ಯುವಜನರು ಅತ್ಯಂತ ಜವಾಬ್ದಾರಿಯುತವಾಗಿ ಭವಿಷ್ಯವನ್ನು ಕಟ್ಟಿಕೊಳ್ಳಬೇಕು : ಶ್ರೀಮತಿ ಚಂದ್ರಕಲಾ ಚಂದ್ರಪ್ಪ

suddionenews
1 Min Read

ಚಿತ್ರದುರ್ಗ, (ಜ.13) :  ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿರುವ ಎಸ್. ಎಲ್. ವಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಯುವದಿನ ಹಾಗೂ ಸ್ವಾಮಿ ವಿವೇಕಾನಂದರ 160 ನೇ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಶ್ರೀಮತಿ ಚಂದ್ರಕಲಾ ಚಂದ್ರಪ್ಪನವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ, “ಯುವಜನರು ಅತ್ಯಂತ ಜವಾಬ್ದಾರಿಯುತವಾಗಿ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಹಾಗೂ ತಂದೆತಾಯಿಗಳು, ಗುರು-ಹಿರಿಯರಿಗೆ ಗೌರವ ನೀಡುವುದು ಅತ್ಯಗತ್ಯ” ಎಂದು ಹೇಳುತ್ತಾ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯಿಂದ ಹಲವು ಸಾವಿರ ಶಿಕ್ಷಿತ ಯುವಪೀಳಿಗೆಯನ್ನು ಸಮಾಜಕ್ಕೆ ಕಳೆದ 40 ವರ್ಷಗಳಿಂದ ಕೊಡುಗೆ ನೀಡುತ್ತಾ ಬಂದಿದೆ ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚಳ್ಳಕೆರೆ ನಗರದ ಶ್ರೀ ರಾಮಕೃಷ್ಣ ಆಶ್ರಮದ ಪರಮಪೂಜ್ಯ ಮಾತಾ ತ್ಯಾಗಮಯಿಯವರು “ವಿದ್ಯಾರ್ಥಿ ದೆಸೆಯಲ್ಲಿ ಮೂರು ಮುಖ್ಯವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು.

ಅವುಗಳೆಂದರೆ ಸ್ಪಷ್ಟ ಗುರಿ, ಮನಸ್ಸೆಂಬ ಕನ್ನಡಿಯನ್ನು ಸ್ವಚ್ಛವಾಗಿರಿಸಿಕೊಳ್ಳುವುದು, ಉತ್ತಮ ಚಿಂತನಾ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದು. ಈ ಮೂಲಕ ಸದೃಢ ಸಮಾಜದ ನಿರ್ಮಾಣ ಸುಲಭ.” ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌ ಎಲ್‌ ವಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಿ.ಎ.ಕೊಟ್ರೇಶ್‌ರವರು “ಸ್ವಾಮಿ ವಿವೇಕಾನಂದರು ಸ್ವಾವಲಂಬಿ, ಸ್ವಾಭಿಮಾನ, ಸ್ವದೇಶ ಪ್ರೇಮ, ಸ್ವ-ಗೌರವ, ಸ್ವ-ಚಿಂತನೆಯನ್ನು ಪ್ರತೀಕವಾಗಿದ್ದರು.

ಇಂದಿನ ಯುವಪೀಳಿಗೆಗೆ ಸ್ವಾಮಿ ವಿವೇಕಾನಂದರು ತಾವು ಜೀವಿಸಿದ ಅಲ್ಪಕಾಲದಲ್ಲೇ ಹಲವು ಶತಮಾನಗಳ ಕಾಲ ಸ್ಮರಿಸಲು ಸಾಧ್ಯವಾಗುವಂತಹ ಚಿಂತನೆಗಳು, ವಿಚಾರಧಾರೆಗಳನ್ನು ನೀಡಿ ತೆರಳಿದ್ದಾರೆ.”ಎಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಕೃತಿ ಆರ್ಯುವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ನವಾಜ್‌ ಅಹಮದ್‌, ಎಸ್‌̤ಎಲ್‌̤ವಿ ನರ್ಸಿಂಗ್‌ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾಂತೇಶ್‌ ಹಾಗೂ ಆದ್ಯ ಕಾಲೇಜ್‌ ಆಫ್‌ ಫಾರ್ಮಸಿಯ ಪ್ರಾಚಾರ್ಯರಾದ ಡಾ. ಫಾಲಾಕ್ಷ ಎಂ.ಎನ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಹರ್ಷ ಯು ರವರು ನಡೆಸಿದರೆ, ಶ್ರೀಮತಿ ಅಕ್ಷತಾ.ಎನ್.ಎಸ್‌ ಸಭೆಗೆ ವಂದನೆಗಳನ್ನು ಅರ್ಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *