ಚಿತ್ರದುರ್ಗ, ಸೆ.21: ಹೊಳಲ್ಕೆರೆ ತಾಲ್ಲೂಕು ಶಿವಗಂಗಾ ಗ್ರಾಮ ಪಂಚಾಯಿತಿಗೆ ಬುಧವಾರ ಸಂಜೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರು ದಿಡೀರ್ ಭೇಟಿ ನೀಡಿ, ಮಹಾತ್ಮಾ ಗಾಂಧಿ ನರೇಗಾ ಯೋಜನೆಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು.
ನರೇಗಾ ಯೋಜನೆಯ ಮಾರ್ಗಸೂಚಿ ಅನ್ವಯ 21 ಚೆಕ್‍ಲೀಸ್ಟ್ ಪ್ರಕಾರವೇ ಕಡತದಲ್ಲಿ ನಿರ್ವಹಿಸಿರಬೇಕು. ಇದನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಕೆಲಸದ ಅನುಷ್ಠಾನದ ನಂತರ ಕಡತಗಳನ್ನು ಪ್ರತಿದಿನ ಪರಿಶೀಲಿಸಬೇಕು ಎಂದು ನರೇಗಾ ಸಹಾಯಕ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ ಅವರು, ಒಂದು ವಾರದೊಳಗೆ ಸರಿಪಡಿಸಿಕೊಳ್ಳಬೇಕು. ನಿರ್ವಹಿಸದಿದ್ದ ಪಕ್ಷದಲ್ಲಿ ನೇರವಾಗಿ ನಿಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ನರೇಗಾ ಯೋಜನೆಯ ಪ್ರಯೋಜನೆಯನ್ನು ಅರ್ಹರೆಲ್ಲರೂ ತಲುಪಿಸುವಂತೆ ಸೂಚನೆ ನೀಡಿದರು.
ನಂತರ ಹೊಸ ಜಾಬ್ ಕಾರ್ಡ್‍ಗೆ ಬಂದಿರುವ ಬೇಡಿಕೆಗಳನ್ನು ಪರಿಶೀಲಿಸಿದರು. ಗ್ರಾಮದಲ್ಲಿ ಯಾವ ಕುಟುಂಬಕ್ಕೆ ಜಾಬ್ ಕಾರ್ಡ್ ಇಲ್ಲವೋ ಅಂತಹ ಕುಟುಂಬಗಳಿಗೆ ತುರ್ತಾಗಿ ಜಾಬ್ ಕಾರ್ಡ್ ನೀಡಿ, ಹಾಗೇ ಅವರಿಗೆ ಉದ್ಯೋಗ ನೀಡುವುದು ಅಷಯ ಜವಾಬ್ದಾರಿ. ಜಾಬ್ ಕಾರ್ಡ್ ಇರುವ ಕೆಲಸ ಕೇಳಿಕೊಂಡು ಬಂದ ಕುಟುಂಬಗಳಿಗೆ ಮೊದಲು ಕೆಲಸ ನೀಡಿ, ಗ್ರಾಮ ಪಂಚಾಯಿತಿಗಳು ಸರಿಯಾದ ಸಮಯಕ್ಕೆ ಕೆಲಸ ನೀಡದಿದ್ದರೆ ಅವರು ಜಿಲ್ಲಾ ಪಂಚಾಯತ್ ಕಚೇರಿಗೆ ಬಂದು ಗ್ರಾಮ ಪಂಚಾಯತಿಯವರು ಕೆಲಸ ಕೊಡುತ್ತಿಲ್ಲ ಎನ್ನುತ್ತಾರೆ. ಈ ರೀತಿ ಆಗದಂತೆ ಎಚ್ಚರಿಕೆಯಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೆಲಸ ನಿರ್ವಹಿಸುವುದು ಕಡ್ಡಾಯ ಎಂದರು.
ಜಿಲ್ಲೆಯ ಆರು ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಇದನ್ನು ಅರಿತುಕೊಂಡು ಕೂಲಿಗಾರರಿಗೆ ತಮ್ಮ ತಮ್ಮ ಗ್ರಾಮಗಳಲ್ಲೆ ಕೆಲಸ ನೀಡಿ ಹಾಗೂ ಸರಿಯಾದ ಸಮಯಕ್ಕೆ ಕೂಲಿ ಹಣ ಪಾವತಿ ಮಾಡಿ. ನಂತರ ನರೇಗಾ ವೆಬ್‍ಸೈಟ್ ಪರಿಶೀಲಿಸಿ, ಎಂ ಐ ಎಸ್ ತಂತ್ರಾಂಶಕ್ಕೆ ಸಂಬಂದಿಸಿದ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ನರೇಗಾ ಯೋಜನೆಯ ನಿಯಮನುಸಾರ ಮತ್ತು ಗ್ರಾಮ ಪಂಚಾಯಿತಿಗಳ ಜನಪ್ರತಿನಿದಿಗಳ ಜೊತೆ ಸಮನ್ವಯತೆಯಿಂದ ಕೆಲಸ ನಿರ್ವಹಿಸುವಂತೆ ತಿಳಿಸಿದರು. ಹಾಗೆಯೇ ಇ-ಸ್ವತ್ತು, ಪಂಚತಂತ್ರ, ಸಕಾಲದ ಬಗ್ಗೆ ಮಾಹಿತಿ ಪಡೆದರು.
ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ವಹಿಸಬೇಕು. ಅದೇ ರೀತಿಯಾಗಿ ಜಾನುವಾರುಗಳಿಗೆ ಮೇವಿನ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು.
ಗ್ರಾಮಗಳ ನೈರ್ಮಲ್ಯ ಹಾಗೂ ಕಸ ವಿಲೇವಾರಿ ವ್ಯವಸ್ಥೆಯ ಬಗ್ಗೆ ನಿಗಾ ವಹಿಸಬೇಕು. ಕುಡಿಯುವ ನೀರಿನ ಟ್ಯಾಂಕ್ ಮತ್ತು ಆರ್.ಓ ಪ್ಲಾಂಟ್‍ಗಳ ಶುಚಿತ್ವ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಶುದ್ಧವಾದ ನೀರು ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ಇದರಲ್ಲಿ ಲೋಪಗಳಾದಲ್ಲಿ ತಮ್ಮಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಮಕ್ಕಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಂಥಾಲಯವನ್ನು ನಿಯಮಾನಸಾರ ಸಮಯಕ್ಕೆ ಸರಿಯಾಗಿ ತೆಗೆಯುವಂತೆ ಸೂಚಿಸಿದರು. ಅಧ್ಯಕ್ಷರು ಮತ್ತು ಕೆಲ ಸದಸ್ಯರ ಜೊತೆ ಗ್ರಾಮದ ಬಗ್ಗೆ ಚರ್ಚಿದರು. ಜನಪ್ರತಿನಿಧಿಗಳ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಎ ಡಿ ಪಿ ಸಿ, ಜಿಲ್ಲಾ ಐ ಇ ಸಿ ಸಂಯೋಜಕರು, ಸಹಾಯಕ ನಿರ್ದೇಶಕರು (ನರೇಗಾ ಮತ್ತು ಪಂಚಾಯತ್ ರಾಜ್) ತಾಂತ್ರಿಕ ಸಂಯೋಜಕರು, ತಾಲ್ಲೂಕು ಎಂ ಐ ಎಸ್, ತಾಲ್ಲೂಕು ಐ ಇ ಸಿ ಪಿ ಡಿ ಒ, ಟಿ ಎ ಇ ಗಳು, ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಇದ್ದರು.