ಚಿತ್ರದುರ್ಗ: ಬಿಎಲ್ ಸಂತೋಷ್ ಬಗ್ಗೆ ಬಿಜೆಪಿಯಲ್ಲಿಯೂ ಹಲವರಿಗೆ ಅಸಮಾಧಾನವಿದೆ. ಇದೀಗ ಹಿರಿಯೂರು ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯ ಜೆಜೆ ಹಳ್ಳಿ ಜಯರಾಮಯ್ಯ ಕಿಡಿಕಾರಿದ್ದಾರೆ. ಬಿಜೆಪಿಯ ಆಂತರಿಕ ವ್ಯವಹಾರಗಳಲ್ಲಿ ಬಿ ಎಲ್ ಸಂತೋಷ್ ಅವರು ಮೂಗು ತೂರಿಸುವುದನ್ನು ತಡೆಯದಿದ್ದರೆ, ರಾಜ್ಯದಲ್ಲಿ ಬಿಜೆಪಿ ನಾಶವಾಗುತ್ತದೆ ಎಂದಿದ್ದಾರೆ.
ಯಡಿಯೂರಪ್ಪ ಅವರು ಸೈಕಲ್ ನಲ್ಲಿ ಸುತ್ತಿ ಪಕ್ಷ ಕಟ್ಟಿದರು. ಆದರೆ ಆರ್ ಎಸ್ ಎಸ್, ಬಿಎಲ್ ಸಂತೋಷ್ ಅವರು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿದರು. ಯಡಿಯೂರಪ್ಪ ಕಣ್ಣೀರು ಹಾಕುವಂತೆ ಮಾಡಿದರು. ಉತ್ತರ ಕರ್ನಾಟಕದ ಪ್ರಭಾವಶಾಲಿಗಳಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿಗೆ ಟಿಕೆಟ್ ಸಿಗದಂತೆ ಮಾಡಿದರು. ಪಕ್ಷ ತೊರೆಯುವಂತೆ ಮಾಡಿದರು. ಯಡಿಯೂರಪ್ಪ ಮತ್ತು ಲಿಂಗಾಯತರ ಅಗತ್ಯವಿಲ್ಲ ಅಂತ ಚುನಾವಣಾ ವೇಳೆ ದೂರವಿಟ್ಟು ಹಿಂದುತ್ವದ ಮೇಲೆ ಹೋಗುತ್ತೀವಿ ಅಂತ ಹೇಳಿ, ಚುನಾವಣೆಯಲ್ಲಿ ಮಣ್ಣು ಮುಕ್ಕಿದರು ಎಂದಿದ್ದಾರೆ.
ಇದೆ ವೇಳೆ ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿ, ಮುಂದೆ ಲೋಕಸಭಾ ಚುನಾವಣೆ ಬರುತ್ತಾ ಇದೆ. ಈ ಚುನಾವಣೆಯಲ್ಲೂ ಸಂತೋಷ್ ಕೈಗೆ ಚುಕ್ಕಾಣಿ ನೀಡಿದರೆ, ಬಿಜೆಪಿಗೆ ಹೀನಾಯ ಪರಿಸ್ಥಿತಿ ಬರಲಿದೆ. ರಾಜ್ಯದಲ್ಲಿ ಸಂತೋಷ್ ಅವರ ಮಾತಿಗೆ ಮನ್ನಣೆ ಕೊಡದೆ, ಯಡಿಯೂರಪ್ಪ ಅವರ ಮಾರ್ಗದರ್ಶನದ ಮೂಲಕ ಚುನಾವಣೆ ಎದುರಿಸಬೇಕು ಎಂಬ ಸಲಹೆ ನೀಡಿದ್ದಾರೆ.
ಬಿಜೆಪಿಯ ಹೈಕಮಾಂಡ್ ಈಗಾಗಲೇ ಯಡಿಯೂರಪ್ಪ ಅವರ ಇರುವಿಕೆ ಎಷ್ಟು ಅಗತ್ಯ ಎಂಬುದು ಅರ್ಥವಾಗಿದೆ. ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿದರೆ ಸೋಲು ಎಷ್ಟು ಹೀನಾಯ ಎಂಬ ಅನುಭವವೂ ಆಗಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರಿಗೆ ಸಾಕಷ್ಟು ಪ್ರಾಶಸ್ತ್ಯ ನೀಡುತ್ತಿದ್ದಾರೆ.