ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂ.15 : ಗೊಂದಲದಿಂದ ಹೊರಗೆ ಬಂದು ಜೀವನದಲ್ಲಿ ಏನಾಗಬೇಕೆಂಬುದನ್ನು ನೀವುಗಳೆ ನಿರ್ಧರಿಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರೋಣ್ ವಾಸುದೇವ್ ಕಾನೂನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಲ್ಲಿನ ಸರಸ್ವತಿ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜು ಸಂಸ್ಥಾಪನಾ ದಿನಾಚರಣೆ ಉದ್ಗಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನವೆಂದರೆ ಗೋಲ್ಡನ್ ಲೈಫ್. ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ಜೀವನದಲ್ಲಿ ಯಾರಿಗೂ ಕಾಯಿಸಬಾರದು. ಯಾರನ್ನು ಕಾಯಬಾರದು ಎನ್ನುವ ಸಿದ್ದಾಂತವಿಟ್ಟುಕೊಳ್ಳಬೇಕು. ಏಕಲವ್ಯ ಶಬ್ದವೇದಿ ಮೂಲಕ ಬಾಣ ಬಿಟ್ಟು ಪ್ರಾಣಿಯನ್ನು ಭೇಟೆಯಾಡುತ್ತಾನೆ. ಅದಕ್ಕೆ ಅವನಿಲ್ಲದೆ ಏಕಾಗ್ರತೆ ಕಾರಣ. ಹಾಗಾಗಿ ಕಾನೂನು ವಿದ್ಯಾರ್ಥಿಗಳಾದ ನೀವುಗಳು ಓದಿನ ಕಡೆ ಏಕಾಗ್ರತೆ ಕೊಟ್ಟರೆ ಯಶಸ್ಸು ಸಾಧಿಸಲು ಸಾಧ್ಯ. ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳಿ. ಕಾನೂನು ಪದವಿ ಪಡೆದ ಮೇಲೆ ಒಳ್ಳೆ ವಕೀಲರಾಗಬಹುದು. ನ್ಯಾಯಾಧೀಶರಾಗಬಹುದು. ಯು.ಪಿ.ಎಸ್.ಸಿ. ಕೆ.ಪಿ.ಎಸ್ಸಿ. ಪರೀಕ್ಷೆಗಳನ್ನು ತೆಗೆದುಕೊಂಡು ತೇರ್ಗಡೆಯಾದರೆ ಉನ್ನತ ಮಟ್ಟದ ಅಧಿಕಾರಿಗಳಾಬಹುದು. ಆಯ್ಕೆ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.
ಎಲ್ಲದಕ್ಕೂ ಶಿಕ್ಷಣ ಮೂಲಭೂತ ಹಕ್ಕು. ಕಠಿಣ ಪರಿಶ್ರಮವಿದಲ್ಲದಿದ್ದರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಿಲ್ಲ. ಮೊಬೈಲ್‍ನಿಂದ ಯುವ ಪೀಳಿಗೆ ಹಾಳಾಗುತ್ತಿದೆ. ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಕಾನೂನು ಶಿಕ್ಷಣ ಪಡೆಯುವಾಗ ನ್ಯಾಯಾಲಯದಲ್ಲಿ ಕಲಾಪಗಳನ್ನು ವೀಕ್ಷಿಸಿ ಎಂದು ಕರೆ ನೀಡಿದರು.
ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಮಾತನಾಡಿ ಸ್ವಾವಲಂಭಿಯಾಗಿ ಬದುಕಲು ನೂರಾರು ಅವಕಾಶಗಳಿವೆ. ಕಾನೂನು ಪದವಿ ಪಡೆದ ನಂತರ ಏನಾಗಬೇಕೆಂಬುದನ್ನು ನೀವುಗಳೇ ನಿರ್ಧರಿಸಿ. ತಂದೆ-ತಾಯಿಗಳು ಮಕ್ಕಳ ಮೇಲೆ ನಂಬಿಕೆಯಿಟ್ಟಿರುವುದನ್ನು ಹಾಳು ಮಾಡಿಕೊಳ್ಳಬೇಡಿ. ಪದವಿ ಪಡೆದು ಜೀವನ ರೂಪಿಸಿಕೊಳ್ಳಿ. ಮೊಬೈಲ್ ಕೆಟ್ಟ ಚಟವಾಗಿ ಪರಿಣಿಮಿಸಿದೆ. ಆಸ್ಪತ್ರೆಗಳಲ್ಲಿ ಈಗ ಮೊಬೈಲ್ ಗೀಳಿಗೆ ಬಲಿಯಾಗಿರುವವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಫೇಸ್‍ಬುಕ್, ವಾಟ್ಸ್‍ಪ್‍ಗಳನ್ನು ನೋಡುವುದಕ್ಕೆ ನೀಡುವ ಅರ್ಧ ಸಮಯವನ್ನು ಓದಿಗೆ ಕೊಡಿ ಎಂದು ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೀರವನಿತೆ ಒನಕೆ ಓಬವ್ವಳಲ್ಲಿ ನಿಸ್ವಾರ್ಥತೆಯಿದ್ದುದರಿಂದ ಕೋಟೆಗೆ ಮುತ್ತಿಗೆ ಹಾಕಿದ ಶತ್ರುಗಳನ್ನು ಒನಕೆಯಿಂದ ಸೆದೆಬಡಿದು ಚಿತ್ರದುರ್ಗದ ಕೋಟೆ ರಕ್ಷಿಸಿ ಈಗಲೂ ಎಲ್ಲರ ನೆನಪಿನಲ್ಲಿ ಉಳಿದಿದ್ದಾರೆ. ಅದೇ ರೀತಿ ನೀವುಗಳು ಮತ್ತೊಬ್ಬರಿಗೆ ಸಹಾಯವಾಗುವ ಕೆಲಸ ಮಾಡಿ ಎಲ್ಲರ ನೆನಪಿನಲ್ಲಿ ಉಳಿಯಬೇಕು. ಜೀವನದಲ್ಲಿ ಜ್ಞಾನ, ಶಿಸ್ತು, ತಾಳ್ಮೆಯಿದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಕಾನೂನು ಪದವಿ ಮುಗಿಸಿದರೆ ಉದ್ಯೋಗಕ್ಕೆ ಸಾಕಷ್ಟು ಅವಕಾಶವಿದೆ ಎಂದರು.
ಸರಸ್ವತಿ ಕಾನೂನು ಕಾಲೇಜಿನ ಅಧ್ಯಕ್ಷರಾದ ಹೆಚ್.ಹನಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ನ್ಯಾಯವಾದಿ ಹಾಗೂ ಸರಸ್ವತಿ ಕಾನೂನು ಕಾಲೇಜು ಉಪಾಧ್ಯಕ್ಷರಾದ ಫಾತ್ಯರಾಜನ್, ಕಾರ್ಯದರ್ಶಿ ಡಿ.ಕೆ.ಶೀಲ, ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಎಂ.ಎಸ್.ಸುಧಾದೇವಿ, ಆಡಳಿತಾಧಿಕಾರಿ ಡಿ.ಹೆಚ್.ನಟರಾಜ್, ನಿವೃತ್ತ ಡಿ.ವೈ.ಎಸ್ಪಿ. ಅಬ್ದುಲ್ ರೆಹಮಾನ್ ವೇದಿಕೆಯಲ್ಲಿದ್ದರು.
ಅಂತಿಮ ವರ್ಷದ ಕಾನೂನು ವಿದ್ಯಾರ್ಥಿನಿ ಚೈತ್ರ ಪ್ರಾರ್ಥಿಸಿದರು.
ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ್ ಡಿ.ಬಿ. ವಂದಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ.ಮುರುಗೇಶ್ ನಿರೂಪಿಸಿದರು.