ಬಿಜೆಪಿಯಲ್ಲಿ ಒಂದೊಂದೆ ವಿಕೆಟ್ ಉರುಳುತ್ತಾ ಇದೆ. ಟಿಕೆಟ್ ಸಿಗದ ಕಾರಣಕ್ಕೆ ರಾಜೀನಾಮೆಯ ಹಾದಿ ಹಿಡಿಯುತ್ತಿದ್ದಾರೆ. ಕೆಲವೊಂದಿಷ್ಟು ಮಂದಿ ಟಿಕೆಟ್ ಸಿಗದೆ ಇದ್ದದ್ದಕ್ಕೆ ರೊಚ್ಚಿಗೆದ್ದಿದ್ದಾರೆ. ಲಕ್ಷ್ಮಣ್ ಸವದಿ ಕೂಡ ಟಿಕೆಟ್ ಸಿಗಲಿಲ್ಲ ಅಂತ ತನ್ನದೇ ಆದ ತೀರ್ಮಾನಕ್ಕೆ ಬಂದಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಮ್ಮ ಮನಸ್ಸಿನೊಳಗಿದ್ದ ಆಕ್ರೋಶ ಹೊರ ಹಾಕಿದ್ದಾರೆ.
ಅಥಣಿಯಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ಮಂತ್ರಿ ಸ್ಥಾನ ಕೊಡಿ ಎಂದು ನಾನು ಯಾವತ್ತಿಗೂ ಕೇಳಿರಲಿಲ್ಲ. ಕೊಟ್ಟು ಮತ್ತೆ ಕಸಿದುಕೊಂಡಿದ್ದು ಯಾಕೆ..? ನಾನೇನಾದ್ರೂ ರೇಪ್ ಮಾಡಿದ್ದೇನಾ ಎಂದು ಬೇಸರ ಹೊರ ಹಾಕಿದ್ದಾರೆ.
ಮಂತ್ರಿ ಸ್ಥಾನದಿಂದ ತೆಗೆಧ್ದು ಯಾಕೆ..? ನ್ಯಾಯ ಸಿಗುತ್ತೆ ಎಂದು ಸುಮ್ಮನೆ ಇದ್ದೆ. ಸಾಯಂಕಾಲ ಜನರ ಅಭಿಪ್ರಾಯ ಕೇಳಿ ಕ್ರೋಢೀಕರಿಸಿ ಒಂದು ತೀರ್ಮಾನಕ್ಕೆ ಬರುತ್ತೇನೆ. ವಿಚಾರಧಾರೆಗಳು ಬೇರೆ ಬೇರೆ ಇತ್ತು. ಆದರೆ ಕೂಡಿ ಕೆಲಸ ಮಾಡಿದ್ದೀವಿ. ನಿರ್ಲಕ್ಷ್ಯ ಮಾಡಿದ್ದಕ್ಕೆ ನೋವಾಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಮಾತ್ರವಲ್ಲ. ಪಕ್ಷದಲ್ಲಿ ಅವಮಾನಗಳು, ಅಸೂಯೆಗಳು ಆಗಿದೆ.
ರಾಜ್ಯ ನಾಯಕರು ನೀಡಿರುವ ತೊಂದರೆ ಅನುಭವಿಸಿದ್ದೇನೆ. ಆಂತರಿಕ ನೋವುಗಳಾಗಿದೆ. ವೇದಿಕೆ ಅವಕಾಶ ಕೊಡದೇ ನನ್ನನ್ನು ದೂರ ಸರಿಸಲಾಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಮುನಿಸಿಕೊಂಡಿಲ್ಲ. ಮಂತ್ರಿ ಸ್ಥಾನದಿಂದ ಇಳಿಸಿದಾಗಲೂ ನಾನು ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ಬೇರೆಯವರ ಮನಸ್ಸು ನೋಯಿಸಿದರೆ ನನಗೆ ಲಾಭ ಆಗಲ್ಲ. ಹೈಕಮಾಂಡ್ ನನ್ನ ಮಾತಿಗೆ ಗೌರವ ನೀಡಿಲ್ಲ. ನಾಳೆ ಮಧ್ಯಾಹ್ನ ಬೆಂಗಳೂರಿಗೆ ತೆರಳಿ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.