ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 28 : ಪೊಲೀಸರು ದಿ. ಡಾ. ಕೆ. ಮಧುಕರ್ ಶೆಟ್ಟಿಯವರನ್ನು ಆದರ್ಶಪ್ರಾಯವಾಗಿ ಸ್ವೀಕರಿಸಿ ಕೆಲಸ ಮಾಡಬೇಕು ಮತ್ತು ಕರ್ತವ್ಯಪ್ರಜ್ಞೆ ಮೆರೆಯಬೇಕು ಎಂದು ಕೆಆರ್ ಎಸ್ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮಹೇಶ್ ಸಿ ನಗರಂಗೆರೆ ಯವರು ಮನವಿ ಮಾಡಿದರು.
ಅವರು ನಗರದ ಚಳ್ಳಕೆರೆ ಪೊಲೀಸ್ ಠಾಣೆಗೆ ಕೆಆರ್ ಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ದೇಶ ಮತ್ತು ರಾಜ್ಯ ಕಂಡ ಧೈರ್ಯವಂತ, ಪ್ರಾಮಾಣಿಕ, ದಕ್ಷ IPS ಅಧಿಕಾರಿಗಳಲ್ಲಿ ಒಬ್ಬರಾದ ದಿ. ಡಾ. ಕೆ. ಮಧುಕರ್ ಶೆಟ್ಟಿ ಯವರ ಪುಣ್ಯ ತಿಥಿಯಂದು ಸಲುವಾಗಿ ಅವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿ ಗೌರವ ಸಲ್ಲಿಸಿದರು.
ಏಳು ವರ್ಷಗಳ ಹಿಂದೆ, 28-12-2018ರಂದು, ಅನಾರೋಗ್ಯದಿಂದಾಗಿ ಹಠಾತ್ ನಿಧನರಾದ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಬಗ್ಗೆ ಗೊತ್ತಿಲ್ಲದ ಮತ್ತು ಗೌರವವಿಲ್ಲದ ಒಬ್ಬನೇ ಒಬ್ಬ ಪೊಲೀಸ್ ಸಹ ರಾಜ್ಯದಲ್ಲಿಲ್ಲ. ಅತ್ಯುನ್ನತ ವಿದ್ಯಾಭ್ಯಾಸ ಪಡೆದಿದ್ದ ಮತ್ತು ನಾಡಿನ ಜನರ ಬಗ್ಗೆ ಕಾಳಜಿಯಿದ್ದ, ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದ್ದ ಕರ್ನಾಟಕದ ಮಣ್ಣಿನಮಗ ಮಧುಕರ್ ಶೆಟ್ಟರು ಕೇವಲ ಪೊಲೀಸ್ ಇಲಾಖೆಗೆ ಮಾತ್ರವಲ್ಲ, ರಾಜ್ಯದ ಜನರ ಹೆಮ್ಮೆಯೂ ಹೌದು.
ಭ್ರಷ್ಟ ರಾಜಕಾರಣಿಗಳ ನಿದ್ದೆಗೆಡಿಸಿದ್ದ ಮಧುಕರ್ ಶೆಟ್ಟಿ ಕಳ್ಳರ ಸಂತೆಯಲ್ಲಿ ಸಂತನೊಬ್ಬ ಜೀವಿಸಿ ಕಾಲನ ಕರೆಗೆ ಒಗೊಟ್ಟು ನಿರ್ಗಮಿಸಿದ ಭಾವಜೀವಿ ಎಂಬುದನ್ನು ನೆನೆದರೆ ಸಂಕಟವಾಗುತ್ತೆ ಎಂದರು.
