Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಾಯಕದಲ್ಲಿ ಕೈಲಾಸ ಕಂಡ “ಸಿದ್ಧರಾಮರು” : ಎಡಿಸಿ ಬಿ.ಟಿ. ಕುಮಾರಸ್ವಾಮಿ

---Advertisement---

ಚಿತ್ರದುರ್ಗ. ಜ.14: ಕಾಯಕಯೋಗಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಸಿದ್ದರಾಮರು ಕಾಯಕದ ಮೂಲಕ ಕೈಲಾಸ ಕಂಡವರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಭಕ್ತಿ ಹಾಗೂ ಕಾಯಕ ನಿಷ್ಠೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಸಿದ್ಧರಾಮೇಶ್ವರರು ಕೈಗೊಂಡರು. ಸಿದ್ಧರಾಮೇಶ್ವರರು ವಚನಗಳ ಜತೆಗೆ ಕಾಯಕ ಜೀವಿಗಳಾಗಿ ಕಾಯಕವೇ ಕೈಲಾಸ ಎಂಬ ಮಾತಿಗೆ ಕಟಿಬದ್ಧರಾಗಿ ಕಾಯಕಯೋಗಿ ಆಗಿದ್ದರು ಎಂದು ಬಣ್ಣಿಸಿದರು.

 

ಬಸವಣ್ಣ, ಅಲ್ಲಮಪ್ರಭು ಅವರ ಅನುಭವ ಮಂಟಪದಲ್ಲಿ ಸಿದ್ದರಾಮೇಶ್ವರರು ಹಿರಿಯ ಶರಣರಾಗಿ, ಕಾಯಕಕ್ಕೆ ಮಹತ್ವ ನೀಡಿ, ಕೆರೆ-ಕಟ್ಟೆಗಳನ್ನು ಕಟ್ಟಿಸುವ ಮೂಲಕ ಜೀವನಾಡಿಗೆ, ರೈತರ ಬದುಕು ಹಸನಾಗಲು ಶ್ರಮಿಸಿದರು.  ಇದರ ಜತೆಗೆ ವಚನಗಳ ಮೂಲಕ ಜನರ ಆಡು ಮಾತಿನಲ್ಲಿ,  ಜನರ ಮನಸ್ಸಿಗೆ ನಾಟುವ ರೀತಿಯಲ್ಲಿ ಅಂದಿನ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಜನರ ಮೂಢನಂಬಿಕೆ, ಅಂಧಕಾರ ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ. ಶರಣರು ಕೊಟ್ಟಂತಹ ಮಾರ್ಗರ್ಶನ ಹಾಗೂ ವಚನಗಳು ಇಂದಿನ ಬದುಕಿಗೆ ತುಂಬಾ ಅರ್ಥಪೂರ್ಣವಾಗಿವೆ ಎಂದು ಅಭಿಪ್ರಾಯಪಟ್ಟರು.

 

ಇತ್ತೀಚಿನ ದಿನಗಳಲ್ಲಿ ಮಹನೀಯರ ಜಯಂತಿಗಳನ್ನು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಮಹನೀಯರು ಜಾತಿ  ಮೀರಿದ, ನಿಜವಾದ ಜಾತ್ಯತೀತರು ಎಂದು ತಿಳಿಸಿದ ಅವರು, ಶರಣರು ಕಾಯಕದ ಜತೆಗೆ ಸಾಹಿತ್ಯ ಮತ್ತು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ದಾಸೋಹ ಪರಂಪರೆ ಕಟ್ಟಿಕೊಟ್ಟವರು ಬಸವಾದಿ ಶಿವಶರಣರು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಸಾಹಿತಿ ನಿರಂಜನ ದೇವರಮನೆ ಉಪನ್ಯಾಸ ನೀಡಿ, ಇಡೀ ಮಾನವ ಕುಲಕ್ಕೆ ಉಪಯುಕ್ತ ಚಿಂತನೆಗಳನ್ನು, ಸದ್ಭಾವನೆಗಳನ್ನು ಹಾಗೂ ಸತ್ ಕ್ರಿಯೆಗಳನ್ನು ನೀಡಿದವರು ಸಿದ್ದರಾಮೇಶ್ವರರು.  ಸಿದ್ದರಾಮೇಶ್ವರರ ಸ್ಮರಣೆ ಎಂದರೆ ನಮ್ಮ ಬದುಕಿನಲ್ಲಿ  ಆಧ್ಯಾತ್ಮಿಕ ಸಂಪತ್ತು ಹಾಗೂ ಮೌಲ್ಯಗಳನ್ನು ಆರಾಧಿಸಿಕೊಂಡಂತೆ ಎಂದು ತಿಳಿಸಿದ ಅವರು, ಸಿದ್ದರಾಮೇಶ್ವರರ ಪರಿಕಲ್ಪನೆಗಳು ಹಾಗೂ ಚಿಂತನೆಗಳು ಬಹು ವಿಶೇಷದಿಂದ ಕೂಡಿವೆ ಎಂದು ಹೇಳಿದರು.

