ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,ಸೆಪ್ಟೆಂಬರ್. 26 : ಬ್ರಹ್ಮಶ್ರಿ ನಾರಾಯಣ ಗುರೂಜಿ ನಿಗಮಕ್ಕೆ ಐದು ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವುದು ಸೇರಿದಂತೆ ಹದಿನಾರು ಬೇಡಿಕೆಗಳ ಈಡೇರಿಕೆಗಾಗಿ ಜ.6 ರಂದು ಕಲ್ಬುರ್ಗಿ ಜಿಲ್ಲೆಯ ಶಕ್ತಿ ಪೀಠದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲಾಗುವುದೆಂದು ಡಾ.ಪ್ರಣವಾನಂದಸ್ವಾಮಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಗಣತಿಯಲ್ಲಿ ಈಡಿಗ ಎಂದು ಬರೆಸಬೇಕು. 26 ಪಂಗಡಗಳಿವೆ. ಶಿವಮೊಗ್ಗದಲ್ಲಿ ದೀವರು ಎಂದು ಬರೆಸುತ್ತಾರೆ, ಮಂಗಳೂರು ಉಡುಪಿಯಲ್ಲಿ ಬಿಲ್ಲವ, ಹಾವೇರಿಯಲ್ಲಿ ಈಳಿಗರು ಎಂದು ತಲ ತಲಾಂತರಗಳಿಂದ ಬರೆಸುತ್ತಿದ್ದಾರೆ. ಕಾಲಂ-10 ರಲ್ಲಿ ಈಡಿಗ, ಕಾಲಂ 9 ರಲ್ಲಿ ಅವರವರ ಜಾತಿ ಬರೆಸಿಕೊಳ್ಳಲಿ ಎಂದು ಸ್ವಾಮೀಜಿ ಮನವಿ ಮಾಡಿದರು.
ಹಿಂದುಳಿದ ವರ್ಗದವರಿಗೆ ಯಾವುದಾದರೂ ಸೌಲಭ್ಯ ಕೊಡಲಿ, ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಿ ನಮ್ಮದೇನು ಅಭ್ಯಂತರವಿಲ್ಲ. ಸೇಂದಿ ಸಾರಾಯಿ ಮಾರಾಟ ಮಾಡಿಕೊಂಡು ಬದುಕಿದ ಸಮಾಜ ನಮ್ಮದು. ಬೆಂಗಳೂರಿನ ವಿಧಾನಸೌಧದ ಮುಂಭಾಗ ನಾರಾಯಣ ಗುರೂಜಿಗಳ ಪುತ್ಥಳಿ ನಿರ್ಮಾಣವಾಗಬೇಕು. ಸೇಂದಿ ಮಾರಾಟ ಬಂದ್ ಮಾಡಿರುವುದರ ಹಿಂದೆ ರಾಜಕೀಯ ಹುನ್ನಾರವಿದೆ. ಗೋಮಾಳ ಜಮೀನುಗಳನ್ನು ನಮ್ಮ ವಶಕ್ಕೆ ಕೊಡಿ. ಎಂದು ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ 42 ದಿನಗಳ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಹಿರಿಯೂರು ತಾಲ್ಲೂಕಿನ ಪಿಲಾಜನಹಳ್ಳಿಯಲ್ಲಿ ಸೆ.27 ರಂದು ಬೆಳಿಗ್ಗೆ 10-30 ರಿಂದ ಸಂಜೆ ಐದು ಗಂಟೆಯತನಕ ಚಿಂತನ ಚರ್ಚೆ ನಡೆಯಲಿದೆ. ಬಿ.ಕೆ.ಹರಿಪ್ರಸಾದ್ ಸೇರಿದಂತೆ ಈಡಿಗ ಸಮಾಜದ ಅನೇಕ ಮುಖಂಡರುಳು ಭಾಗವಹಿಸಲಿದ್ದಾರೆಂದು ಹೇಳಿದರು.
ಬಿಜೆಪಿ.ಯಲ್ಲಿ ನಮ್ಮ ಸಮಾಜದ ಇಬ್ಬರಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರೆ ಮಂತ್ರಿಯಿದ್ದಾರೆ. ಆರು ಶಾಸಕರುಗಳು ಪಕ್ಷದಲ್ಲಿದ್ದಾರೆ. ಈಡಿಗರನ್ನು ಮುಗಿಸುವ ಕೆಲಸವಾಗುತ್ತಿದೆ. ಕೂಡಲ ಸಂಗಮ ಶ್ರೀಗಳನ್ನು ಉಚ್ಚಾಟಿಸಿರುವುದು ಸರಿಯಲ್ಲ. ಮತ್ತೆ ಸ್ವಾಮೀಜಿಗಳನ್ನು ಪೀಠದಲ್ಲಿ ಕೂರಿಸಬೇಕು. ಸರ್ಕಾರವೆ ಈಚಲು ಮರ ಬೆಳೆಸಿ ಕುಲಕಸುಬು ಸೇಂದಿ ಮಾರುವುದನ್ನು ಕಳೆದುಕೊಂಡಿರುವ ನಮ್ಮ ಜನಾಂಗಕ್ಕೆ ತಲಾ ಎರಡು ಎಕರೆ ಜಮೀನು ಕೊಡಬೇಕೆಂದು ಡಾ.ಪ್ರಣವಾನಂದ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದರು.

ರಾಷ್ಟ್ರೀಯ ಈಡಿಗ ಮಹಾ ಮಂಡಳಿ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ್‍ಕುಮಾರ್, ಮೋಹನ್‍ಕುಮಾರ್, ರಮೇಶ್‍ಕುಮಾರ್, ಲೋಕೇಶ್, ಜಯಕುಮಾರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.
















