Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಟಲ್ ಬಿಹಾರಿ ವಾಜಪೇಯಿರವರು ಮೌಲ್ಯಾಧಾರಿತ ರಾಜಕಾರಣಿ : ಸಂಸದ ಗೋವಿಂದ ಕಾರಜೋಳ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಡಿ. 25 : ಅಟಲ್ ಬಿಹಾರಿ ವಾಜಪೇಯಿರವರು ಮೌಲ್ಯಾಧಾರಿತವಾದ ರಾಜಕಾರಣಿಯಾಗಿದ್ದರು. ಅಧಿಕಾರಕ್ಕಾಗಿ ಅಡ್ಡದಾರಿಯನ್ನು ಹಿಡಿಯದೆ ನ್ಯಾಯಯುತವಾದ ದಾರಿಯಲ್ಲಿ ಅಧಿಕಾರವನ್ನು ಹಿಡಿಯುವುದರ ಮೂಲಕ ದೇಶದ ಅಭಿವೃದ್ದಿಯಲ್ಲಿ ತಮ್ಮದೆ ಆದ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.

 

ಭಾರತರತ್ನ ಮಾಜಿ ಪ್ರಧಾನಮಂತ್ರಿ ಆಟಲ್ ವಾಜಿಪೇಯಿರವರ ಜನ್ಮ ಶತಮಾನೋತ್ಸವ ಅಂಗವಾಗಿ ಭಾರತೀಯ ಜನತಾ ಪಾರ್ಟಿವತಿಯಿಂದ ನಗರದ ಎಸ್,ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಟಲ್ ವಿರಾಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಹಾಗೂ ದೇಶದ ಬಗ್ಗೆ ಅಪಾರವಾದ ಕಳಕಳಿಯನ್ನು ಹೊಂದಿದ್ದರು. ಏನೇ ಆದರೂ ಸಹಾ ದೇಶದ ಮೊದಲು ಎನ್ನುತ್ತಿದ್ದರು. ಅದು ಅವರಲ್ಲಿ ರಕ್ತವಾಗಿತ್ತು, ಬಡತನದಿಂದ ಬಂದವರಾಗಿದ್ದು ಬಡವರ ಬಗ್ಗೆ ಆಪಾರವಾದ ಕಾಳಿಜಿಯನ್ನು ಹೊಂದುವುದರ ಮೂಲಕ ತಮ್ಮ ಅಧಿಕಾರದ ಅವಧಿಯಲ್ಲಿ ಅವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡಿದರು, ಶಿಕ್ಷಣ, ರಸ್ತೆಗಳು ಅಭಿವೃದ್ದಿಯನ್ನು ಮಾಡುವುದರ ಮೂಲಕ ರಸ್ತೆ ನಿರ್ಮಾಣದಲ್ಲಿ ಕ್ರಾಂತಿಯನ್ನು ಮಾಡಿದರು ಎಂದರು.

ಅಂದು ಅವರು ಬೆಳಿಸಿದ ಬಿಜೆಪಿ ಇಂದು ದೇಶದಲ್ಲಿ ಹಲವಾರು ರಾಜ್ಯಗಳಲ್ಲಿ ತನ್ನ ಅಧಿಕಾರವನ್ನು ಹಿಡಿದಿದೆ. ಇದಕ್ಕೆ ವಾಜಿಪೇಯಿಯವರ ಪರಿಶ್ರಮ ಕಾರಣವಾಗಿದೆ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಮುಖ ರಾಜಕಾರಣಿ, ಮಹಾನ್ ವಾಗ್ಮಿ, ಕವಿ ಮತ್ತು ದೇಶಭಕ್ತ ನಾಯಕರಾಗಿದ್ದರು. ಭಾರತದ ಅತ್ಯಂತ ಗೌರವಾನ್ವಿತ ರಾಜಕೀಯ ನಾಯಕರು, ಚಿಂತಕರು ಹಾಗೂ ಕವಿಗಳಲ್ಲೊಬ್ಬರು. ಅವರು ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಸಮನ್ವಯ, ಸಂವಾದ ಮತ್ತು ರಾಷ್ಟ್ರಹಿತವನ್ನು ರಾಜಕೀಯದ ಕೇಂದ್ರದಲ್ಲಿ ಇರಿಸಿದರು. 1998 ರಿಂದ 2004ರವರೆಗೆ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಭಾರತವು ಆರ್ಥಿಕ, ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಹೆಜ್ಜೆಗಳನ್ನು ಇಟ್ಟಿತು. ಪೋಖ್ರಾನ್ ಅಣುಪರೀಕ್ಷೆ, ಸುವರ್ಣ ಚತುಷ್ಪಥ ಯೋಜನೆ, ಮತ್ತು ಪಾಕಿಸ್ತಾನ ಜೊತೆ ಶಾಂತಿ ಪ್ರಯತ್ನಗಳು ಅವರ ಆಡಳಿತದ ಪ್ರಮುಖ ಸಾಧನೆಗಳಾಗಿವೆ ಎಂದು ತಿಳಿಸಿದರು.

