ಚಿತ್ರದುರ್ಗ. ಆ. 05: ಹಿರಿಯೂರು ತಾಲ್ಲೂಕಿನ 4 ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳ ಪೈಕಿ, ಮುಕ್ತಾಯ ಹಂತದಲ್ಲಿರುವ ತಲಾ ರೂ.40 ಕೋಟಿ ವೆಚ್ಚದ ಎರಡು ಕಾಮಗಾರಿಗಳನ್ನು, ಆಗಸ್ಟ್ 30ಕ್ಕೆ ಲೋಕಾರ್ಪಣೆ ಮಾಡಲು ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ನಿರ್ದೇಶನ ನೀಡಿದರು.
ಹಿರಿಯೂರು ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಬುಧುವಾರ ತಾಲ್ಲೂಕಿನ ವಿಪತ್ತು ನಿರ್ವಹಣೆ ವಿಷಯಗಳ ಕುರಿತು ಸಭೆ ನಡೆಸೆ ಅವರು ಮಾತನಾಡಿದರು.
ಅಂತಿಮ ಹಂತದಲ್ಲಿರುವ ಕಾಮಗಾರಿಗಳಿಗೆ ಚಾಲನೆ ನೀಡಿದರೆ, ಹಿರಿಯೂರಿ ತಾಲ್ಲೂಕಿನ 75 ಹಳ್ಳಿಗಳಲ್ಲಿ ಮನೆ ಮನೆಗೂ ಕುಡಿಯುವ ನೀರು ಪೂರೈಕೆಯಾಗಲಿದೆ. ಇದರಿಂದ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು. ಇದೇ ವೇಳೆ ಜವಗೊಂಡನಹಳ್ಳಿಯ ಕೆ.ಎಚ್.ಆರ್ ಬಡಾವಣೆಗೆ ಸುವರ್ಣಮುಖಿ ನದಿ ಪಾತ್ರದಿಂದ 1.5 ಕಿ.ಮೀ. ಪೈಪ್‍ಲೈನ್ ನಿರ್ಮಿಸಲು ಅಗತ್ಯ ಇರುವ 10 ಲಕ್ಷ ರೂ. ಅನುದಾನವನ್ನು ಬರ ಪರಿಹಾರ ನಿಧಿಯಿಂದ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳ ಕಾಮಗಾರಿ ಶೇ. 90 ರಷ್ಟು ಪೂರ್ಣಗೊಂಡಿದೆ. ಗಾಯತ್ರಿ ಜಲಾಶಯ ಹಾಗೂ ವಿವಿ ಸಾಗರ ಜಲಾಶಯದ ಮೂಲಗಳಿಂದ ನೀರು ಪಡೆದು, ಜವಗೊಂಡನಹಳ್ಳಿ ಮತ್ತು ಹರ್ತಿಕೋಟೆ ವ್ಯಾಪ್ತಿಯ 75 ಗ್ರಾಮಗಳಿಗೆ ನೀರು ತಲುಪಿಸುವ ಯೋಜನೆ ಇದಾಗಿದ್ದು, ಕಾಲಹರಣ ಮಾಡದೆ ಕಾಮಗಾರಿ ಪೂರ್ಣಗೊಳಿಸಿ, ಆಗಸ್ಟ್ 30 ರ ಒಳಗೆ 75 ಹಳ್ಳಿಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಕ್ರಮವಹಿಸುವ ಭರವಸೆಯನ್ನು ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ನೀಡಿದರು.

ದೇವರ ಎತ್ತುಗಳು ಹಾಗೂ ಜಾನುವಾರು ರಕ್ಷಣೆ ಟ್ರಸ್ಟ್ ರಚನೆಗೆ ತಾಕೀತು:
ಬರುವ ಆಗಸ್ಟ್ 30ರ ಒಳಗಾಗಿ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲೂಕುಗಳಲ್ಲಿನ ದೇವರ ಎತ್ತುಗಳ ರಕ್ಷಣೆ ಹಾಗೂ ನಿರ್ವಹಣೆಗೆ ಟ್ರಸ್ಟ್‍ಗಳನ್ನು ರಚಿಸುವಂತೆ ಸಚಿವ ಟಿ.ರಘುಮೂರ್ತಿ ತಾಕೀತು ಮಾಡಿದರು.
50ಕ್ಕೂ ಹೆಚ್ಚು ದೇವರ ಎತ್ತುಗಳಿಗೆ ಒಂದರಂತೆ ಟ್ರಸ್ಟ್ ನೋಂದಣಿ ಮಾಡಿಸಿದರೆ, ಸರ್ಕಾರದಿಂದ ಪ್ರತಿ ಹಸುವಿಗೆ ದಿನಕ್ಕೆ ರೂ.17 ಸಹಾಯಧನ ಸಿಗಲಿದೆ. ಆದರೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ಸೌಲಭ್ಯ ತಲುಪುತ್ತಿಲ್ಲ. ದೇವರ ಎತ್ತುಗಳ ಟ್ರಸ್ಟ್ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚಿಸಿದರು.
