂಡೆ ಯೋಜನೆ ದಿನದಿಂದ
ದಿನಕ್ಕೆ ವೆಚ್ಚ ಹೆಚ್ಚಾಗುತ್ತಿದೆ. 5 ರಿಂದ 21 ಸಾವಿರ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಇಂತಹ ವೇಳೆ ಕೊಟ್ಟ ಮಾತಿನಂತೆ ಹಾಗೂ ಬಜೆಟ್ ಘೋಷಿಸಿದಂತೆ ಕೇಂದ್ರ ಸರ್ಕಾರ 5,300 ಕೋಟಿ ರೂ. ಬಿಡುಗಡೆ ಮಾಡಿದ್ದರೆ ಕಾಮಗಾರಿ ವೇಗ
ಪಡೆದುಕೊಳ್ಳುತ್ತಿತ್ತು ಎಂದು ಹೇಳಿದರು.
ಕಾಮಗಾರಿ ಗುತ್ತಿಗೆ ಪಡೆದಿರುವವರು ತೀವ್ರ ಸಂಕಷ್ಟದಲ್ಲಿದ್ದೂ ಕೆಲಸ ಮುಂದುವರಿಸುತ್ತಿದ್ದಾರೆ. ಅವರುಗಳಿಗೆ ಹಣ ಬಿಡುಗಡೆ ಮಾಡುವುದು ಯೋಜನೆ ತ್ವರಿತಕ್ಕೆ ಕಾರಣವಾಗಲಿದೆ. ಆದ್ದರಿಂದ ಈ ವಿಷಯದಲ್ಲಿ ಕೇಂದ್ರ-ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕೆಂದು ತಿಳಿಸಿದರು.
ಕಾಮಗಾರಿ ಆರಂಭದಿಂದ ವಿವಿ ಸಾಗರದ ವರೆಗೆ ಆಗಿರುವ ಕಾಮಗಾರಿಯನ್ನು ಶುಕ್ರವಾರ
ವೀಕ್ಷಿಸಿದ್ದು, ಸಮಾಧಾನ ತಂದಿದೆ. ಇನ್ನಷ್ಟು ವೇಗ ಪಡೆದುಕೊಂಡರೇ ನಿಗದಿತ ಅವಧಿಯೊಳಗೆ
ಜಿಲ್ಲೆಯನ್ನು ಸಂಪೂರ್ಣ ಹಸಿರನ್ನಾಗಿಸಬಹುದು ಎಂದರು.
ಫೆಬ್ರವರಿ ತಿಂಗಳೊಳಗೆ ಪ್ರಾಯೋಗಿಕವಾಗಿ ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ವಿಷಯವೇ
ರೋಮಾಂಚನ. ಈ ಮೂಲಕ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನಡೆಸಿದ ಚಳವಳಿ ಸಾರ್ಥಕತೆ
ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಶೀಘ್ರದಲ್ಲಿ ಮಂಡಿಸುವ ಬಜೆಟ್‌ನಲ್ಲಿ ಭದ್ರಾ
ಮೇಲ್ದಂಡೆ ಯೋಜನೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಬೇಕು. ಈ ಮೂಲಕ ಜಿಲ್ಲೆಯ ಜನರಿಗೆ ಕೊಟ್ಟ ಮಾತನ್ನು ಎರಡು ಸರ್ಕಾರ ಉಳಿಸಿಕೊಳ್ಳಬೇಕು ಎಂದು
ಆಗ್ರಹಿಸಿದರು.