 

ಶಾಸಕರಾದ ಡಾ.ಎಂ. ಚಂದ್ರಪ್ಪ ಮಾತನಾಡಿ, ವಾಜಪೇಯಿ ರವರು ಕಠಿಣ ತತ್ವಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಾಪಾಡಿದ ನಾಯಕರು, “ರಾಜಕಾರಣದಲ್ಲಿ ವಿರೋಧವಿದ್ದರೂ ದ್ವೇಷ ಇರಬಾರದು” ಎಂಬ ನಂಬಿಕೆ ಹೊಂದಿದವರಾಗಿದ್ದರು. ವಾಜಪೇಯಿ ರವರು ದೇಶದ ಹಿತವೇ ಮೊದಲಿಗಾಗಬೇಕು. ಪ್ರಾಮಾಣಿಕತೆ ಮತ್ತು ಶಿಸ್ತು ಜೀವನದ ಆಧಾರ, ಸಂವಾದ ಮತ್ತು ಸಹನಶೀಲತೆಯಿಂದ ದೇಶದ ಶಕ್ತಿಯಾಗಬೇಕು ಎಂದು ಯುವಜನರಿಗೆ ನೀಡಿದ ಸಂದೇಶ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಕೇವಲ ರಾಜಕಾರಣಿಯಲ್ಲ, ಒಬ್ಬ ಯುಗಪುರುಷ, ಅವರ ಜೀವನ ಮತ್ತು ಸಂದೇಶಗಳು ಇಂದಿಗೂ ಯುವಪೀಳಿಗೆಗೆ ಮಾರ್ಗದರ್ಶಕವಾಗಿವೆ. ಭಾರತವನ್ನು ಬಲಿಷ್ಠ, ಶಾಂತಿಪೂರ್ಣ ಮತ್ತು ಏಕತೆಯ ರಾಷ್ಟ್ರವನ್ನಾಗಿಸಲು ಅವರ ಕೊಡುಗೆ ಅನನ್ಯವಾಗಿದೆ ಎಂದು ತಿಳಿಸಿದರು.

ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜನ್ ಮಾತನಾಡಿ ಅಟಲ್ ಜೀ ರವರು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪ್ರಭಾವದಲ್ಲಿ ರಾಜಕೀಯ ಪ್ರವೇಶ ಮಾಡಿದರು. ಭಾರತೀಯ ಜನತಾ ಪಕ್ಷದ ಸ್ಥಾಪಕರಲ್ಲಿ ಪ್ರಮುಖರು. ಪಕ್ಷವನ್ನು ರಾಷ್ಟ್ರೀಯ ಮಟ್ಟಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ದಶಕಗಳ ಕಾಲ ಲೋಕಸಭೆ-ರಾಜ್ಯಸಭೆಗಳಲ್ಲಿ ಪ್ರಭಾವಿ ಧ್ವನಿ. ಬಲಿಷ್ಠ ರಾಷ್ಟ್ರದ ಜೊತೆಗೆ ಶಾಂತಿಯ ಹಾದಿ. ಪ್ರಜಾಪ್ರಭುತ್ವ ಗೌರವ, ಸಂವಿಧಾನ ಮತ್ತು ಸಂಸ್ಥೆಗಳ ಮೇಲಿನ ನಂಬಿಕೆ. ಮೈತ್ರಿ ರಾಜಕೀಯಕ್ಕೆ ದಿಕ್ಕು. ಎನ್‍ಡಿಎ ಮೂಲಕ ಸಹಕಾರದ ಮಾದರಿ, ಸಹಮತ ಮತ್ತು ಸಂಯಮ. ವಿರೋಧ ಪಕ್ಷಗಳಿಗೂ ಗೌರವ. ಕಠಿಣ ವಿಷಯಗಳಲ್ಲೂ ಮಿತಭಾಷೆ, ವಾಕ್ಚಾತುರ್ಯ, ಸಂಸತ್ತಿನೊಳಗಿನ ತರ್ಕಬದ್ಧ, ಸಂಸ್ಕೃತ ಭಾಷಣಗಳು, ಮಾನವೀಯತೆ, ಕವಿ ಮನಸ್ಸು-ರಾಜಕೀಯದಲ್ಲೂ ಮಾನವ ಮೌಲ್ಯಗಳಿಗೆ ಒತ್ತು. ರಾಷ್ಟ್ರೀಯ ಭದ್ರತೆಗಾಗಿ ಪೋಟ್ರಾನ್- ಅಣುಪರೀಕ್ಷೆಗಳು, ಬಲಿಷ್ಠ ರಕ್ಷಣಾತ್ಮಕ ನಿಲುವು, ಶಾಂತಿ ಪ್ರಯತ್ನ, ಲಾಹೋರ್ ಬಸ್ ಯಾತ್ರೆ-ಪಾಕಿಸ್ತಾನ ಜೊತೆ ಸಂವಾದಕ್ಕೆ ಕೈಚಾಚು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮೂಲಕ ರಸ್ತೆ ಚಾಲ ವಿಸ್ತರಣೆ, ಆರ್ಥಿಕತೆಯ ಸುಧಾರಣೆಗಳಿಗೆ ಮುಂದುವರಿಕೆ. ಖಾಸಗೀಕರಣಕ್ಕೆ ಹಂತ ಹಂತದ ಕ್ರಮ. ಬಹುಧ್ರುವ ವಿಶ್ವದಲ್ಲಿ ಭಾರತಕ್ಕೆ ಗೌರವ ಮತ್ತು ಸಂಬಂಧಗಳ ವಿಸ್ತರಣೆ. ಅಲ್ಪಾವಧಿ ಸರ್ಕಾರ-ಸಹಮತ ರಾಜಕೀಯದ ಅಗತ್ಯವನ್ನು ಎತ್ತಿ ತೋರಿಸಿದರು ಎಂದರು.

ಇದೇ ಸಂದರ್ಬದಲ್ಲಿ ವಾಜಿಪೇಯಿಯವರನ್ನು ಹತ್ತಿರದಲ್ಲಿ ಕಂಡು ಅವರನ್ನು ಮಾತನಾಡಿಸಿದ ಚಿತ್ರದುರ್ಗದ ರಾಘವೇಂದ್ರ ಹಾಗೂ ಪುಟ್ಟಸ್ವಾಮಿಯವರು ತಮ್ಮ ಹಾಗೂ ವಾಜಿಪೇಯಿಯವರ ಜೊತೆಗಿನ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ವಹಿಸಿದ್ದರು. ಸಮಾರಂಭದಲ್ಲಿ  ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಶ್ರೀಮತಿ ಶ್ಯಾಮಾಲ ಶಿವಪ್ರಕಾಶ್, ಗ್ರಾಮಾಂತರ ಮಂಡಲ ಅಧ್ಯಕ್ಷರಾದ ನಾಗರಾಜ್, ಬಾಳೇಕಾಯಿ ರಾಮದಾಸ್, ಮಾಜಿ ಅಧ್ಯಕ್ಷರಾದ ಎ.ಮುರಳಿ, ಖಂಜಾಚಿ ಮಾಧುರಿ ಗೀರೀಶ್, ಡಿಸಿಸಿ ಬ್ಯಾಂಕ್‍ನ ಮಾಜಿ ಅಧ್ಯಕ್ಷರಾದ ಲಕ್ಷ್ಮೀಕಾಂತ್, ಪಾಪೇಶ್ ನಾಯಕ್, ರತ್ನಮ್ಮ ಸೇರಿದಂತೆ ವಿವಿಧ ಮಂಡಲ ಮೋರ್ಚಾದ ಅಧ್ಯಕ್ಷರುಗಳು ಭಾಗವಹಿಸಿದ್ದರು.

ಇದಕ್ಕೂ ಮುನ್ನಾ ನಗರದಲ್ಲಿ ಸಮಾರಂಭದ ಗಣ್ಯರು ವಾಜಿಪೇಯಿಯವರ ಸ್ಮರಣೆಯ ಅಂಗವಾಗಿ ಸಸಿಗಳನ್ನು ನಡೆಲಾಯಿತು. ಮುರಾರ್ಜಿ ಪ್ರಾರ್ಥಿಸಿದರೆ, ಸಂಪತ್‍ಕುಮಾರ್ ಸ್ವಾಗತಿಸಿದರು ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now