ಬೆಂಗಳೂರು: ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಶಿಕಾರಿಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂಬ ಮಾತನ್ನು ಹೇಳಿದ್ದರು. ಆ ವಿಚಾರದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದು, ಯಾರಿಗೆ, ಎಲ್ಲಿ, ಟಿಕೆಟ್ ಕೊಡಬೇಕು, ಕೊಡಬಾರದು ಎಂಬುದು ಪಾರ್ಲಿಮೆಂಟರಿ ಬೋರ್ಡ್ ಗೆ ಬಿಟ್ಟಿದ್ದು ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರು ಮಾಸ್ ಲೀಡರ್. ಪಕ್ಷ ಕಟ್ಟಿದವರಲ್ಲಿ ಅವರು ಕೂಡ ಒಬ್ಬರು. ನಮ್ಮಲ್ಲಿ ಪ್ರಧಾನಿಗೂ ಟಿಕೆಟ್ ಘೋಷಣೆ ಮಾಡುವುದು ಪಾರ್ಲಿಮೆಂಟರಿ ಬೋರ್ಡ್. ಯಾರಿಗೆ, ಎಲ್ಲಿ ಟಿಕೆಟ್ ಕೊಡಬೇಕು, ಕೊಡಬಾರದು ಎಂಬುದನ್ನು ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸುತ್ತದೆ ಎಂದಿದ್ದಾರೆ.
ಯಡಿಯೂರಪ್ಪ ಅವರು ಚುನಾವಣೆಗೆ ಇನ್ಮುಂದೆ ನಿಲ್ಲಲ್ಲ ಎಂದಿದ್ದಾರೆ ವಿನಃ, ಸಕ್ರಿಯ ರಾಜಕಾರಣದಿಂದ ದೂರ ಉಳಿಯುವುದಾಗಿ ಹೇಳಿಲ್ಲ. ನಮ್ಮ ಪಕ್ಷದ ವ್ಯವಸ್ಥೆ ಹೇಗಿದೆ ಎಂಬುದು ಹಿರಿಯ ನಾಯಕರಾಗಿರುವ ಯಡಿಯೂರಪ್ಪ ಅವರಿಗೆ ಚೆನ್ನಾಗಿಯೇ ಗೊತ್ತಿದೆ. ಅವರು ಕೇವಲ ಸಲಹೆ ನೀಡಿದ್ದಾರೆ. ಆ ಸಲಹೆಯನ್ನು ಪಕ್ಷ ಕೂಡ ಗಂಭೀರವಾಗಿ ಪರಿಗಣಿಸುತ್ತದೆ. ಇಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.