ಹಿರಿಯೂರು ತಾಲೂಕಿನಲ್ಲಿ 28,559 ಕುಟುಂಬಗಳು ಜಾನುವಾರು ಸಾಕಣೆಯನ್ನೇ ನೆಚ್ಚಿಕೊಂಡಿವೆ. ಪ್ರಸ್ತುತ 21 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದ್ದು, ಕೆಎಂಎಫ್‍ನಿಂದ ಮೇವಿನ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಅಧಿಕಾರಿಗಳ ಮನೋ ಧೋರಣೆ ಬದಲಾವಣೆ ಸೂಚನೆ:
ಬೆಳಿಗ್ಗೆ 10:30 ರಿಂದ ಸಂಜೆ 5:30 ರವರೆಗೆ ಕಚೇರಿಯಲ್ಲಿ ಕುಳಿತು ಕಾಗದದ ಕೆಲಸ ಮಾಡುವುದಕ್ಕೆ ಅಧಿಕಾರಿಗಳು ಸೀಮಿತವಾಗಬಾರದು. ಆರಾಮವಾಗಿದ್ದು, ಕಾಲಹರಣ ಮಾಡುವ ಮನೋಧೋರಣೆಯನ್ನು ಬದಲಾಯಿಸಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆಯುವಂತೆ ಮಾಡಬಾರದು. ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳು ವೇಗ ದೊರಕಬೇಕು. ಪ್ರತಿ 7 ದಿನಗಳಿಗೊಮ್ಮೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತೇನೆ. ಬರಗಾಲದ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಬೇಕು. ‘ಆಪರೇಷನ್ ಸಕ್ಸಸ್, ಪೇಷಂಟ್ ಡೆಡ್’ ಎಂಬಂತೆ ನಿಮ್ಮ ಕಾರ್ಯವೈಖರಿ ಇರಬಾರದು ಎಂದು ಸಚಿವ ಟಿ. ರಘುಮೂರ್ತಿ ಖಡಕ್ ಎಚ್ಚರಿಕೆ ನೀಡಿದರು.
ಬೆಳೆ ವಿಮೆ ಜಾಗೃತಿಗೆ ಸೂಚನೆ:
ಬೆಳೆ ವಿಮೆ ನೊಂದಣಿ ಮಾಡಿದ ರೈತರ ಗೊಂದಲಗಳನ್ನು ಅಧಿಕಾರಿಗಳು ಪರಿಹರಿಸಬೇಕು. ಯಾವ ಹಂತಗಳಲ್ಲಿ ಬಿತ್ತನೆ ವೈಫಲ್ಯ, ಮಧ್ಯಂತರ ಪರಿಹಾರ, ಪೂರ್ಣ ಬೆಳೆ ವಿಮೆಗಳು ಲಭ್ಯವಾಗುತ್ತದೆ ಎಂಬುದರ ವಿವರ ನೀಡಬೇಕು. ರಾಗಿ ಬೆಳೆಗೆ ಆಗಸ್ಟ್ 14 ವರೆಗೆ ಬೆಳೆ ಮಾಡಿಸಲು ಅವಕಾಶ ಇದ್ದು, ಹೆಚ್ಚು ಸಂಖ್ಯೆಯ ರೈತರ ನೊಂದಣಿಗೆ ಸಚಿವ ಟಿ.ರಘುಮೂರ್ತಿ ಸೂಚಿಸಿದರು.
ಪ್ರಸಕ್ತ ವರ್ಷ ಹಾಗೂ ಮುಂಗಾರು ಹಂಗಾಮಿನಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ವಾಡಿಕೆ ಮಳೆಗಿಂತ ಶೇ.45 ರಷ್ಟು ಮಳೆ ಕೊರತೆ ಉಂಟಾಗಿದೆ. ತಾಲ್ಲೂಕಿನ 40,510 ಹೆಕ್ಟೇರ್ ಬಿತ್ತನೆ ಕ್ಷೇತ್ರದ ಪೈಕಿ ಕೇವಲ 4,382 ಹೆಕ್ಟೇರ್ ಬಿತ್ತನೆಯಾಗಿದೆ. ತಾಲ್ಲೂಕಿನಾದ್ಯಂತ ಶೇ.10.5 ರಷ್ಟು ಮಾತ್ರ ಬಿತ್ತನೆ ಗುರಿ ಸಾಧನೆಯಾಗಿದೆ. ಸೂರ್ಯಕಾಂತಿ, ಶೇಂಗಾ,ರಾಗಿ, ಮೆಕ್ಕೆಜೋಳ, ತೊಗರಿ ಬೆಳೆ ಬಿತ್ತನೆಯ ಪ್ರಮಾಣವು ಒಟ್ಟು ಕ್ಷೇತ್ರವಾರು ಬಿತ್ತನೆಯ ಶೇ.10 ರಷ್ಟು ಬಿತ್ತನೆಯಾಗಿಲ್ಲ. ಪ್ರತಿ ಗ್ರಾಮಪಂಚಾಯತಿಗಳಲ್ಲಿ ಬೆಳೆ ವಿಮೆ ನೊಂದಣಿ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಪಿಎಂ.ಎಸ್.ಬಿ.ವೈ ಅಡಿ ಕೃಷಿ ಬೆಳೆಗಳಿಗೆ 22,539 ರೈತರು ನೊಂದಣಿ ಮಾಡಿಸಿದ್ದಾರೆ. ಬೆಳೆ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಮಾಹಿತಿ ನೀಡಿದರು.
ಹಿರಿಯೂರು ತಾಲ್ಲೂಕಿನಲ್ಲಿ ಅಡಿಕೆ,ತೆಂಗು,ದಾಳಿಂಬೆ, ಈರುಳ್ಳಿ ಹಾಗೂ ವಿವಿಧ ತರಕಾರಿ ಬೆಳೆಗಳು ಸೇರಿ ಒಟ್ಟು 38,624 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಇವೆ. 18,000 ತೋಟಗಾರಿಕೆ ರೈತರ ಪೈಕಿ, 11,217 ರೈತರು ಹವಮಾನ ಆಧಾರಿತ ಬೆಳೆ ವಿಮೆ ಅಡಿ ನೊಂದಣಿ ಮಾಡಿಕೊಂಡಿದ್ದಾರೆ ಎಂದು ಜಂಟಿ ನಿರ್ದೇಶಕಿ ಜಿ.ಸವಿತಾ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶೇ.20 ಕ್ಕಿಂತ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಬಿತ್ತನೆ ವೈಫಲ್ಯದಡಿ ಪರಿಹಾರ ನೀಡಲು ಶಿಫಾರಸ್ಸು ಮಾಡಲಾಗುವುದು.ಇದಕ್ಕಾಗಿ ಪ್ರತಿ ತಾಲ್ಲೂಕು ಹಂತದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಇವುಗಳ ವರದಿ ಪಡೆದು ನಾಳೆಯೇ ಅಧಿಸೂಚಿತ ಬೆಳೆಗಳಿಗೆ ಬಿತ್ತನೆ ವೈಫಲ್ಯ ಪರಿಹಾರಕ್ಕೆ ಶಿಫಾರಸ್ಸ ಕಳುಹಿಸಿ ಕೊಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಬೆಳೆ ಸಮೀಕ್ಷೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳು ಉಂಟಾಗಬಾರದು. ಬೆಳೆ ಪರಿಹಾರ ಅಥವಾ ವಿಮೆ ಹಣ ರೈತರ ಖಾತೆಗೆ ಜಮೆಯಾಗದಿದ್ದರೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವ ಟಿ.ರಘುಮೂರ್ತಿ ಎಚ್ಚರಿಸಿದರು.
ಆರ್.ಓ. ಘಟಕಗಳ ದುರಸ್ತಿಗೆ ಸೂಚನೆ:
ಕುಡಿಯುವ ನೀರಿನ ಸರಬಾರಾಜು ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪ್ರತಿಯೊಂದು ಆರ್.ಓ. ಘಟಕದ ವಸ್ತುಸ್ಥಿತಿಯ ಖಚಿತ ಮಾಹಿತಿ ಪಡೆಯಬೇಕು. ಕೆಆರ್‍ಐಡಿಎಲ್ ವ್ಯಾಪ್ತಿಯಲ್ಲಿರುವ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ದುರಸ್ತಿಯಲ್ಲಿರುವ ಘಟಕಗಳನ್ನು ತಕ್ಷಣವೇ ಸುಸ್ಥಿತಿಗೆ ತರಬೇಕು.
ಹಿರಿಯೂರು ತಾಲ್ಲೂಕಿನಲ್ಲಿ ಒಟ್ಟು 236 ಆರ್‍ಒ ಘಟಕಗಳಲ್ಲಿ 225 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 10 ದುರಸ್ತಿಯಲ್ಲಿದ್ದರೆ, 3 ಸ್ಕ್ರಾಫ್ ಆಗಿವೆ. ಜಿಲ್ಲೆಯಲ್ಲಿ 86 ಆರ್.ಓ.ಘಟಕಗಳ ದುರಸ್ಥಿಗೆ ಕೆ.ಎಂ.ಇ.ಆರ್.ಸಿ ಯಿಂದ ಅನುದಾನ ಕೇಳಲಾಗಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ಮಾಹಿತಿ ನೀಡಿದರು.
ಸಭೆಯಲ್ಲಿ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ರಾಮಪ್ಪ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
