ಇಂದು ರಾಜ್ಯದ ಅನೇಕ ಕಡೆ ಪೊಲೀಸರ ಬಗ್ಗೆ ಕೆಟ್ಟ ಅಭಿಪ್ರಾಯ ಇದೆ. ಅದಕ್ಕೆ ಬಹಳ ದೊಡ್ಡ ಕಾರಣವೆಂದರೆ ಇಲಾಖೆಯಲ್ಲಿಯ ಭ್ರಷ್ಟಾಚಾರ. ಸಂವಿಧಾನ ಮತ್ತು ಕಾನೂನನ್ನು ಪಾಲಿಸಿ ನ್ಯಾಯ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸರೇ ಅನೇಕ ಕಡೆ ಅಪರಾಧಿ ಕೃತ್ಯಗಳಲ್ಲಿ ತೊಡಗಿರುವುದು, ಸಿಕ್ಕಿಬಿದ್ದು ನೌಕರಿಯಿಂದ ಅಮಾನತು/ವಜಾ ಆಗಿರುವುದು ಮತ್ತು ಜೈಲುಪಾಲಾಗಿರುವುದು ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ವರದಿಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದಿನ ಪೊಲೀಸರಿಗೆ ಮಧುಕರ್ ಶೆಟ್ಟರ ಆದರ್ಶ ಮತ್ತು ಕರ್ತವ್ಯಬದ್ಧತೆಯನ್ನು ನೆನಪಿಸುವುದು ಅತ್ಯಂತ ಅಗತ್ಯ ಎಂದು ಭಾವಿಸಿ, ರಾಜ್ಯದಲ್ಲಿ ಜನಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡು ಲಂಚಮುಕ್ತ, ಭ್ರಷ್ಟಾಚಾರಮುಕ್ತ, ಸರ್ವೋದಯದ ಕಲ್ಯಾಣ ಕರ್ನಾಟಕವನ್ನು ನಿರ್ಮಿಸಲು ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮಧುಕರ್ ಶೆಟ್ಟರ ಪುಣ್ಯತಿಥಿಯಾದ ಇಂದು, ರಾಜ್ಯದ ವಿವಿಧೆಡೆಯ ಪೊಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು ಮಧುಕರ್ ಶೆಟ್ಟರ ಭಾವಚಿತ್ರ ನೀಡಿ ಅದರೊಂದಿಗೆ ಈ ಮನವಿಯನ್ನು ಮಾಡಲಾಗುತ್ತಿದೆ.
ರಾಜ್ಯದ ಪ್ರಾಮಾಣಿಕ ಪೊಲೀಸರ ಬಗ್ಗೆ KRS ಪಕ್ಷದ ಸೈನಿಕರಿಗೆ ಅಪಾರವಾದ ಗೌರವ ಮತ್ತು ವಿಶ್ವಾಸವಿದ್ದು, ಪೊಲೀಸ್ ಇಲಾಖೆಯ ದಕ್ಷ ಮತ್ತು ಪ್ರಾಮಾಣಿಕ ಪೊಲೀಸರೆಲ್ಲರೂ ಜೊತೆಗೂಡಿ ಈಗ ಇಲಾಖೆಯ ಬಗ್ಗೆ ಜನರಲ್ಲಿರುವ ಕೆಟ್ಟ ಅಭಿಪ್ರಾಯ ಮತ್ತು ಅಪನಂಬಿಕೆಯನ್ನು ಬದಲಿಸುವ ನಿಟ್ಟಿನಲ್ಲಿ ಸಂಘಟಿತವಾಗಿ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಮನವಿ ಮಾಡುತ್ತೇವೆ.
ಈ ಸಂದರ್ಭದಲ್ಲಿ ಬಾಲರಾಜು N.ದೇವರಹಳ್ಳಿ ಜಿಲ್ಲಾ ಮುಖಂಡರು, ಕೃಷ್ಣಪ್ಪ ಅಧ್ಯಕ್ಷ, ಜಬಿವುಲ್ಲಾ ಉಪಾಧ್ಯಕ್ಷ, ಪಾಪಯ್ಯ ಪ್ರಧಾನ ಕಾರ್ಯದರ್ಶಿ, ಚಿತ್ತಯ್ಯ , ಶ್ರೀನಿವಾಸ, N.T ನಾಗರೆಡ್ಡಿ, ಮಂಜುನಾಥ್, ಅಂಜಿನಪ್ಪ, ತೇಜಸ್, ಹಾಗೂ ಸೈನಿಕರು ಉಪಸ್ಥಿತರಿದ್ದರು.






