ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನೋಡಲು ಕೋಟ್ಯಾಂತರ ಮಂದಿ ಕಾಯುತ್ತಿದ್ದಾರೆ. ಇಂದು ರಾಮನ ಭಕ್ತರಿಗೆಲ್ಲಾ ಸಿಹಿ ಸುದ್ದಿ ಸಿಕ್ಕಿದೆ. ರಾಮಂದಿರದ ಗರ್ಭಗುಡಿಗೆ ಇಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಶಿಲಾನ್ಯಾಸ ನೆರವೇರಿಸಿದ್ದಾರೆ. ಅಭಿಜಿತ್ ಮುಹೂರ್ತ, ಮೃಗಶಿರ ನಕ್ಷತ್ರದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದೆ.
ಈ ಸಂಬಂಧ ಮಾತನಾಡಿದ ಸಿಎಂ ಆದಿತ್ಯನಾಥ್, ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ. ಜನರು ಕೂಡ ಈ ದಿನಕ್ಕಾಗಿ ಬಹಳ ವರ್ಷಗಳಿಂದ ಕಾಯುತ್ತಿದ್ದಾರೆ. ಈ ರಾಮಮಂದಿರ ಭಾರತದ ಏಕತೆಯ ಸಂಕೇತವಾಗಲಿದೆ. ಪ್ರಧಾನಿ ಮೋದಿ ರಾಮ ಮಂದಿರ ನಿರ್ಮಾಣವನ್ನು ಎರಡು ವರ್ಷಗಳ ಹಿಂದೆ ಆರಂಭಿಸಿದರು. ಅಂದಿನಿಂದ ನಿರ್ಮಾಣ ಕಾರ್ಯವೂ ಯಶಸ್ವಿಯಾಗಿ ಮುಂದುವರೆದಿತ್ತು. ಇಂದು ಗರ್ಭಗುಡಿಯಲ್ಲಿ ಶಿಲಾನ್ಯಾಸ ನಡೆಸುತ್ತಿರುವುದು ನಮ್ಮ ಅದೃಷ್ಟ ಎಂದಿದ್ದಾರೆ.
ಗರ್ಭಗುಡಿಗಾಗಿ ಕೆತ್ತಿದ ಮೊದಲ ಶಿಲೆಯನ್ನು ಇಟ್ಟು ಸಿಎಂ ಯೋಗಿ ಆದಿತ್ಯನಾಥ್ ಇಂದು ಪೂಜೆ ನೆರವೇರಿಸಿದ್ದಾರೆ. ಅದಕ್ಕೂ ಮುನ್ನ ಪೂರ್ವಭಾವಿಯಾಗಿ ರಾಮಾಮಾರ್ಚ, ದುರ್ಗಾ ಸ್ತಶತಿ, ರುದ್ರಾಭಿಷೇಕ, ರಾಮರಕ್ಷಾ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸ, ಸುಂದರಕಾಂಡ ಪಾರಾಯಣವನ್ನು ಮಾಡಿದ್ದರು.