Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

10ನೇ ತರಗತಿ ಪರೀಕ್ಷೆಯಲ್ಲಿ 77% ಅಂಕ ಗಳಿಸಿದ 61ರ ‘ಯಂಗ್’ ಅಜ್ಜಿ!

---Advertisement---

ಸುದ್ದಿಒನ್,ಜಲಂಧರ್,ಮೇ.14: ಕಲಿಯುವ ಹಂಬಲವಿದ್ದರೆ ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬ ಮಾತನ್ನು ಪಂಜಾಬ್‌ನ 61 ವರ್ಷದ ಅಜ್ಜಿಯೊಬ್ಬರು ಸಾಬೀತುಪಡಿಸಿದ್ದಾರೆ. ದಶಕಗಳ ಕಾಲ ಮನಸ್ಸಿನಲ್ಲೇ ಅಡಗಿದ್ದ ಓದಿನ ಆಸೆಯನ್ನು ಈ ವಯಸ್ಸಿನಲ್ಲಿ ಈಡೇರಿಸಿಕೊಳ್ಳುವ ಮೂಲಕ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಜಲಂಧರ್ ಜಿಲ್ಲೆಯ ನಕೋದರ್ ತಾಲ್ಲೂಕಿನ ಸರ್ಹಾಲಿ ಗ್ರಾಮದ ನಿವಾಸಿಯಾದ ನರೇಂದ್ರ ಕೌರ್, ಪಂಜಾಬ್ ಶಾಲಾ ಶಿಕ್ಷಣ ಮಂಡಳಿ (PSEB) ಇತ್ತೀಚೆಗೆ ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಒಟ್ಟು 650 ಅಂಕಗಳಲ್ಲಿ 500 ಅಂಕಗಳನ್ನು (ಶೇ. 77) ಗಳಿಸುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

ನರೇಂದ್ರ ಕೌರ್ ಅವರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದರು. ಅಂದಿನ ಕಾಲದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇರಲಿಲ್ಲ ಮತ್ತು ಸಂಸಾರದ ಜವಾಬ್ದಾರಿ ಹೆಗಲಿಗೇರಿದ ಕಾರಣ ಅವರ ಶಾಲಾ ಜೀವನ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಆದರೆ, ಶಿಕ್ಷಣದ ಮೇಲಿದ್ದ ಅವರ ಪ್ರೀತಿ ಮಾತ್ರ ಬತ್ತಿರಲಿಲ್ಲ. ಕೊನೆಗೂ ಶಹೀದ್ ಭಾಯ್ ತಾರಾ ಸಿಂಗ್ ಖಾಲ್ಸಾ ಹಿರಿಯ ಪ್ರಾಥಮಿಕ (ಮುಕ್ತ) ಶಾಲೆಯ ಮೂಲಕ ಪರೀಕ್ಷೆ ಬರೆದು ದಶಕಗಳ ಹಳೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇಬ್ಬರು ಮೊಮ್ಮಕ್ಕಳನ್ನು ಹೊಂದಿರುವ ನರೇಂದ್ರ ಕೌರ್ ಅವರ ಈ ಸಾಹಸಕ್ಕೆ ಕುಟುಂಬದ ಸಂಪೂರ್ಣ ಬೆಂಬಲ ದೊರೆತಿದೆ. ಇವರ ಇಬ್ಬರು ಪುತ್ರರು ಅಮೆರಿಕ ಮತ್ತು ಕೆನಡಾದಲ್ಲಿ ನೆಲೆಸಿದ್ದು, ತಾಯಿಯ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. “ಜೀವನದ ಈ ಹಂತದಲ್ಲಿ ಪುಸ್ತಕ ಹಿಡಿಯಲು ಸಂಕೋಚ ಪಡಬಾರದು” ಎಂಬುದು ಇವರ ನಿಲುವಾಗಿದೆ.

Join WhatsApp

Join Now

Join Telegram

Join Now