ಪ್ರೊ.ರವಿವರ್ಮಕುಮಾರ್ ಮಾತನಾಡಿ, ನ್ಯಾಯಾಲಯದ ಮೆಟ್ಟೀಲು ಏರಿ ಹೇಮಾವತಿ ನೀರನ್ನು ಶಿರಾಕ್ಕೆ ಕೊಡಿಸಿದ್ದೇನೆ. ಅದೇ ಕಾರಣಕ್ಕೆ ಭದ್ರಾ ಮೇಲ್ದಂಡೆ ಯೋಜನೆಯನ್ನು
ಸಾರ್ವಜನಿಕ ಹಿತಾಸಕ್ತಿಯಡಿ ಅರ್ಜಿ ಸಲ್ಲಿಸಬಹುದೇ ಎಂಬ ಕುರಿತು ಅಧ್ಯಯನ
ನಡೆಸುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸುತ್ತಿದ್ದು,
ಕೇಂದ್ರ ಸರ್ಕಾರದ ಬೆಂಬಲ ಬೇಕಾಗಿದೆ ಎಂದರು.
ರಾಜ್ಯದ 28 ಸಂಸದರು ಲೋಕಸಭೆಯಲ್ಲಿ ಯೋಜನೆ ಕುರಿತು ಧ್ವನಿಯೆತ್ತಿದರೆ 5,300 ಕೋಟಿ
ರೂ. ಬಿಡುಗಡೆ ಖಚಿತ. ಈ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ತರುವ ರೀತಿ ಹೋರಾಟ
ರೂಪಿಸಬೇಕು. ನನಗೆ 75, ಕೋದಂಡರಾಮಯ್ಯ ಅವರಿಗೆ 86. ಈ ವಯಸ್ಸಿನಲ್ಲೂ ನಾವೇ ಹೋರಾಟ
ಮಾಡಬೇಕಾ? ಯುವ ಪೀಳಿಗೆ ಪ್ರಶ್ನೀಸಿಕೊಳ್ಳಬೇಕೆಂದು ತಿಳಿಸಿದರು.
ಪವಾಡ ಖಚಿತ :
ನಾನು ಹುಟ್ಟಿದಾಗಿನಿಂದಲೂ ಭದ್ರಾ ಮೇಲ್ದಂಡೆ ಯೋಜನೆ ಹೆಸರು ಕೇಳಿ ಇದು ಸಾಧ್ಯವೇ
ಇಲ್ಲವೆಂಬ ಮನಸ್ಥಿತಿಗೆ ಬಂದಿದ್ದೇ. ಆದರೆ, ಪವಾಡ ರೀತಿ ಫೆಬ್ರವರಿ ತಿಂಗಳು ಜಿಲ್ಲೆಗೆ
ಭದ್ರಾ ನೀರು ಹರಿಯಲಿದೆ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್
ಹೇಳಿದರು.

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳಬಾರದು. ಈಗ ನೀರು ಹರಿಯಲಿದೆ, ಜೊತೆಗೆ
ಇನ್ನಷ್ಟು ಕೆಲಸ ಆಗಬೇಕಾಗಿದೆ. ಆದ್ದರಿಂದ ಕೋದಂಡರಾಮಯ್ಯ ತಮ್ಮ ತಂಡದೊಂದಿಗೆ ಬೀದಿಗೆ ಇಳಿಯಬೇಕು. ಜನರ ಪರವಾಗಿ ಹೋರಾಟ ಮಾಡಬೇಕು. ರಾಜಕಾರಣ ಮತ್ತು ಹೋರಾಟವೇ ಬೇರೆ ಎಂಬ
ಸತ್ಯ ಅರಿತುಕೊಳ್ಳಬೇಕೆಂದರು.
