ಬೆಳಗಾವಿ: ಸರ್ಕಾರಕ್ಕೆ ಪಿಂಚಣಿ ಕೊಡಲು ಆಗುತ್ತಿಲ್ಲವೆಂದು ಹೇಳಿದ್ದ ವಿಜಯೇಂದ್ರ ಅವರ ಮಾತಿಗೆ ಬಸವರಾಜ ರಾಯರೆಡ್ಡಿ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ್ದು, ಹೊಸ ಸರ್ಕಾರ ಬಂದಾಗ 2 ಲಕ್ಷ 47 ಸಾವಿರ ಕೋಟಿ ರೂಪಾಯಿ ಕಾಮಗಾರಿಗಳ ಟೆಂಡರ್ ಕರೆದು ಬಿಟ್ಟರು. ಇದನ್ನ ಯಾರು ಸರಿಯಾಗಿ ಹೇಳ್ತಾ ಇಲ್ಲ. ಕರೆದು ಹೋಗಿ ಬಿಟ್ಟವರು ಅವರು, ಈಗ ಪೇಮೆಂಟ್ ಮಾಡ್ತಾ ಇರೋದು ನಾವು. ಅದು ನಮಗೆ ಬರ್ಡನ್ ಆಗಿರೋದು. ಗ್ಯಾರಂಟಿ ಅಲ್ಲ ಗ್ಯಾರಂಟಿ ಯಾವತ್ತಿಗೂ ನಿಲ್ಲುವುದಿಲ್ಲ.
ನಮ್ಮ ಸಿದ್ದರಾಮಯ್ಯ ಅವರು ಒಳ್ಳೆಯ ಮುಖ್ಯಮಂತ್ರಿ ಹಾಗೂ ಒಳ್ಳೆಯ ಹಣಕಾಸು ಮಂತ್ರಿಯಾಗಿದ್ದಾರೆ. ನಾನು ಆರ್ಥಿಕ ಸಲಹೆಗಾರನಿದ್ದೇನೆ. ಹಾಗಾಗಿ ನನಗೂ ಎಲ್ಲವೂ ಗೊತ್ತಿದೆ. ಈ ವರ್ಷ 4 ಲಕ್ಷ 80 ಸಾವಿರ ಕೋಟಿ ಬಜೆಟ್ ಕೊಟ್ಟಿದ್ದೇವೆ. ಬಹುತೇಕ ಮುಂದಿನ ಸಲ 4 ಲಕ್ಷ 30 ಸಾವಿರ ಕೋಟಿ ಕೊಡ್ತೇವೆ. ಬಜೆಟ್ ಪ್ರಿಪೇರ್ ಮಾಡ್ತಾ ಇದ್ದೇವೆ. ಒಳ್ಳೆಯ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಇನ್ನು ಎರಡೂವರೆ ವರ್ಷ ಮಾಡುತ್ತೇವೆ ಎಂದಿದ್ದಾರೆ.

ಪಿಂಚಣಿ ಕೊಡುವುದಕ್ಕೂ ಹಣವಿಲ್ಲವಂತಲ್ಲ ಎಂದು ವಿಜಯೇಂದ್ರ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಇದೆಲ್ಲಾ ನಾನ್ ಸೆನ್ಸ್. ಯಾರೀ ಅವರು ಕರ್ಕೊಂಡ್ ಬನ್ನಿ ಹೇಳಿದವರು. ಒಂದು ತಿಂಗಳು ತಡವಾಗಿರಬಹುದು. ಜಿಎಸ್ಟಿ ಹಣ ಬಂದ್ರೆ ತಾನೇ ಕೊಡುವುದು. ಕೇಂದ್ರ ಸರ್ಕಾರಕ್ಕೆ ಹೋಗುತ್ತೆ. ಅವರು 50 ತಗೊಂಡು ನಮಗೆ 50 ಕೊಡ್ತಾರೆ. ಅವರು ಕೊಡುವುದು ತಡವಾದಾಗ ಇಲ್ಲಿ ಕೊಡುವುದು ತಡವಾಗುತ್ತೆ. ಗೃಹ ಲಕ್ಷ್ಮೀಯದ್ದು ಯಾವುದೇ ಸಮಸ್ಯೆ ಇಲ್ಲ ಕೊಡ್ತಾ ಇದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.










