ಶ್ರೀ ಮುರುಘಾಮಠದಲ್ಲಿ 40 ಜೋಡಿ  ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ವಿಶ್ವಪರಿಸರ ದಿನಾಚರಣೆ

suddionenews
1 Min Read

ಚಿತ್ರದುರ್ಗ,(ಜೂ.05) : ಪರಿಸರ ನಮ್ಮ ಜೀವ. ಗಿಡ ಮರಗಳದ್ದು ನಿಸ್ವಾರ್ಥ ಜೀವನ. ಒಂದು ಮರ ಎಲ್ಲಾ ಹಂತದಲ್ಲೂ ಪರೋಪಕಾರ ಜೀವನ ಸಾಗಿಸುತ್ತದೆ. ಯಾರೇ ಬಂದರೂ ನೆರಳು ಕೊಡುತ್ತದೆ. ಪರೋಪಕಾರ ಮಾಡಿದರೆ ಬದುಕು ಅರ್ಥಪೂರ್ಣವಾಗಿರುತ್ತದೆ ಎಂದು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಹಾಗು ಕರ್ನಾಟಕ ಅರಣ್ಯ ಇಲಾಖೆ, ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಮೂವತ್ತೆರಡನೆ ವರ್ಷದ 6ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

ಇಂದು ಜಗತ್ತಿನಾದ್ಯಂತ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬರೀ ಮಕ್ಕಳ ಸಂತಾನ ಮಾತ್ರವಲ್ಲ, ವೃಕ್ಷ ಸಂತಾನ ಬೆಳೆಸಬೇಕು. ನಮ್ಮ ಮನೆ ಸುತ್ತಮುತ್ತ ಗಿಡಮರಗಳನ್ನು ಬೆಳೆಸಿ ಪೋಷಿಸಬೇಕು. ಮರವೇ ಈ ಜಗತ್ತಿಗೆ ವರ. ನಮ್ಮಲ್ಲಿ ಮದುವೆಯಾಗುವ ಜೋಡಿಗಳು ಒಂದೊಂದು ಗಿಡವನ್ನು ಶ್ರೀಮಠದಲ್ಲಿ ನೆಡುತ್ತಾರೆ ಎಂದು ತಿಳಿಸಿದರು.

ಮುಖ್ಯಅತಿಥಿ ಚಿತ್ರದುರ್ಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷನಾಯ್ಕ ಮಾತನಾಡಿ, ಪೂರ್ವಿಕರು ಅನೇಕ ಗಿಡಮರಗಳನ್ನು ನೆಟ್ಟು ಪೋಷಿಸುತ್ತಿದ್ದರು. ಗೋಮಾಳದಲ್ಲಿ, ಕೆರೆ ಕಟ್ಟೆಗಳಲ್ಲಿ, ಮನೆಗಳ ಮುಂದೆ ಗಿಡ ಮರಗಳನ್ನು ನೆಡಬೇಕು. ಪ್ರಕೃತಿ ಸುಂದರವಾಗಿಡಲು ತಾವೆಲ್ಲ ಸಹಕರಿಸಬೇಕೆಂದು ಕರೆ ನೀಡಿದರು.

ಚಳ್ಳಕೆರೆಯ ಪೊಲೀಸ್ ಇನ್ಸ್‍ಪೆಕ್ಟರ್ ತಿಪ್ಪೇಸ್ವಾಮಿ ಮಾತನಾಡಿ, ನಾನು ಇಲ್ಲಿಯೇ 1997ರಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ವಿವಾಹವಾಗಿದ್ದು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇನೆ. ಸರಳ ಸಾಮೂಹಿಕ ವಿವಾಹಕ್ಕೆ ತಾವೆಲ್ಲ ಸಾಕ್ಷಿಯಾಗಿದ್ದೀರಿ. ಮದುವೆ ಹಿನ್ನೆಲೆಯಲ್ಲಿ ಆದಷ್ಟು ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಶ್ರೀಮಠದಲ್ಲಿ ಉತ್ತಮ ಸಂಸ್ಕಾರ, ಸಾಮರಸ್ಯ, ಸಹಬಾಳ್ವೆ ಸಿಗುತ್ತದೆ. ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲು ಅವಕಾಶ ಆಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 40 ಜೋಡಿಗಳ ವಿವಾಹ ನೆರವೇರಿತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಧು-ವರರು ಶ್ರೀಮಠದ ಆವರಣದಲ್ಲಿ ಸಸಿಗಳನ್ನು ನೆಟ್ಟು ನೀರೆರೆದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವಲಿಂಗದೇವರು ಸ್ವಾಗತಿಸಿದರು. ಪ್ರಕಾಶದೇವರು ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *