ವಿಜಯಪುರ: ಬಿಜೆಪಿ ಸರ್ಕಾರ ಮುಸ್ಲಿಂರಿಗೆ ನೀಡಿದ್ದ ಮೀಸಲಾತಿ ರದ್ದು ಮಾಡುವ ನಿರ್ಧಾರ ಮಾಡಿದೆ. ಈ ಬೆನ್ನಲ್ಲೇ ಹಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಸ್ಲಿಂರು ಮೂರು ಮೂರು ಕಡೆ ಲಾಭ ಪಡೆಯುತ್ತಿದ್ದಾರೆ. ಮೀಸಲಾತಿ ಏನು ಇವರಪ್ಪನ ಮನೆಯದ್ದಾ..? ಲಾಭ ಒಂದೇ ಕಡೆ ಸಿಗಬೇಕು ಎಂದು ತಿರುಗೇಟು ನೀಡಿದ್ದಾರೆ.
ಇನ್ನು ದಲಿತರ ಮೀಸಲಾತಿ ಬಗ್ಗೆ ಮಾತನಾಡಿ, ದಲಿತರಿಗೆ ಇನ್ನು ಎರಡು ಪರ್ಸೆಂಟ್ ಜಾಸ್ತಿ ಮಾಡುತ್ತೇವೆ. ಈಗ 17 ಪರ್ಸೆಂಟ್ ಇದೆ. ಮುಂದೆ ನರೇಂದ್ರ ಮೋದಿಯವರು 21 ಪರ್ಸೆಂಟ್ ಮಾಡ್ತಾರೆ. ಅತಿಯಾದ ಮುಸ್ಲಿಂ ತುಷ್ಠಿಕರಣವೇ ಸಿದ್ದರಾಮಯ್ಯ ಅವರ ಈ ಸ್ಥಿತಿಗೆ ಕಾರಣವಾಗಿದೆ. ಎಲ್ಲಾ ಜನಾಂಗವನ್ನು ಪ್ರೀತಿ ಮಾಡಬೇಕು ಒಂದೇ ಜನಾಂಗವನ್ನು ತಲೆ ಮೇಲೆ ಕೂರಿಸಿಕೊಂಡರೆ, ಇನ್ನುಳಿದವರು ಬುದ್ದಿ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಡಿಕೆಶಿಗೂ ತಿರುಗೇಟು ನೀಡಿರುವ ಯತ್ನಾಳ್, ಕಾಂಗ್ರೆಸ್ ಥರಥರ ಅಂತ ಅಲುಗಾಡಿ ಹೋಗಿದೆ. ಡಿಕೆ ಶಿವಕುಮಾರ್ ಗೆ ತಾಕತ್ತು ಇದ್ದರೆ ಮೀಸಲಾತಿ ರದ್ದು ಮಾಡ್ತೀವಿ ಅಂತ ಚುನಾವಣೆಯಲ್ಲಿ ಹೇಳಲಿ. ಆ ರೀತಿ ಹೇಳಿದ್ರೆ ಕಾಂಗ್ರೆಸ್ ನ ಡೆಪಾಜಿಟ್ ರದ್ದಾಗುತ್ತದೆ ಎಂದಿದ್ದಾರೆ.