ಚಿತ್ರದುರ್ಗ,(ಜೂನ್. 14): ಇತ್ತೀಚಿನ ದಿನಗಳಲ್ಲಿ ಯುವ ಜನತೆ ರಕ್ತದಾನಕ್ಕೆ ಮುಂದಾಗುತ್ತಿರುವುದು ಸಂತಸದ ಸಂಗತಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಹೇಳಿದರು.
ನಗರದ ಐಎಂಎ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ರೋಟರಿ ಕ್ಲಬ್ ಮತ್ತು ಇನ್ನರ್‍ವ್ಹೀಲ್ ಕ್ಲಬ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆ-ಕಾಲೇಜುಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಮೂಲಕ ರಕ್ತದಾನ ಮಾಡುವಂತೆ ಉತ್ತೇಜಿಸಬೇಕಿದೆ. ರೆಡ್‍ಕ್ರಾಸ್ ಮತ್ತು ಎನ್‍ಎಸ್ ಎಸ್ ಸ್ವಯಂಸೇವಕರ ಮೂಲಕ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮ ಮಾಡುವುದರ ಮೂಲಕ ಹೆಚ್ಚು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದೆ. ಕೊರೋನಾದಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಹಲವಾರು ಸಂಘ-ಸಂಸ್ಥೆಗಳ ಜೊತೆಗೂಡಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ಆರೋಗ್ಯ ಇಲಾಖೆಗೆ ರಕ್ತವನ್ನು ಒದಗಿಸಿರುವುದು ಶ್ಲಾಘನೀಯವಾಗಿದೆ. ಅನೇಕ ತುರ್ತು ಸಂದರ್ಭಗಳಲ್ಲಿ ಜಿಲ್ಲೆಯಲ್ಲಿ ರಕ್ತದ ಕೊರತೆ ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿಯನ್ನು ಮೂಡಿಸುವುದರ ಮೂಲಕ ಹೆಚ್ಚಿನ ರಕ್ತ ಸಂಗ್ರಹಣೆ ಕಾರ್ಯ ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಕ್ತದಾನಕ್ಕೆ ಯಾವುದೇ ವಿಧವಾದ ಜಾತಿ, ಲಿಂಗ, ವರ್ಗ ಮತ್ತು ವರ್ಣಭೇದ ಬರುವುದಿಲ್ಲ. ಆದರೆ ರಕ್ತದಾನಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳಲ್ಲಿರುವ ಕೀಳರಿಮೆಯನ್ನು ದೂರ ಮಾಡುವುದರ ಮೂಲಕ ಅವರಲ್ಲಿ ರಕ್ತದಾನಕ್ಕೆ ಪ್ರೇರೇಪಣೆ ನೀಡಬೇಕಿದೆ ಎಂದರು.
ಐಎಂಎ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ವೀರೇಶ್, ರೋಟರಿ ಕ್ಲಬ್ ರೋಟರಿ ಕ್ಲಬ್‍ನ ಅಧ್ಯಕ್ಷೆ ರಾಜೇಶ್ವರಿ ಸಿದ್ದರಾಮ, ಇನ್ನರ್‍ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ಸುಜಾತ ಪ್ರಕಾಶ್, ಜಿಲ್ಲಾ ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಲೋಕೇಶ್ ನಾಯಕ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಜಹರ್ ಉಲ್ಲಾ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಮಧುಪ್ರಸಾದ್, ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿಗಳಾದ ಅರುಣ್ ಕುಮಾರ್, ನಿರ್ದೇಶಕರಾದ ಶ್ರೀನಿವಾಸ್ ಮಳಲಿ, ಗಾಯತ್ರಿ ಶಿವರಾಂ ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.