ಬೆಂಗಳೂರು; ರಾಜ್ಯದಲ್ಲಿ ಇನ್ನೊಂದು ಏರ್ಪೋರ್ಟ್ ಆಗುತ್ತೆ ಎಂಬುದೇ ಖುಷಿಯ ವಿಚಾರ. ಇದು ಚರ್ಚೆಗೆ ಬಂದಾಗಿನಿಂದಲೂ ಸ್ಥಳ ನಿಗದಿಯ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ತುಮಕೂರು, ರಾಮನಗರ, ಹೊಸೂರು ಹೀಗೆ. ಪ್ರಸ್ತುತ ಯೋಜನೆಯ ಸಾಕಾರಕ್ಕಾಗಿ ಮೂರು ಸ್ಥಳಗಳ ಪರಿಶೀಲನೆ ಮುಗಿದಿದೆ. ಇನ್ನೇನು ಕೇಂದ್ರದಿಂದ ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎಂಬ ಸೂಚನೆ, ಯೋಜನೆಗೆ ಅನುಮೋದನೆ ನೀಡುವುದು ಸೇರಿದಂತೆ ಕೆಲವು ಪ್ರಕ್ರಿಯೆ ಬಾಕಿ ಇದೆ. ಏರ್ಪೋರ್ಟ್ ನಿಲ್ದಾಣ ಯೋಜನೆ ಪ್ರಕ್ರಿಯೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಒಂದೇ ಹಂತದಲ್ಲಿವೆ. ಹೀಗಿದ್ದಾಗ ಕೇಂದ್ರದ ಒಲವು ಬಹಳ ಮುಖ್ಯವಾಗುತ್ತದೆ. ಯಾರ ಪರವಾಗಿ ನಿಲ್ಲಲಿದೆ ಅನ್ನೋದೆ ಬಹಳ ಮುಖ್ಯವಾಗುತ್ತದೆ.
ಈಗಾಗಲೇ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಬೆಂಗಳೂರಿನ ಕುಣಿಗಲ್ ಬಳಿ ಹಾಗೂ ಕನಕಪುರ ರಸ್ತೆಯ ಎರಡು ಕಡೆ ಗುರುತಿಸಲಾಗಿದ್ದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ಅಂಶಗಳ ಆಧಾರದಲ್ಲಿ ಎಲ್ಲಿ ನಿರ್ಮಿಸಿದರೆ ಸೂಕ್ತ ಎಂದು ಪರಿಶೀಲನೆ ನಡೆಸಿದ್ದಾರೆ. ಈ ತಂಡವೇ ಕೇಂದ್ರಕ್ಕೆ ಜಾಗವನ್ನು ಶಿಫಾರಸು ಮಾಡಲಿದೆ. ಬಳಿಕ ಕೇಂದ್ರ ಅದಕ್ಕೆ ಒಪ್ಪಿಗೆ ನೀಡಬೇಕಿದೆ. ಅತ್ತ ತಮಿಳುನಾಡು ಸರ್ಕಾರ ಸೂಚಿಸಿದ ಸ್ಥಳವನ್ನು ಕೇಂದ್ರದ ತಂಡ ಪರಿಶೀಲನೆ ಮಾಡಿಕೊಂಡು ಹೋಗಿದೆ.
ಎರಡು ರಾಜ್ಯಗಳು ಸಹ ಸದ್ಯಕ್ಕೆ ಏರ್ಪೋರ್ಟ್ ನಿರ್ಮಾಣದ ಒಪ್ಪಿಗೆ ಪಡೆಯುವುದಕ್ಕೆ ಕಸರತ್ತು ನಡೆಸುತ್ತಿವೆ. ಹೊಸೂರಿನಲ್ಲಿ ಏನಾದರೂ ಏರ್ಪೋರ್ಟ್ ನಿರ್ಮಾಣವಾದರೆ ಅದು ಆರ್ಥಿಕವಾಗಿ ಒತ್ತಡ ಬೀಳಲಿದೆ. ಹೀಗಾಗಿ ಕರ್ನಾಟಕ ಮೊದಲು ಏರ್ಪೋರ್ಟ್ ಒಪ್ಪಿಗೆ ಪಡೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎರಡನೇ ಏರ್ಪೋರ್ಟ್ ಯಾವ ಕಡೆ ಆಗಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತಿದೆ.
