ಅಸ್ಸಾಂ : ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಳಿ ಪ್ರಯಾಣಿಕರಿದ್ದ ಟ್ರಾವೆಲರ್ ವಾಹನವೊಂದು ಕಂಟೇನರ್ ಟ್ರಕ್ ಗೆ ಮುಖಾಮುಖಿ ಡಿಕ್ಕಿ ಹೊಡೆದ ಭೀಕರ ದೃಶ್ಯವೊಂದು ಟ್ರಕ್‌ನ ಡ್ಯಾಶ್‌ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಭೀಕರ ರಸ್ತೆ ದುರಂತದಲ್ಲಿ 24 ಜನರು ಪ್ರಾಣ ಕಳೆದುಕೊಂಡಿದ್ದು, 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ಯಾಮರಾದಲ್ಲಿ ಸೆರೆಯಾದ ಅಪಘಾತದ ದೃಶ್ಯ
ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ರೊಂಗಾಜನ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಟ್ರಾವೆಲರ್ ವಾಹನವು ತನ್ನ ಪಥವನ್ನು ಬಿಟ್ಟು ಏಕಾಏಕಿ ಟ್ರಕ್ ಕಡೆಗೆ ನುಗ್ಗಿ ಡಿಕ್ಕಿ ಹೊಡೆಯುವ ದೃಶ್ಯ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ವರದಿಗಳ ಪ್ರಕಾರ, ಈ ವಾಹನದಲ್ಲಿ ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರಿದ್ದರು. ವಾಹನವು ಟ್ರಕ್‌ನ ಪಥಕ್ಕೆ ನುಗ್ಗಲು ನಿಖರವಾದ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.
🚨 ASSAM'S KAZIRANGA HORROR CRASH: TERRIFYING MOMENTS CAUGHT ON TRUCK'S DASHCAM
The chilling visuals of the horrific road accident at Rongajan in Kaziranga have been captured on the dashcam of the truck involved in the collision.
The footage shows the terrifying moments of the… pic.twitter.com/3hdmSyHJGT
— Keshav Pareek (@_keshavpareek_) November 13, 2026
ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶನಿವಾರ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ, ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯ ಬಗ್ಗೆಯೂ ಅವರು ಪರಿಶೀಲನೆ ನಡೆಸಲಿದ್ದಾರೆ.
ಹೆದ್ದಾರಿಗಳ ಕಳಪೆ ಸ್ಥಿತಿಯ ಬಗ್ಗೆ ಗೌರವ್ ಗೊಗೊಯ್ ಕಳವಳ
ಈ ಭೀಕರ ಅಪಘಾತದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಅಸ್ಸಾಂನ ಹೆದ್ದಾರಿಗಳ ಕಳಪೆ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹೆದ್ದಾರಿ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಅವರು, ರಸ್ತೆಗಳ ಕಳಪೆ ಗುಣಮಟ್ಟವೇ ಇಂತಹ ಸಾಲು ಸಾಲು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೂ ಜನರಿಂದ ಟೋಲ್ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ.














