ಬೆಂಗಳೂರು: ಸರ್ಕಾರಕ್ಕೆ ಅಬಕಾರಿಯಿಂದ ದೊಡ್ಡಮಟ್ಟಕ್ಕೇನೆ ಲಾಭವಿದೆ. ಈ ವರ್ಷವಂತು ಕೊನೆಯ ಮೂರೇ ಮೂರು ದಿನದಲ್ಲಿಯೇ ಕೋಟಿ ಕೋಟಿ ಲಾಭವಾಗಿದೆ. 29-30-31 ಈ ಮೂರು ದಿನದಲ್ಲಿ ಮದ್ಯ ಮಾರಾಟ ಜಾಸ್ತಿನೆ ಆಗಿದೆ. ಹಾಗಾದ್ರೆ ಮಾರಾಟವಾದ ಮದ್ಯ ಎಷ್ಟು..? ಲಾಭವಾಗಿದ್ದು ಎಷ್ಟು ಎಂಬುದನ್ನು ತಿಳಿಯಲು ಮುಂದೆ ಓದಿ.
2025 ಡಿಸೆಂಬರ್ 29, 30, 31ರ ಮೂರು ದಿನಗಳ ಲೆಕ್ಕಚಾರವನ್ನ ನೋಡುವುದಾದರೆ ಐಎಂಎಲ್ 9.84 ಲಕ್ಷ ಬಾಕ್ಸ್ ವ್ಯಾಪಾರವಾಗಿದೆ. ಈ ವರ್ಷ ಬಿಯರ್ 6.64 ಲಕ್ಷ ಬಾಕ್ಸ್ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ 1.61 ಲಕ್ಷ ಬಾಕ್ಸ್ ಹೆಚ್ಚುವರಿಯಾಗಿ ಮಾರಾಟವಾಗಿದೆ. ಈ ಮೂಲಕ ಐಎಂಎಲ್ ಮತ್ತು ಬಿಯರ್ ಮಾರಾಟದಿಂದ ಅಬಕಾರಿ ಇಲಾಖೆಗೆ 587.51 ಕೋಟಿ ಆದಾಯ ಬಂದಿದೆ.
ಕಳೆದ 2024 ಡಿಸೆಂಬರ್ 29-30-31ರ ಮೂರು ದಿನಗಳ ಮದ್ಯ ಮಾರಾಟವನ್ನು ನೋಡುವುದಾದರೆ, 8.25 ಲಕ್ಷ ಬಾಕ್ಸ್ ಐಎಂಎಲ್ ಮಾರಾಟವಾಗಿದ್ರೆ , ಬಿಯರ್ 5.03 ಲಕ್ಷ ಬಾಕ್ಸ್ ಮಾರಾಟವಾಗಿತ್ತು. ಬಿಯರ್ ಮತ್ತು ಐಎಂಎಲ್ ಮಾರಾಟದಿಂದ ಕಳೆದ ವರ್ಷ 420.77 ಕೋಟಿ ಆದಾಯವನ್ನು ಅಬಕಾರಿ ಇಲಾಖೆ ಗಳಿಸಿತ್ತು. ಹೊಸ ವರ್ಷ ಬರ್ತಾ ಇದೆ ಅಂದ್ರೆ ಜನ ಸೆಲೆಬ್ರೇಷನ್ ಗೆ ಪ್ಲ್ಯಾನ್ ಮಾಡಿಕೊಳ್ತಾರೆ. ಒಂದಷ್ಟು ಜನ ಮನೆಯಲ್ಲಿಯೇ ಪಾರ್ಟಿ ಮಾಡಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಬ್ ಗಳಲ್ಲೂ ಅದ್ದೂರಿಯಾಗಿ ಪಾರ್ಟಿ ಮಾಡಿದ್ದಾರೆ. ಹೀಗಾಗಿಯೇ ಬಿಯರ್ ಬಾಟೆಲ್ ಗಳ ಮಾರಾಟ ಜೋರಾಗಿಯೇ ಖರ್ಚಾಗಿದೆ. ಸರ್ಕಾರದ ಖಜಾನೆಗೂ ಒಳ್ಳೆ ಲಾಭವೂ ಬಂದಿದೆ.















