ಮಳೆಗಾಲ ಶುರುವಾಯ್ತು ಅಂದ್ರೆ ಸೊಳ್ಳೆಗಳ ಆತಂಕವೇ ಜಾಸ್ತಿ. ಮಲೇರಿಯಾ, ಡೆಂಗ್ಯೂ ಭಯವೇ ಜನರಲ್ಲಿ ಹೆಚ್ಚಾಗಿದೆ. ಅದಾಗಲೇ ಎಷ್ಟೋ ಜನಕ್ಕೆ ಡೆಂಗ್ಯೂ ಬಂದು ಚೇತರಿಸಿಕೊಂಡಿದ್ದಾರೆ. ಇದೀಗ ಝೀಕಾ ವೈರಸ್ ಕಾಟ ಶುರುವಾಗಿದೆ. ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಕಾಣಿಸಿಕೊಂಡಿದ್ದು, ರಾಜ್ಯದ ಜನಕ್ಕೆ ಆತಂಕ ತಂದೊಡ್ಡಿದೆ.
ಶಿಡ್ಲಘಟ್ಟ ತಾಲೂಕಿನ ತಲಕಾಯಬೆಟ್ಟದ ಗ್ರಾಮದ ಬಳಿ ವೈರಸ್ ಕಾಣಿಸಿಕೊಂಡಿದೆ. ಕೀಟಶಾಸ್ತ್ರ ವೈದ್ಯರು ಪರೀಕ್ಷಿಸಿದ ಸೊಳ್ಳೆಯಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಈ ಸಂಬಂಧ ಡಿಎಚ್ಒ ಎಸ್ ಎಸ್ ಮಹೇಶ್ ಮಾತನಾಡಿ, ಪ್ರಕರಣ ಸಂಬಂಧ ಸುತ್ತಮುತ್ತಲಿರುವ ತಲಕಾಯ ಬೆಟ್ಟ, ಬಚ್ಚನಹಳ್ಳಿ, ವೆಂಕಾಟಪುರ , ದಿಬ್ಬೂರಳ್ಳಿಯಲ್ಲಿರುವ ಗರ್ಭಿಣಿಯರಿಗೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದ್ದೇವೆ. ಗ್ರಾಮದ ಸುತ್ತಮುತ್ತ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಚ್ಚರದಿಂದ ಇರಲು ಸೂಚಿಸಿದ್ದೇವೆ. ರಾಜ್ಯಾದ್ಯಂತ ಸುಮಾರು 100 ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಆರು ಚಿಕ್ಕಬಳ್ಳಾಪುರದಲ್ಲಿ ಸಂಗ್ರಹ ಮಾಡಲಾಗಿದೆ. ಅದರಲ್ಲಿ ಆರು ನೆಗೆಟಿವ್ ಎಂದು ಬಂದಿದೆ.
ಈಡಿಸ್ ಸೊಳ್ಳೆ ಕಡಿತದಿಂದ ಝಿಕಾ ವೈರಸ್ ಉಂಟಾಗುತ್ತದೆ. ಜ್ವರ, ಕೆಮ್ಮು ಚರ್ಮದ ಮೇಲೆ ದದ್ದುಗಳು, ಮಾಂಸ ಖಂಡಗಳ ಸೆಳೆತ ಮೈಕೈ ನೋವು ಝಿಕಾದ ಲಕ್ಷಣಗಳಾಗಿದೆ. ಝಿಕಾ ವೈರಸ್ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. 1947ರಲ್ಲಿ ಉಗಾಂಡದಲ್ಲಿ ಮೊದಲ ಬಾರಿಗೆ ಝಿಕಾ ವೈರಸ್ ಪತ್ತೆಯಾಗಿತ್ತು. ಕಳೆದ ಡಿಸೆಂಬರ್ನಲ್ಲಿ ರಾಜ್ಯದ ರಾಯಚೂರಿನ ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಇರೋದು ದಾಖಲಾಗಿತ್ತು.