ಸುದ್ದಿಒನ್, ಚಿತ್ರದುರ್ಗ, ಜೂನ್. 01 : ಕುಟುಂಬ ಮತ್ತು ಸಾಮಾಜಿಕವಾಗಿ ಬದುಕುತ್ತಿರುವ ಯುವಕರು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬೇಕು. ಬದುಕಿನ ಜಂಜಾಟಗಳಿಗೆ ಮನಸೋಲದೆ ಸಾಧನೆಯ ಗುರಿಯತ್ತ ಚಿತ್ತವಿರಬೇಕು. ಭಾರತೀಯ ಕುಟುಂಬ ವ್ಯವಸ್ಥೆಗಳು ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸಾಮಾಜಿಕ ಬದುಕಿನಲ್ಲಿ ಗುಣಮಟ್ಟದ ನೆಲೆ ಕಂಡುಕೊಳ್ಳಲು ಅನುಕೂಲವಾಗುತ್ತದೆ ಎಂದು ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ಅಭಿಪ್ರಾಯಪಟ್ಟರು.
ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನಜಾಗೃತಿ ಮತ್ತು ಎಚ್ಚರಿಕೆ ಮೂಡಿಸುವ ಸಲುವಾಗಿ ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಜೆಸಿಐ ಕಟಪಾಡಿ ಮತ್ತು ಜೆಸಿಐ ಉಡುಪಿ ಸಿಟಿ ಸಹಯೋಗದಲ್ಲಿ ಯುವಕರಾದ ದೃóಶಾ ಕೊಡಗು ಮತ್ತು ಉಜ್ವಲ್ ಕಾಮತ್ ಇವರು 12 ದಿನಗಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮೂರೂ ರಾಜ್ಯಗಳಲ್ಲಿ ಒಟ್ಟು ಮೂರು ಸಾವಿರ ಕಿಲೋಮೀಟರ್ ಬೈಕ್ ಸಂಚಾರವನ್ನು ಉದ್ದೇಶಿಸಿ ಮಾತನಾಡಿದರು.
ಉತ್ತಮ ಸಂವೇದನೆ, ಜೀವನ ಮೌಲ್ಯಗಳು ಹಾಗೂ ಸ್ಪೂರ್ತಿದಾಯಕ ನುಡಿಗಳು ಪ್ರತಿಯೊಂದೂ ಕುಟುಂಬಗಳಿಗೆ ಅವಶ್ಯಕತೆಯಾಗಿದೆ. ಕೌಟುಂಬಿಕ ಕಲಹಗಳು, ಸಾಮಾಜಿಕ ಪಿಡುಗುಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ. ಅವರವರ ಜವಾಬ್ದಾರಿಗಳನ್ನು ಅರಿತು ಸಮಸ್ಯೆಗಳನ್ನು ನಿವಾರಿಸಿಕೊಂಡರೆ ಉತ್ತಮ ಬದುಕು ನಮ್ಮದಾಗುತ್ತದೆ. ಇದಕ್ಕೆ ಸಹಮತ, ಸಹಬಾಳ್ವೆ, ಒಗ್ಗಟ್ಟಿನ ಮಹತ್ವ ತಿಳಿದುಕೊಂಡರೆ ಮಾತ್ರ ಕುಟುಂಬ ಮತ್ತು ಸಾಮಾಜಿಕವಾಗಿ ಬದುಕು ಸುಗಮವಾಗುತ್ತದೆ. ಯುವಕರು ಡ್ರಗ್ಸ್ ಮತ್ತಿತರ ದುಶ್ಚಟಗಳಿಗೆ ಬಲಿಯಾಗಬಾರದಂತೆ ಇಂತಹ ಸಾಹಸ ಪ್ರವೃತ್ತಿಗಳಿಗೆ ಪ್ರೋತ್ಸಾಹ ಸಿಗಬೇಕು ಎಂದರು.
ಅಂತರರಾಷ್ಟ್ರೀಯ ಉತ್ತಮ ಬಾಲನಟ ಪ್ರಶಸ್ತಿ ಪುರಸ್ಕøತ, ಚಲನಚಿತ್ರ ನಟ ಹಾಗೂ ಬೈಕ್ ಸವಾರ ದೃಶಾ ಕೊಡಗು ಮಾತನಾಡಿ ಭೇಟಿ ನೀಡಿದ ಹಲವಾರು ಸ್ಥಳಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾವೀಗಾಗಲೇ 2500 ಕಿಲೋಮೀಟರ್ ಕ್ರಮಿಸಿ ಚಿತ್ರದುರ್ಗಕ್ಕೆ ಬಂದಿದ್ದೇವೆ. ನನ್ನೊಟ್ಟಿಗೆ ಗೆಳೆಯ ಉಜ್ವಲ್‍ಕಾಮತ್ ಇದ್ದಾರೆ. ಮುಂದೆ ಪಯಣ ನಿರಂತರವಾಗಿದೆ. ಪೋಷಕರು ಹಾಗೂ ಸಾಮಾಜಿಕ ವಲಯದಲ್ಲಿರುವ ಸಾರ್ವಜನಿಕರು ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಯೋಗಶಿಕ್ಷಕ ಎಂ.ಬಿ.ಮುರುಳಿ ಮಾತನಾಡಿ ಯುವಕರಲ್ಲಿ ಉತ್ಸಾಹದ ನುಡಿಗಳನ್ನು ತುಂಬಬೇಕು. ಉತ್ತಮ ಆರೋಗ್ಯ, ಸಾಧನೆಯತ್ತ ಯುವಕರ ಚಿತ್ತವಿರಬೇಕು. ಕಲಿಕೆಯತ್ತ ಆಸಕ್ತಿ ಮೂಡಿಸಬೇಕು ಎಂದರು.
ಬೈಕ್ ಸವಾರರನ್ನು ನಗರದ ಹೊರ ವಲಯದಲ್ಲಿರುವ ಜೆಎಂಐಟಿ ಸರ್ಕಲ್‍ನಲ್ಲಿ ಸ್ವಾಗತಿಸಿ ಮುಖ್ಯರಸ್ತೆ ಮೂಲಕ ಸಾಗಿ ಜಿಲ್ಲಾಧಿಕಾರಿ ಕಛೇರಿ ವೃತ್ತದವರೆಗೆ ಬರಮಾಡಿಕೊಂಡು ಜಾಗೃತಿ ಜಾಥಾದ ಉದ್ದೇಶ ಅದರ ಬೆಳವಣಿಗೆ ಬಗ್ಗೆ ಚರ್ಚಿಸಲಾಯಿತು. ರಂಗ ಸಂಘಟಕ ಪ್ರಕಾಶ್ ಬಾದರದಿನ್ನಿ ಹಾಗೂ ರಂಗ ನಿರ್ದೇಶಕ ಧೀಮಂತ್‍ರಾಮ್ ಹಾಗೂ ಕೆ.ಪಿ.ಎಂ.ಗುರುದೇವ್ ಇವರು ಯುವಕರನ್ನು ಸನ್ಮಾನಿಸಿ ಗೌರವಿಸಿದರು. ಬೈಕ್ ಸವಾರರು ಸಂತೋಷದಿಂದ ತುಮಕೂರಿನತ್ತ ಪ್ರಯಾಣ ಬೆಳೆಸಿದರು.
