ಬೆಂಗಳೂರು: ಮೂಡಾ ಹಗರಣವನ್ನು ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ಜಮೀನು ಕಬಳಿಸಿದ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ನಿವೃತ್ತ ಯೋಧನ ಪುತ್ರಿಯನ್ನು ಅಪಹರಿಸಿ ಆಸ್ತಿ ಕೊಡದಿದ್ದರೆ ಮಗಳನ್ನು ಕೊಲ್ಲುವುದಾಗಿ ಬೆದರಿಸಿ, ಅಜ್ಜಯ್ಯ ದೇವಸ್ಥಾನದ ಪಕ್ಕದಲ್ಲಿನ ಆಸ್ತಿ ಬರೆಸಿಕೊಂಡಿದ್ದೀರಿ. ಬಿಡದಿಯಲ್ಲಿನ ಐಕಾನ್ ನರ್ಸಿಂಗ್ ಶಾಲೆಯ ಜಾಗವನ್ನು ತೆಗೆದುಕೊಂಡಿದ್ದವರನ್ನು ಹೆದರಿಸಿ ಬರೆಸಿಕೊಂಡಿದ್ದೀರಿ. ಸದಾಶಿವನಗರದಲ್ಲಿ ಮೂವರು ವಿಧವೆಯರನ್ನು ಹೆದರಿಸಿ ಆ ಆಸ್ತಿಯನ್ನು ನಿಮ್ಮ ಮಗಳ ಹೆಸರಿಗೆ ಬರೆಸಿಕೊಂಡಿದ್ದೀರಿ. ಇವುಗಳನ್ನು ತನಿಖೆ ಮಾಡಲು ಒಂದು ಸಿಐಡಿ, ಇಡಿ ಸಾಕಾಗುವುದಿಲ್ಲ. ರಾಮನಗರದಲ್ಲಿ ನೀವೂ ಮತ್ತು ಶಾಸಕ ಸೇರಿಕೊಂಡು ಕೋಡಿಹಳ್ಳಿಯಲ್ಲಿ ಅಕ್ರಮವಾಗಿ ಬಂಡೆ ಒಡೆದು ರಫ್ತು ಮಾಡುತ್ತಿದ್ದೀರಿ.
ನೊಣವಿನಕೆರೆಯ ಅಜ್ಜಯ್ಯ ನಿಮಗೇನಾದರೂ ಸೂಚನೆ ಕೊಟ್ಟಿದ್ದಾರಾ. ಕೊನೆಯ ಹಂತಕ್ಕೆ ಬಂದಿದ್ದೀಯಾ ಅಂತೇನಾದರೂ ಹೇಳಿದ್ದಾರಾ..? ಕನಕಪುರದಲ್ಲಿ ಎಷ್ಟು ಕುಟುಂಬ ಹಾಳು ಮಾಡಿದ್ದೀರಿ ಡಿಕೆ ಶಿವಕುಮಾರ್ ಅವರೇ..? ಅಜ್ಜಯ್ಯನ ಮೇಲೆ ನಿಮಗೆ ನಂಬಿಕೆ ಇದ್ದರೆ ಪ್ರಮಾಣಮಾಡಿ. ನಾನು ಮಾಡುತ್ತೇನೆ. ಆಗ ಯಾರೂ ಪ್ರಾಮಾಣಿಕರು ಎಂಬುದು ಗೊತ್ತಾಗುತ್ತದೆ. ಇಂದಿನಿಂದ ಡಿಕೆ ಶಿವಕುಮಾರ್ ಅವರಿಗೆ ಅಜ್ಜಯ್ಯನ ಶಾಪ ಪ್ರಾರಂಭವಾಗಿದೆ. ಇನ್ಮುಂದೆ ಅಜ್ಜಯ್ಯ ಕೂಡ ಅವರಿಗೆ ರಕ್ಷಣೆ ಕೊಡುವುದಿಲ್ಲ. ನಾನು ಸಿಎಂ ಆಗಿದ್ದಾಗ ದುಡ್ಡು ಹೊಡೆಯುವ ಕೆಲಸ ಮಾಡಿಲ್ಲ. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ನೋಡಿ ಕಾಂಗ್ರೆಸ್ ನವರ ನಿದ್ದೆ ಹಾಳಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.