ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ರಾಷ್ಟ್ರಭಕ್ತಿ, ಮಾನವೀಯತೆ ಮತ್ತು ಅಭಿವೃದ್ಧಿಯ ದಾರಿದೀಪ : ಮೋಹನ್ ಕುಮಾರ್ ಜಿ. ಹೆಚ್ ಅವರ ವಿಶೇಷ ಲೇಖನ

3 Min Read

ವಿಶೇಷ ಲೇಖನ :
ಮೋಹನ್ ಕುಮಾರ್ ಜಿ. ಹೆಚ್
ಜಿಲ್ಲಾ ಕಾರ್ಯದರ್ಶಿ, ಭಾರತೀಯ ಜನತಾ ಪಾರ್ಟಿ,ಚಿತ್ರದುರ್ಗ ಜಿಲ್ಲೆ.
Mob:9945376376

ಭಾರತದ ರಾಜಕೀಯ ಇತಿಹಾಸದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಅಪರೂಪದ ನಕ್ಷತ್ರ. ಅವರು ಕೇವಲ ರಾಜಕಾರಣಿಯಲ್ಲ; ರಾಷ್ಟ್ರದ ಅಂತಃಕರಣಕ್ಕೆ ಧ್ವನಿಯಾದ ಮಹಾನಾಯಕ. ಘೋಷಣೆಗಿಂತ ಕಾರ್ಯಕ್ಕೆ ಮಹತ್ವ ನೀಡಿದ ಅವರ ರಾಷ್ಟ್ರೀಯತೆ, ದೇಶದ ಏಕತೆ, ಸ್ವಾಭಿಮಾನ ಮತ್ತು ಶಾಂತಿಯ ಮೇಲಿನ ಆಳವಾದ ನಂಬಿಕೆಯಲ್ಲಿ ವ್ಯಕ್ತವಾಗಿತ್ತು. “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ” ಎಂಬ ಘೋಷಣೆಗೆ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಹೊಸ ಅರ್ಥ ಮತ್ತು ಶಕ್ತಿ ತುಂಬಿದವರು ವಾಜಪೇಯಿಯವರೇ.

1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ದಂಪತಿಗಳ ಪುತ್ರನಾಗಿ ಅಟಲ್ ಬಿಹಾರಿ ವಾಜಪೇಯಿಯವರು ಜನಿಸಿದರು. ತಂದೆ ಹಿಂದಿ ಶಿಕ್ಷಕ ಹಾಗೂ ಕವಿ; ತಾಯಿ ಸರಳತೆ ಮತ್ತು ಸಂಸ್ಕಾರದ ಪ್ರತೀಕ. ಈ ಸಾಂಸ್ಕೃತಿಕ ಹಿನ್ನೆಲೆಯೇ ವಾಜಪೇಯಿಯವರ ವ್ಯಕ್ತಿತ್ವಕ್ಕೆ ಗಟ್ಟಿಯಾದ ಅಡಿಪಾಯವಾಯಿತು.

1939ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದ ಅವರು, ರಾಷ್ಟ್ರಸೇವೆಯ ದಾರಿಯನ್ನು ಆರಿಸಿಕೊಂಡರು. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ಭಾಗವಾದರು. ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ಅವರ ರಾಜಕೀಯ ಪಯಣ, ತತ್ವ, ತ್ಯಾಗ ಮತ್ತು ತಾಳ್ಮೆಯ ಮೂಲಕ ದೇಶದ ಪ್ರಧಾನಮಂತ್ರಿ ಸ್ಥಾನಕ್ಕೆ ಏರಿತು.

