ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಯುವನಿಧಿ ಯೋಜನೆ ಕೂಡ ಒಂದು. ಈಗಾಗಲೇ ನೀಡಿದ ಐದು ಯೋಜನೆಗಳ ಭರವಸೆಯಲ್ಲಿ ಕಾಂಗ್ರೆಸ್ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಗೆ ಹಣ, ಗೃಹಲಕ್ಷ್ಮೀ ಯೋಜನೆ, ಗೃಹಜ್ಯೋತಿ ಯೋಜನೆ ಎಲ್ಲವೂ ಜಾರಿಗೆ ತಂದಿದ್ದು, ಈಗ ಯುವನಿಧಿ ಯೋಜನೆ ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ.
ರಾಜ್ಯದಲ್ಲಿ ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಾಗಿಯೇ ಇದೆ. ದಿನೇ ದಿನೇ ಈ ಸಂಖ್ಯೆ ಹೆಚ್ಚಳವಾಗುತ್ತಲೆ ಇದೆ. ಹೀಗಾಗಿ ಯುವನಿಧಿ ಯೋಜನೆ ಜಾರಿ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಕಳೆದ ಕೆಲ ದಿನಗಳಿಂದ ಯುವನಿಧಿ ಯೋಜನೆ ಜಾರಿ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಯುವನಿಧಿ ಯೋಜನೆ ಜಾರಿ ಯಾವಾಗ..? ಅರ್ಜಿ ಸಲ್ಲಿಕೆಗೆ ಸರ್ಕಾರದ ಷರತ್ತುಗಳೇನು..? ಎಂಬುದಕ್ಕೆ ಮಾಹಿತಿ ಇಲ್ಲಿದೆ.
ವಿಧಾನಸಭೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಜನವರಿ 12 ರಂದು ವಿವೇಕಾನಂದ ಜಯಂತಿ ದಿನ ಡಿಬಿಟಿ ಮೂಲಕ ಹಣ ಹಾಕಲಾಗುತ್ತೆ. ಈ ಕಾರ್ಯಕ್ರಮಕ್ಕೆ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಗುತ್ತದೆ ಎಂದಿದ್ದಾರೆ.
ಅಭ್ಯರ್ಥಿಗಳು ಯುವನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದರ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಅಧೀಕೃತ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕದ ನಿವಾಸಿಯಾಗಿರುವ ಬಗ್ಗೆ ಸೂಕ್ತ ದಾಖಲೆ, ಹತ್ತನೇ ತರಗತಿ, ದ್ವಿತೀಯ ಪಿಯುಸಿ ಹಾಗೂ ಪದವಿ ಅಂಕಪಟ್ಟಿ, ಆಧಾರ್ ಕಾರ್ಡ್ ದಾಖಲೆಯೊಂದಿಗೆ ಮೊಬೈಲ್, ಕಂಪ್ಯೂಟರ್ ಹಾಗೂ ಗ್ರಾಮ ಒನ್, ಬೆಂಗಳೂರು ಒನ್‌ನಂತಹ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಇಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಲಿದ್ದು, ಸರ್ಕಾರದಿಂದ ಅಭ್ಯರ್ಥಿಗಳಿಗೆ ಅಧೀಕೃತ ಸೂಚನೆ ಸಿಗಲಿದೆ.