ದಾವಣಗೆರೆ: “ಮುಂಬರುವ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯನ್ನು ಆಯೋಜಿಸಲು ತಪೋವನ ಸಿದ್ಧವಿದೆ. ಪ್ರತಿವರ್ಷವೂ ಈ ಸ್ಪರ್ಧೆ ನಡೆಸಲು ಇಚ್ಚೆ ಇದೆ” ಎಂದು ತಪೋವನ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ನ ಚೇರ್ಮನ್ ಡಾ. ಶಶಿಕುಮಾರ್ ಮೆಹರ್ವಾಡೆ ಅವರು ಘೋಷಿಸಿದರು.
ದೊಡ್ಡಬಾತಿ ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಯೋಗ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಯೋಗಪಟುಗಳು ಅತ್ಯಂತ ಶಿಸ್ತು ಹಾಗೂ ಉತ್ಸಾಹದಿಂದ ಪಾಲ್ಗೊಂಡಿದ್ದು ತುಂಬಾ ಖುಷಿ ಕೊಟ್ಟಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಯೋಗ ಸ್ಪರ್ಧೆ ನಡೆಸಬೇಕೆಂಬ ಆಶಯ ತಪೋವನದ್ದಾಗಿದೆ. ಇಲ್ಲಿ ಪಾಲ್ಗೊಳ್ಳುವ ಯೋಗಪಟುಗಳಿಗೆ ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುವ ಕುರಿತಂತೆಯೂ ಶ್ರಮಿಸಲಾಗುವುದು ಎಂದು ತಿಳಿಸಿದರು.
ತಪೋವನದಲ್ಲಿ ಪ್ರತಿವರ್ಷವೂ ಯೋಗ ಸ್ಪರ್ಧೆಗಳನ್ನು ನಡೆಸುತ್ತಿದ್ದೇವೆ. ಈ ಬಾರಿ ಅತ್ಯುತ್ತಮವಾಗಿ ರಾಜ್ಯಮಟ್ಟದ ಯೋಗ ಸ್ಪರ್ಧೆ ನಡೆದಿದೆ. ಯೋಗ ಸ್ಪರ್ಧೆಯಲ್ಲಿ ಚಿಕ್ಕವರಿಂದ ಹಿಡಿದು ವಯೋವೃದ್ಧರೂ ಖುಷಿ ಖುಷಿಯಾಗಿ ಪಾಲ್ಗೊಂಡಿದ್ದರು. ಯೋಗದಿಂದ ಸದೃಢ ಆರೋಗ್ಯ ಸಾಧ್ಯ. ಯಾವುದೇ ಕಾಯಿಲೆಯನ್ನು ಬೇಕಾದರೂ ಗುಣಪಡಿಸುವ ಶಕ್ತಿ ಯೋಗಕ್ಕಿದೆ ಎಂದು ತಿಳಿಸಿದರು.
ಯೋಗ ಮಾಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಮಾತನಾಡಿ, ವ್ಯಸನ ಮುಕ್ತರನ್ನಾಗಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ವ್ಯಸನಿಗಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ವ್ಯಸನ ಮುಕ್ತ ಕೇಂದ್ರಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಯೋಗ ಶಿಬಿರಗಳಲ್ಲಿ ಪೊಲೀಸರು ಸಹ ಪಾಲ್ಗೊಳ್ಳುವಂತಾಗಬೇಕು. ವ್ಯಸನ, ರೋಗ ಬಾರದ ರೀತಿಯಲ್ಲಿ ಎಲ್ಲರೂ ಎಚ್ಚರ ವಹಿಸಬೇಕಿದೆ. ತಪೋವನದಿಂದ ರಾಜ್ಯಮಟ್ಟದ ಯೋಗ ಸ್ಪರ್ಧೆ ನಡೆಸುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ನಾನು ಇಲ್ಲಿ ಯೋಗಾಸನ ಮಾಡಿದ್ದರಿಂದ ಮನಸ್ಸು ಹಗುರವಾಯಿತು. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಪುನೀತ್ ರಾಘವೇಂದ್ಎ ಮಾತನಾಡಿ, ನಾನು ಈ ಸ್ಪರ್ಧೆಯ ತೀರ್ಪುಗಾರನಾಗಿ ಆಗಮಿಸಿದ್ದು ತುಂಬಾನೇ ಸಂತೋಷ ಕೊಟ್ಟಿದೆ. ಹೆಚ್ಚು ಹೆಚ್ಚಾಗಿ ಇಂಥ ಸ್ಪರ್ಧೆಗಳು ನಡೆಯುವಂತಾಗಬೇಕು. ಯೋಗ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗೆದ್ದವರಿಗೆ ಬೇರೆ ಕ್ರೀಡೆಗಳಲ್ಲಿ ಗೆದ್ದವರಿಗೆ ಕೊಡಮಾಡುವ ಸರ್ಕಾರಿ ಕೆಲಸ, ಸೌಲಭ್ಯ, ಪ್ರೋತ್ಸಾಹ, ಆರ್ಥಿಕ ಸಹಾಯ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಎಸ್ ಡಿ ಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಕಾಲೇಜಿನ ಆಡಳಿತಾಧಿಕಾರಿ ಶಶಿಕಾಂತ್ ಜೈನ್ ಮುಖ್ಯ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಪೋವನ ಸ್ಪರ್ಧೆಗಳನ್ನು ಆಯೋಜಿಸಿದರೆ ನಾನು ಪಾಲ್ಗೊಳ್ಳುತ್ತೇನೆ. ನಮ್ಮ ಕೈಯಲ್ಲಾದಷ್ಟು ಸಹಾಯ ಮಾಡುತ್ತೇವೆ. ಧರ್ಮಸ್ಥಳ, ಉಜಿರೆಯ ನಮ್ಮ ಕಾಲೇಜು ಭಾಗವಹಿಸುತ್ತದೆ ಎಂದು ಹೇಳಿದರು.
ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಈಗ ಫ್ಯಾಷನ್ ಆಗಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಶ್ರೀಮಂತರು ಮಾತ್ರ ಬರುತ್ತಿದ್ದಾರೆ. ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯಕ್ಕೆ ಬಡವರು ಬರುವಂತಾಗಬೇಕು ಎಂದು ಆಶಿಸಿದರು.
ಸ್ಪರ್ಧೆಯಲ್ಲಿ 730 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. 12 ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು. 12 ವರ್ಷದವರಿಂದ ಹಿಡಿದು 65 ವರ್ಷದ ಮೇಲ್ಪಟ್ಟವರು ಭಾಗವಹಿಸಿದ್ದು ವಿಶೇಷ. ಬೀದರ್, ಬೆಂಗಳೂರು, ಮೈಸೂರು, ದಾವಣಗೆರೆ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಯೋಗಪಟುಗಳು ಪಾಲ್ಗೊಂಡಿದ್ದರು. ಒಟ್ಟು 72 ವಿಜೇತ ಯೋಗಪಟುಗಳಿಗೆ ಸ್ವರ್ಣ ಪದಕ, ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಯೋಗ ಅಸೋಸಿಯೇಷನ್ ಪದಾಧಿಕಾರಿಗಳು, ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಖುಷಿಪಟ್ಟರು. ಮಾತ್ರವಲ್ಲ ಪ್ರಶಸ್ತಿ ಆಯ್ಕೆ ಪಾರದರ್ಶಕವಾಗಿ ನಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸಮಾರಂಭದಲ್ಲಿ ದಾವಣಗೆರೆಯ ಸಿ. ಜೆ. ಆಸ್ಪತ್ರೆಯ ಆರ್ ಎಂ ಒ ಡಾ. ಮಂಜುನಾಥ್ ಪಾಟೀಲ್, ಜೆಜೆಎಂ ಮೆಡಿಕಲ್ ಕಾಲೇಜಿನ ಫಿಸಿಯಾಲಜಿ ಅಸೋಸಿಯೇಟ್ ಪ್ರೊಫೆಸರ್ ಡಾ. ಅಶ್ವಿನಿ, ಆಯುಸ್ ಸ್ಪೆಷಲಿಸ್ಟ್ ಡಾ. ಗಂಗಾಧರ್ ವರ್ಮಾ ಮತ್ತಿತರರು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಮಹಾಸ್ವಾಮೀಜಿ, ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ತಪೋವನದ ಆಶ್ರಯದಲ್ಲಿ ನಡೆದ ಯೋಗ ಸ್ಪರ್ಧೆ ಅಚ್ಚುಕಟ್ಟಾಗಿ ನಡೆದಿದೆ. ರಾಜ್ಯಮಟ್ಟದ ಯೋಗ ಸ್ಪರ್ಧೆ ನಡೆಸುವ ಮೂಲಕ ಎಲ್ಲರ ಮನ ಗೆದ್ದಿದೆ. ಪ್ರತಿಯೊಬ್ಬರು ಪಾಲ್ಗೊಂಡು ತಮ್ಮ ಯೋಗ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಮುಂಬರುವ ದಿನಗಳಲ್ಲಿ ಇಂಥ ಸ್ಪರ್ಧೆಗಳು ಹೆಚ್ಚು ಹೆಚ್ಚಾಗಿ ನಡೆಯುವಂತಾಗಬೇಕು. ನಮ್ಮ ಸಹಕಾರವೂ ಇರುತ್ತದೆ ಎಂದು ಹೇಳಿದರು.
ಸ್ಪರ್ಧಾ ಆಯೋಜಕರಾಗಿ ಡಾ. ಮಹಾಂತೇಶ್, ಡಾ. ಜೂವಿನ್ ಕೆನ್ನೆಡಿ, ಎನ್. ಪರಶುರಾಮಪ್ಪ, ಡಾ. ಕೆ. ಜಯಮುನಿ, ಬಿ. ಜಯರಾಂ, ನಾಗರಾಜ್ ಕುರ್ಡೇಕರ್, ಡಾ. ವಿನಯ, ಲತಾ ಕಾರ್ಲಿನೆ, ತಪೋವನ ಮ್ಯಾನೇಜರ್ ನಂದಕಿಶೋರ್ ಅವರು ಕಾರ್ಯನಿರ್ವಹಿಸಿದರು.