ಉರುಳಾಗದಿರಲಿ :
ರಾಜ್ಯದಲ್ಲಿ ರೈತಸಂಘ ಅನೇಕ ಜನಪರ ಹೋರಾಟ ಮಾಡಿದೆ. ಆದರೆ, ಭದ್ರಾ ಮೇಲ್ದಂಡೆ
ವಿಷಯದಲ್ಲಿ ಕೆಲ ರೈತರು ಪರಿಹಾರ ಪಡೆದುಕೊಂಡು ಕಾಮಗಾರಿಗೆ ಅಡ್ಡಿಪಡಿಸುವ ಕೆಲಸ ಬೇಸರದ ಸಂಗತಿ ಎಂದು ಪ್ರೊ.ರವಿವರ್ಮಕುಮಾರ್ ಹೇಳಿದರು. ಈ ವಿಷಯಲ್ಲಿ ರೈತಮುಖಂಡರು, ಕೃಷಿಕರಿಗೆ ಬುದ್ಧಿಮಾತು ಹೇಳಬೇಕಿದೆ. ಇಲ್ಲದಿದ್ದರೆ ರೈತಸಂಘಕ್ಕೆ ಉರುಳಾಗುವ
ಸಾಧ್ಯತೆ ಹೆಚ್ಚು ಆತಂಕ ವ್ಯಕ್ತಪಡಿಸಿದರು.
ರಾಜಕಾರಣಿಗಳ ಸಹಕಾರ :
ಮುರುಘಾ ಮಠ, ಡಿ.ಸುಧಾಕರ್, ಬಿ.ಟಿ.ಚನ್ನಬಸಪ್ಪ, ಜಿ.ಎಸ್.ಮಂಜುನಾಥ್,
ಜಿ.ಎಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ ಸೇರಿ ಅನೇಕ
ರಾಜಕಾರಣಿಗಳು, ಸಂಘ-ಸಂಸ್ಥೆಗಳ ಮುಖಂಡರು ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರ ಫಲ
ಯೋಜನೆ ಜಾರಿಗೊಂಡಿದೆ ಎಂದು ಕೋದಂಡರಾಮಯ್ಯ ಸ್ಮರಿಸಿದರು.
ಕೋರಾ ಬಾವುಕ :
ಮುತ್ತಿನಕೊಪ್ಪ, ಬೆಟ್ಟದತಾವರಕೆರೆ ಸೇರಿ ವಿವಿಧೆಡೆ ನಡೆಯುತ್ತಿದ್ದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಕಾಲುವೆಯಲ್ಲಿ ನೀರು ಹರಿಯುವ ದೃಶ್ಯ ಕಂಡು 86 ವರ್ಷದ ಕೋದಂಡರಾಮಯ್ಯ ಚಿಕ್ಕ ಹುಡುಗನಂತೆ ಸಂಭ್ರಮಿಸಿದರು. ಕಾಲುವೆಗೆ ಇಳಿದು ನೀರನ್ನು ತಲೆಗೆ ಚಿಮುಕಿಸಿಕೊಂಡು, ಕುಡಿದು ಹೋರಾಟ ನಡೆಸಿದ್ದು ಸಾರ್ಥಕವಾಯಿತು ಎಂದು ಭಾವುಕಾರದರು.
ರೈಲಿನಲ್ಲಿ ಓಡಾಡುವಾಸೆ :
1996ರಲ್ಲಿ ಎಂಪಿ ಚುನಾವಣೆಗೆ ಸ್ಪರ್ಧೆ ವೇಳೆ ಕೊಟ್ಟ ಮಾತಿನಂತೆ ಭದ್ರಾ ಮೇಲ್ದಂಡೆ
ಮತ್ತು ನೇರ ರೈಲು ಮಾರ್ಗ ಯೋಜನೆಗಾಗಿ ಶ್ರಮಿಸಿದ್ದೇನೆ. ಆದರೆ, 2004ರಲ್ಲಿ ಯೋಜನೆಗೆ
ಮಂಜೂರಾತಿ ದೊರೆತ ಬಳಿಕ ನನ್ನನ್ನು ಎಂಪಿ ಚುನಾವಣೆಯಲ್ಲಿ ಸೋಲಿಸಿದ್ದು ನೋವು
ತರಿಸಿತ್ತು. ಈ ಕಾರಣಕ್ಕೆ ಹೋರಾಟದಿಂದ ಹಿಂದೆ ಸರಿದಿದ್ದೇ. ಆದರೆ, ಅಧಿಕಾರಿಗಳೊಂದಿಗೆ
ನಿರಂತರ ಸಂಪರ್ಕ ಹೊಂದಿದ್ದೇ ಎಂದು ಪಿ.ಕೋದಂಡರಾಮಯ್ಯ ಹೇಳಿದರು. ಈಗ ಕಾಲುವೆಯಲ್ಲಿ ಭದ್ರಾ ನೀರು ಹರಿಯುವ ದೃಶ್ಯ ಕಣ್ಣಾರೆ ಕಂಡು ಸಂಭ್ರಮಿಸಿದ್ದೇನೆ. ನೇರ ರೈಲು ಮಾರ್ಗ ಯೋಜನೆ ಪೂರ್ಣಗೊಂಡರೇ ರೈಲಿನಲ್ಲಿ ಒಮ್ಮೆ ಓಡಾಡಿದರೆ ಜೀವನ ಸಾರ್ಥಕ ಎಂದು
ಭಾವುಕರಾದರು.
