ಯುವಕರು ದೇಶದ ಶಕ್ತಿ, ಸಂಪತ್ತು, ಭವಿಷ್ಯ : ಶಿವುಯಾದವ್

3 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 09 : ಯುವಕರು ದೇಶದ ಶಕ್ತಿ, ಸಂಪತ್ತು ಮತ್ತು ಭವಿಷ್ಯ. ಆದ್ದರಿಂದ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಯುವಜನತೆಯಲ್ಲಿ ಸ್ಪಷ್ಟ ಅರಿವು ಇರಬೇಕು. ಇಲ್ಲವಾದರೆ ಭವಿಷ್ಯ ಕರಾಳವಾಗಲಿದೆ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ. ಶಿವುಯಾದವ್ ಎಚ್ಚರಿಸಿದರು.

ನಗರದ ಡಾನ್ ಬೋಸ್ಕೋ ಪದವಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ದಾವಣಗೆರೆ ವಿಶ್ವವಿದ್ಯಾಲಯ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಯುವ ಸಂಸತ್ ಸ್ಪರ್ಧೆಯಲ್ಲಿ ‘ತುರ್ತು ಪರಿಸ್ಥಿತಿಗೆ 50 ವರ್ಷ; ಭಾರತೀಯ ಪ್ರಜಾಪ್ರಭುತ್ವಕ್ಕೆ ಪಾಠಗಳು’ ಕುರಿತ ಅಣಕು ಸಂಸತ್ ಮಾದರಿಯ ಪರ- ವಿರೋಧ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ದೇಶದ ಜನ ಸಂಖ್ಯೆಯಲ್ಲಿ ಬಹುಪಾಲು ಯುವಜರಿದ್ದಾರೆ. ವಿಕಸಿತ ಭಾರತ ನಿರ್ಮಾಣ ಮಾಡಲು ಯುವಕರ ಚಿಂತನೆಗಳು ಸಕಾರಾತ್ಮವಾಗಿರಬೇಕು. ಜತೆಗೆ ಅಭಿವೃದ್ಧಿ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.

ವಿಕಸಿತ ಭಾರತದ ಪರಿಕಲ್ಪನೆ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಮಾತ್ರವಲ್ಲದೆ ಸಮಾನತೆ, ಸ್ವಚ್ಛತೆ, ಶಾಂತಿ, ವೈಜ್ಞಾನಿಕ ಮನೋಭಾವನೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಬೇಕು. ಯುವಕರು ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸತ್ಯ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಜೀವನದಲ್ಲಿ ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜ್ಞಾನ, ಕೌಶಲ ಮತ್ತು ನೈತಿಕ ಮೌಲ್ಯಗಳನ್ನು ಯಾವ ರೀತಿ ವೃದ್ಧಿಸಿಕೊಳ್ಳುವ ಮೂಲಕ ಯುವಕರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.

ಭಾರತ ಸಂವಿಧಾನದ ಮೌಲ್ಯಗಳು, ಹಕ್ಕು–ಕರ್ತವ್ಯಗಳ ಬಗ್ಗೆ ಸ್ಪಷ್ಟ ಅರಿವು ಮೂಡುತ್ತದೆ. ಹಾಗೆಯೇ ದೇಶದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿ ಪರಿಹಾರ ಸೂಚಿಸುವ ಮನೋಭಾವ ಬೆಳೆಸುತ್ತದೆ. ಜತೆಗೆ ಸಹಿಷ್ಣುತೆ ಮತ್ತು ಪರಸ್ಪರ ಗೌರವ, ವಿಭಿನ್ನ ಅಭಿಪ್ರಾಯಗಳನ್ನು ಆಲಿಸಿ ಗೌರವಿಸುವ ಸಂಸ್ಕಾರ ಬೆಳೆಸುತ್ತದೆ. ಭವಿಷ್ಯದ ನಾಯಕತ್ವಕ್ಕೆ ಪೂರಕವಾಗಿದೆ ಎಂದು ಹೇಳಿದರು.

ಡಾನ್ ಬೋಸ್ಕೋ ಪದವಿ ಕಾಲೇಜು ಪ್ರಾಂಶುಪಾಲ ಫಾ.ಬೆನ್ನಿ ಕ್ರಿಸ್ತುದಾಸ್ ಮಾತನಾಡಿ, ವಿಶ್ವದಲ್ಲೇ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿರುವ ಭಾರತ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ಯುವಶಕ್ತಿ ಸಕಾರಾತ್ಮಕವಾಗಿ ಬಳಕೆಯಾಗಬೇಕು. ಯುವಜನತೆ ಸಾಮಾಜಿಕ ಹಾಗೂ ರಾಜಕೀಯ ಅರಿವು ಬೆಳೆಸಿಕೊಳ್ಳಬೇಕು ಎಂದರು.

ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಪರಸ್ಪರ ಚರ್ಚೆ, ಭಿನ್ನಾಭಿಪ್ರಾಯ ಮತ್ತು ನಿರ್ಣಯಗಳು ಪ್ರಮುಖ ಅಂಶಗಳಾಗಿದ್ದು, ಗೌರವದಿಂದ ಸೌಹಾರ್ದಯುತವಾಗಿ ಚರ್ಚಿಸುವ, ಒಳಿತನ್ನು ಆಯ್ಕೆಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಭಾರತೀಯ ನಾಗರಿಕನೂ ಸಂವಿಧಾನವನ್ನು ಗೌರವಿಸುವುದು, ದೇಶದ ಏಕತೆ ಅಖಂಡತೆ ಮತ್ತು ಶಾಂತಿಗಾಗಿ ಕೈಜೋಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಆಡಳಿತಾಧಿಕಾರಿ ಫಾ.ಫೆಲಿಕ್ಸ್ ಸೆರೋವೋ ಮಾತನಾಡಿ, ಇದು ಕೇವಲ ಸ್ಪರ್ಧೆಯಲ್ಲ. ನಿಮ್ಮೊಳಗಿನ ನಾಯಕತ್ವವನ್ನು ಹೊರತರುವ ಒಂದು ವೇದಿಕೆ. ದೇಶದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಅರಿಯಲು ಮತ್ತು ಸಂಸತ್ತಿನ ಕಾರ್ಯವಿಧಾನ ತಿಳಿಯಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ವಿದ್ಯಾರ್ಥಿಗಳು ಉಪಯೋಗ ಪಡೆದುಕೊಳ್ಳಬೇಕು ಹೇಳಿದರು.

ಯುವ ಸಂಸತ್ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಆತ್ಮವಿಶ್ವಾಸ, ಚರ್ಚಾ ಕೌಶಲ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಗಳು ಬೆಳೆಯುತ್ತವೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಹಾಯ ಮಾಡುತ್ತವೆ. ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತ ಭಾರತವು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, 2047ರಲ್ಲಿ ವಿಕಸಿತ ಭಾರತವನ್ನಾಗಿಸಲು ಯುವ ಜನರ ಪಾತ್ರ ಪ್ರಾಮುಖ್ಯವಾಗಿದೆ ಎಂದು ಹೇಳಿದರು.

ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಎನ್.ಧನಕೋಟಿ ಮಾತನಾಡಿ, ಯುವಜನತೆಯ ಆಲೋಚನೆಗಳು ಆಧುನಿಕವಾಗುವುದರ ಜೊತೆಗೆ ಮಾನವೀಯ ಮೌಲ್ಯಗಳು ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದಾಗ ಮಾತ್ರ ನಿಜವಾದ ‘ವಿಕಸಿತ ಭಾರತ’ ನಿರ್ಮಾಣವಾಗುತ್ತದೆ. ಯುವಶಕ್ತಿ ದೇಶದ ಸಾಮರ್ಥ್ಯ ಹಾಗೂ ಆಸ್ತಿಯಾಗಿದ್ದು ಸದ್ಬಳಕೆಯಾಗಬೇಕು. ಭವಿಷ್ಯದ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದ್ದು ಸಮರ್ಥವಾಗಿ ನಿಭಾಯಿಸಬೇಕು.

ದೇಶದ ಸಂಸತ್ ವ್ಯವಸ್ಥೆಯ ಮಾದರಿ. ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ, ತಾರ್ಕಿಕ ಚಿಂತನೆ, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆಡಳಿತ ಕ್ರಮಗಳನ್ನು ಅರಿಯುವ ವೇದಿಕೆಯಾಗಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಿಂದ 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಡಾನ್ ಬೋಸ್ಕೋ ಪದವಿ ಕಾಲೇಜಿನ ವೈಷ್ಣವಿ, ನಿಧಿಶ್ರೀ, ಎಸ್‌ಜೆಎಂ ಕಾನೂನು ಕಾಲೇಜಿನ ಆದಿ, ಝೇವಿಬಾ, ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುದಾಸಿರಾ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಉಪ ಪ್ರಾಂಶುಪಾಲ ಫಾ.ಕ್ರಿಸ್ಟಿ ಜೋಸೆಫ್, ಉಪನ್ಯಾಸಕರಾದ ಲೋಕೇಶ್ ನಾಯಕ್, ವಿ.ಪ್ರಸಾದ್, ನಾಗರಾಜ್, ಪತ್ರಕರ್ತ ಕೆ.ಪಿ. ಓಂಕಾರ ಮೂರ್ತಿ, ರಂಗಕರ್ಮಿ ಕೆಪಿಎಂ ಗಣೇಶಯ್ಯ ಇದ್ದರು.

Share This Article