ವಿರೋಧಿಗಳನ್ನೂ ಗೌರವದಿಂದ ಕೇಳುವ ಸಂಸ್ಕೃತಿ, ಸೋಲಿನಲ್ಲೂ ಧೈರ್ಯ ಕಳೆದುಕೊಳ್ಳದ ಸ್ಥೈರ್ಯ, ಅಧಿಕಾರದಲ್ಲಿದ್ದರೂ ಅಹಂಕಾರವಿಲ್ಲದ ಸರಳ ಜೀವನ ಇವೆಲ್ಲವೂ ವಾಜಪೇಯಿಯವರ ನಾಯಕತ್ವದ ವಿಶಿಷ್ಟ ಲಕ್ಷಣಗಳು. ಅವರು ರಾಜಕೀಯವನ್ನು ದ್ವೇಷದ ವೇದಿಕೆಯಾಗಿ ಅಲ್ಲ, ಸಂವಾದ ಮತ್ತು ಸಂಯಮದ ಸಾಧನವಾಗಿ ರೂಪಿಸಿದರು.

1998ರಿಂದ 2004ರವರೆಗೆ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಭಾರತ ಹೊಸ ಆತ್ಮವಿಶ್ವಾಸದ ಹಾದಿಗೆ ಕಾಲಿಟ್ಟಿತು. ಪೋಖರಣ್ ಅಣುಪರೀಕ್ಷೆಗಳ ಮೂಲಕ ಭಾರತದ ಭದ್ರತೆ ಮತ್ತು ಸ್ವಾಭಿಮಾನವನ್ನು ಜಗತ್ತಿಗೆ ಸ್ಪಷ್ಟಪಡಿಸಲಾಯಿತು. ಗೋಲ್ಡನ್ ಕ್ವಾಡ್ರಿಲೇಟರಲ್ ಯೋಜನೆಯಡಿ ಸುಮಾರು 5,846 ಕಿಮೀ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಿಂದ ಆರ್ಥಿಕ ಚಟುವಟಿಕೆಗಳಿಗೆ ವೇಗ ದೊರೆಯಿತು. ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಿಂದ ಲಕ್ಷಾಂತರ ಹಳ್ಳಿಗಳಿಗೆ ರಸ್ತೆ ಸಂಪರ್ಕ ಸಿಗಿತು. ಟೆಲಿಕಾಂ ಸುಧಾರಣೆಗಳಿಂದ 2004ರ ವೇಳೆಗೆ ದೂರವಾಣಿ ಬಳಕೆದಾರರ ಸಂಖ್ಯೆ 10 ಕೋಟಿಯನ್ನು ಮೀರಿತು.

ಡಿಸೆಂಬರ್ 25, 2000ರಂದು ಆರಂಭವಾದ ಅಂತ್ಯೋದಯ ಅನ್ನ ಯೋಜನೆ (ಂಂಙ) ಬಡವರಲ್ಲಿ ಬಡವರಿಗೆ ಆಹಾರ ಭದ್ರತೆ ನೀಡುವ ಐತಿಹಾಸಿಕ ಹೆಜ್ಜೆಯಾಗಿತ್ತು. ಭೂಮಿಹೀನ ಕೃಷಿ ಕಾರ್ಮಿಕರು, ಸಣ್ಣ ರೈತರು, ವೃದ್ಧರು, ವಿಧವೆಯರು, ವಿಕಲಚೇತನರು, ಗ್ರಾಮೀಣ ಕುಶಲಕರ್ಮಿಗಳು, ದಲಿತರು ಮತ್ತು ಅತ್ಯಂತ ಹಿಂದುಳಿದ ವರ್ಗದವರಿಗೆ ತಿಂಗಳಿಗೆ 35 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಅತಿ ಕಡಿಮೆ ದರದಲ್ಲಿ (ಅಕ್ಕಿ 3 ರೂ./ಕೆಜಿ, ಗೋಧಿ 2 ರೂ./ಕೆಜಿ) ಒದಗಿಸಲಾಯಿತು. ಸಾಮಾಜಿಕ ನ್ಯಾಯವನ್ನು ವಾಜಪೇಯಿಯವರು ಘೋಷಣೆಯಲ್ಲಿ ಅಲ್ಲ, ಕಾರ್ಯರೂಪದಲ್ಲಿ ಅನುಷ್ಠಾನಗೊಳಿಸಿದರು.