ರಾಜಕಾರಣಕ್ಕೆ ಅನ್‌ಫಿಟ್ :
ಕಾಸು, ಕ್ಯಾಸ್ಟ್, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಮಂದಿಗೆ ಭವಿಷ್ಯ ಇದೆ. ಆದರೆ,
ಮತದಾರರಿಗೆ ದುಡ್ಡು ಕೊಡಲು ಒಪ್ಪದ ಸಿದ್ಧಾಂತದವರಿಗೆ ಅವಕಾಶ ಇಲ್ಲ. ಆದ್ದರಿಂದ ನಾನು
ಈ ಕ್ಷೇತ್ರಕ್ಕೆ ಅನ್‌ಫಿಟ್ ಎಂದು ಭಾವಿಸಿ 2012ರಲ್ಲಿಯೇ ನಿವೃತ್ತಿ ಪಡೆದುಕೊಂಡೇ
ಎಂದು ಕೋದಂಡರಾಮಯ್ಯ ಹೇಳಿದರು.
ಡಿಕೆಶಿ ಸಾಥ್ : ಜಿಲ್ಲಾ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು ಕೈಗೊಂಡ ಎರಡು ದಿನಗಳ ಕಾಲ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೂರ್ಣ
ಸಹಕಾರ ನೀಡಿದ್ದಾರೆ. ಅಧಿಕಾರಿಗಳನ್ನು ನಮ್ಮೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಅದೇ
ರೀತಿ ಬರುವ ಬಜೆಟ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರು ಸೇರಿ ಯೋಜನೆಗೆ
ಹೆಚ್ಚು ಹಣ ಕೊಟ್ಟರೇ ಜಿಲ್ಲೆಗೆ ಒಳ್ಳೆಯದಾಗಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಸೋಮಗುದ್ದು ರಂಗಸ್ವಾಮಿ, ಈಚಘಟ್ಟದ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ
ಬಸವರೆಡ್ಡಿ, ಹೊರಕೇರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಮುಖಂಡರಾದ
ಜಿ.ಎಸ್.ಉಜ್ಜನಪ್ಪ, ಆರ್.ಶೇಷಣ್ಣಕುಮಾರ್, ಡಿ.ದುರುಗೇಶ್, ಚಳ್ಳಕೆರೆ ಬಸವರಾಜ್,
ನರೇನಹಳ್ಳಿ ಅರುಣ್‌ಕುಮಾರ್, ರಾಘವೇಂದ್ರ ನಾಯ್ಕ, ಕೂನಿಕೆರೆ ರಾಮಣ್ಣ, ಸಂಪತ್‌ಕುಮಾರ್, ಟಿ. ಶಫಿಉಲ್ಲಾ, ತಿಪ್ಪೀರಯ್ಯ, ವದ್ದಿಕೆರೆ ಕಾಂತರಾಜ್ ಇತರರು ಪಾಲ್ಗೊಂಡಿದ್ದರು.
























