ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, (ಮೇ.27) : ಹಿರಿಯ ಸಾಹಿತಿ, ಶ್ರೇಷ್ಠ ಕಾದಂಬರಿಕಾರಿ ಡಾ.ಬಿ.ಎಲ್.ವೇಣುರವರ ಹುಟ್ಟುಹಬ್ಬವನ್ನು ಅವರ ನಿವಾಸದಲ್ಲಿ ಶನಿವಾರ ಸೃಷ್ಠಿಸಾಗರ ಪ್ರಕಾಶನ ಹಾಗೂ ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಸಹಯೋಗದೊಂದಿಗೆ ಸರಳವಾಗಿ ಆಚರಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ.ಬಿ.ಎಲ್.ವೇಣು ಸಾಹಿತ್ಯ ಲೋಕದಲ್ಲಿ ಸಾಸಿವೆ ಕಾಳಿನ ನನ್ನ ಸಾಧನೆಯನ್ನು ಗುರುತಿಸಿ ಸಾಗರದಷ್ಟು ಅಭಿಮಾನ ತೋರಿಸಿದ್ದೀರಿ ಇದರಿಂದ ನನ್ನ ಮನಸ್ಸು ತುಂಬಿ ಭಾರವಾಗಿದೆ. ಹಾಗಾಗಿ ನಿಮ್ಮ ಅಭಿಮಾನಕ್ಕೆ ಚಿರ ಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ಯಾರು ಎಷ್ಟು ವರ್ಷಗಳ ಕಾಲ ಬದುಕಿರುತ್ತಾರೆಂಬುದು ಮುಖ್ಯವಲ್ಲ. ಬದುಕಿನುದ್ದಕ್ಕೂ ಎಲ್ಲರ ಮನದಲ್ಲಿ ನೆನಪಿನಲ್ಲುಳಿಯುವಂತಹ ಕೆಲಸ ಮಾಡಬೇಕು. ಆಗ ನಿಜವಾಗಿಯೂ ಬದುಕಿದ್ದಕ್ಕೂ ಸಾರ್ಥಕವಾಗುತ್ತದೆ. ನಿಮ್ಮ ಅಕ್ಕರೆಯ ಅಭಿಮಾನಕ್ಕೆ ಕುಗ್ಗಿದ್ದೇನೆಂದು ಡಾ.ಬಿ.ಎಲ್.ವೇಣು ಸಂತಸ ವ್ಯಕ್ತಪಡಿಸಿದರು.
ಸೃಷ್ಠಿಸಾಗರ ಪ್ರಕಾಶನದ ಮುಖ್ಯಸ್ಥ ಹಾಗೂ ಲೇಖಕ ಮೇಘ ಗಂಗಾಧರ ನಾಯ್ಕ ಮಾತನಾಡಿ ಚಿತ್ರದುರ್ಗದ ಸಾಹಿತಿ ಡಾ.ಬಿ.ಎಲ್.ವೇಣು ಸ್ವಾಭಿಮಾನದ ಸಂಕೇತ. ಸಾಹಿತ್ಯ ಲೋಕದಲ್ಲಿನ ಇವರ ಸೇವೆಯನ್ನು ಗುರುತಿಸಿ ಸರ್ಕಾರ ಸಾಕಷ್ಟು ಗೌರವಗಳನ್ನು ನೀಡಿದೆ. ಇನ್ನು ಸ್ಥಾನಮಾನಗಳನ್ನು ನೀಡುವುದು ಬಹಳಷ್ಟಿದೆ. ಈ ನೆಲದ ಮಣ್ಣಿನ ಮಗ ಡಾ.ಬಿ.ಎಲ್.ವೇಣುರವರ ದೊಡ್ಡ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತು ಮನ್ನಣೆ ಕೊಡಬೇಕೆಂದು ಒತ್ತಾಯಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ಡಾ.ಬಿ.ಎಲ್.ವೇಣು ಎಂದಿಗೂ ಯಾವುದೇ ಸ್ಥಾನಮಾನ, ಪ್ರಶಸ್ತಿಗಳಿಗಾಗಿ ಅರ್ಜಿ ಹಾಕಿ ಲಾಭಿ ಮಾಡಿದವರಲ್ಲ.
ಆದರೆ ಎಲ್ಲಾ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಸಾಹಿತ್ಯ ಮತ್ತು ನಾಡಿಗೆ ಅವರು ನೀಡಿರುವ ಕೊಡುಗೆಯನ್ನು ಸರ್ಕಾರ ಪರಿಗಣಿಸಬೇಕು. ಸಾಹಿತ್ಯ, ಕಾದಂಬರಿ, ಸಿನಿಮಾ ಮತ್ತು ಸಾಮಾಜಿಕ ರಂಗಗಳಲ್ಲಿ ಸಾಧನೆ ಮಾಡಿರುವುದಕ್ಕಾಗಿ ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ವೇಣುರವರನ್ನು ಆಯ್ಕೆ ಮಾಡಬೇಕೆಂದು ಮೇಘ ಗಂಗಾಧರನಾಯ್ಕ ಆಗ್ರಹಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಮಾತನಾಡಿ ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ಸಾಧನೆ ಮಾಡಿರುವ ಡಾ.ಬಿಎಲ್.ವೇಣು ಚಿತ್ರದುರ್ಗದಲ್ಲಿಯೇ ವಾಸವಿದ್ದು, ಅನನ್ಯ ಸೇವೆ ನೀಡುತ್ತಿದ್ದಾರೆ. ಅದಕ್ಕಾಗಿ ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಈ ಕುರಿತು ಹಿಂದೆಯೂ ಚರ್ಚೆಯಾಗಿತ್ತು. ಚಿತ್ರದುರ್ಗದ ಸಾಕ್ಷಿ ಪ್ರಜ್ಞೆಯಾಗಿರುವ ವೇಣುರವರದು ಅಪರೂಪದ ವ್ಯಕ್ತಿತ್ವ ಎಂದು ಗುಣಗಾನ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಕಾರ್ಯದರ್ಶಿಗಳಾದ ಯೂಸೂಫ್, ರಮೇಶ್, ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ, ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್, ಮೃತ್ಯುಂಜಯಪ್ಪ, ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ, ಮಡಿವಾಳ ಜನಾಂಗದ ಜಿಲ್ಲಾಧ್ಯಕ್ಷ ರಾಮಜ್ಜ, ನಿವೃತ್ತ ಪ್ರಾಚಾರ್ಯರಾದ ಡಾ.ಬಸವರಾಜ್, ಎಸ್.ಬಿ.ಎಲ್.ಮಲ್ಲಿಕಾರ್ಜುನ್, ಬ್ಯಾಂಕ್ ಕಿರಣ್, ಸೋಮಶೇಖರ್, ಪಿ.ಡಿ.ಓ.ಓಬಣ್ಣ ಸೇರಿದಂತೆ ಅಪಾರ ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಬಿ.ಎಲ್.ವೇಣುರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.