ಸರ್ವ ಶಿಕ್ಷಣ ಅಭಿಯಾನದ ಮೂಲಕ ಗ್ರಾಮೀಣ ಹಾಗೂ ದಲಿತ ಮಕ್ಕಳಿಗೆ ಶಿಕ್ಷಣದ ಹೊಸ ಬಾಗಿಲುಗಳು ತೆರೆಯಲಾದವು. ವಿದೇಶಾಂಗ ನೀತಿಯಲ್ಲಿ ಲಾಹೋರ್ ಬಸ್ ಯಾತ್ರೆಯ ಮೂಲಕ “ನಾವು ಯುದ್ಧಕ್ಕೆ ಅಲ್ಲ, ಅಭಿವೃದ್ಧಿಗೆ” ಎಂಬ ಭಾರತದ ಸಂದೇಶವನ್ನು ಜಗತ್ತಿಗೆ ತಲುಪಿಸಿದ ವಾಜಪೇಯಿಯವರು, ಶಾಂತಿ ಮತ್ತು ಶಕ್ತಿಯ ಸಮತೋಲನದ ಪ್ರತೀಕರಾಗಿ ಉಳಿದರು.

ಡಿಸೆಂಬರ್ 25ರಂದು ಆಚರಿಸುವ ಅಟಲ್ ಬಿಹಾರಿ ವಾಜಪೇಯಿಯವರ ಹುಟ್ಟುಹಬ್ಬವು ಕೇವಲ ಸ್ಮರಣೆಯ ದಿನವಲ್ಲ; ರಾಷ್ಟ್ರಭಕ್ತಿ, ಮಾನವೀಯತೆ ಮತ್ತು ಸಂಯಮಿತ ರಾಜಕಾರಣದ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ನೆನಪಿಸುವ ಮಹತ್ವದ ದಿನವಾಗಿದೆ. ವಾಜಪೇಯಿಯವರ ಜೀವನ ಮತ್ತು ವಿಚಾರಧಾರೆಗಳು ಇಂದಿಗೂ ಭಾರತೀಯ ರಾಜಕಾರಣಕ್ಕೆ ದಾರಿದೀಪವಾಗಿವೆ.

ಅಟಲ್ ಬಿಹಾರಿ ವಾಜಪೇಯಿ ಪ್ರಮುಖ ಜೀವನ ಘಟನೆಗಳು (ಸಂಕ್ಷಿಪ್ತ ಕಾಲರೇಖೆ)
1924 ಗ್ವಾಲಿಯರ್ ಹತ್ತಿರ ಶಿಂದೆ ಕಿ ಚವ್ವಾಣಿಯಲ್ಲಿ ಜನನ
1939 ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆ
1942 ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಜೈಲು
1951 ಭಾರತೀಯ ಜನ ಸಂಘದ ಸ್ಥಾಪನೆ
1957 ಮೊದಲ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆ
1975 ತುರ್ತು ಪರಿಸ್ಥಿತಿಯಲ್ಲಿ ಬಂಧನ
1977 ವಿದೇಶಾಂಗ ಸಚಿವ; ಯುಎನ್ ಅಸೆಂಬ್ಲಿಯಲ್ಲಿ ಐತಿಹಾಸಿಕ ಭಾಷಣ
1980 ಭಾರತೀಯ ಜನತಾ ಪಾರ್ಟಿ ಸ್ಥಾಪನೆ; ಮೊದಲ ರಾಷ್ಟ್ರೀಯ ಅಧ್ಯಕ್ಷ
1996 13 ದಿನಗಳ ಪ್ರಧಾನಮಂತ್ರಿ ಪದವಿ
1998 2004 ಪೂರ್ಣಾವಧಿ ಪ್ರಧಾನಮಂತ್ರಿ
2005 ಸಕ್ರಿಯ ರಾಜಕಾರಣದಿಂದ ನಿವೃತ್ತಿ.

 

Share This Article
Enable Notifications OK No thanks