 

ಮಾನವೀಯತೆಯೇ ಶ್ರೇಷ್ಠ ಧರ್ಮ, ಶ್ರಮವೇ ನಿಜವಾದ ಭಕ್ತಿ ಎಂದು ಸಾರಿದ ಮಹಾನುಭಾವ ಸಿದ್ಧರಾಮರು, ಕೇವಲ ವಚನಗಳನ್ನು ಬರೆಯಲಿಲ್ಲ, ವಚನಗಳಂತೆ ಬದುಕಿದವರು. ಸಿದ್ದರಾಮರು ನಿಜ ಶರಣರು. ಸಮಾಜವನ್ನು ಬದಲಿಸಲು ಪ್ರಯತ್ನಿಸಿದವರು. ಧರ್ಮವನ್ನು ಮಾನವೀಯ ನೆಲೆಯಲ್ಲಿ ಕಟ್ಟಿದವರು ಎಂದು ತಿಳಿಸಿದರು.
ಆಧಾತ್ಯ ಮತ್ತು ತತ್ವಶಾಸ್ತ್ರವನ್ನು ಜನ ಸಾಮಾನ್ಯರ ಭಾಷೆಗೆ ಇಳಿಸಿದವರು ಸಿದ್ದರಾಮರು, ವಿಚಾರ ಮತ್ತು ಬದುಕನ್ನು ಒಂದಾಗಿಸಿದ ಶ್ರೇಷ್ಠ ದಾರ್ಶನಿಕ. ಕರ್ಮಯೋಗಿಯಾಗಿ, ಜ್ಞಾನಯೋಗಿಯಾಗಿ, ಶಿವಯೋಗಿಯಾದವರು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಮಾತನಾಡಿ, ಸಿದ್ಧರಾಮೇಶ್ವರರು ಕಾಯಕವೇ ಕೈಲಾಸ ಎಂಬ ತತ್ವವನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ ಶರಣರು ಎಂದು ಹೇಳಿದರು.

 

ಲೋಕೋಪಯೋಗಿ, ಜನಹಿತ ಕಾರ್ಯಗಳಿಂದ ಎಲ್ಲರ ಬದುಕು ಬೆಳೆಸಿದ ಕಾಯಕಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ, ಶ್ರೀ ಸಿದ್ಧರಾಮೇಶ್ವರರು 12ನೇ ಶತಮಾನದಲ್ಲಿ ಮಹಾರಾಷ್ಟ್ರದ ಸೊಲ್ಲಾಪುರ (ಸೊನ್ನಲಿಗೆ) ಜಿಲ್ಲೆಯ ಮುಧಗಿ ಎಂಬಲ್ಲಿ ತಂದೆ ಮೌದ್ಗಲ್ಯ ಮುನಿ, ತಾಯಿ ಸುಜ್ಞಾನಾದೇವಿ ಅವರ ಮಗನಾಗಿ ಬಡಕುಟುಂಬದಲ್ಲಿ ಜನಿಸಿದ ಮಹಾನ್ ವ್ಯಕ್ತಿ. ಶಿವಯೋಗಿ ಸಿದ್ಧರಾಮರು ಅಂದರೆ ಕಾಯಕದಿಂದ ಕೈಲಾಸ ಕಂಡವರು ಹಾಗೂ ಬಸವಣ್ಣನ ಅತ್ಯಂತ ಪ್ರೀತಿಪಾತ್ರರಾಗಿದ್ದರು. ಸಿದ್ಧರಾಮೇಶ್ವರರು ಕಾಯಕವೇ ಕೈಲಾಸ ಎನ್ನುತ್ತಾ ಬಡಜನರಿಗೆ ಕೃಷಿಯ ಕಡೆ ಒಲವು ತೋರಿಸಲು ಹಲವಾರು ಕೆರೆ- ಕಟ್ಟೆಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.

ಜಯಂತಿ ಅಂಗವಾಗಿ ಮೊಳಕಾಲ್ಮುರು ತಾಲ್ಲೂಕು ಸಿದ್ದಯ್ಯನಕೋಟೆಯ ನುಂಕೇಶ್ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಖಜಾಂಚಿ ಇ.ಮಂಜುನಾಥ್, ಮುಖಂಡರಾದ ಪರಮೇಶ್ವರಪ್ಪ, ತುಳಸಿ ರಮೇಶ್, ವೀರೇಶ್, ಗೌನಹಳ್ಳಿ ಗೋವಿಂದಪ್ಪ, ಗೀತಾ ಗೋವಿಂದರಾಜ್, ದೇವರಾಜ್, ಹನುಮಂತಪ್ಪ ಸೇರಿದಂತೆ ಹಲವು ಗಣ್ಯರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now