ಬೆಳಗಾವಿ; ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಬಗ್ಗೆ ಹಾಗೂ ಯಡಿಯೂರಪ್ಪ ಅವರ ಬಗ್ಗೆ ಸದಾ ನಾಲಿಗೆ ಹರಿ ಬಿಡುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಇದೀಗ ಯತ್ನಾಳ್ ಪರವಾಗಿ ಪಂಚಮಸಾಲಿ ಪೀಠಾಧ್ಯಕ್ಷರಾದ ಜಯ ಮೃತ್ಯುಂಜಯ ಸ್ವಾಮೀಜಿಗಳು ನಿಂತಿದ್ದಾರೆ. ಅವರನ್ನ ಉಚ್ಛಾಟನೆ ಮಾಡಿ, ಅಧಿಕಾರ ಹಿಡಿಯುವುದಕ್ಕೆ ಸಾಧ್ಯವೇ ಇಲ್ಲವೆಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ಕೇವಲ ಲಿಂಗಾಯತರು ಮಾತ್ರ ಬೆಂಬಲ ಕೊಡ್ತಾ ಇಲ್ಲ. ಎಲ್ಲಾ ಜಾತಿ ಜನಾಂಗದವರು, ಎಲ್ಲಾ ಅಭಿಮಾನಿಗಳು, ಎಲ್ಲಾ ಹಿಂದೂಪರ ಸಂಘಟನೆಯವರು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬೆಂಬಲ ನೀಡ್ತಾ ಇದಾರೆ. ಈ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿಗೆ ಹೇಳುವುದಕ್ಕೆ ಇಚ್ಛೆ ಪಡ್ತೀನಿ, ಲಿಂಗಾಯತರನ್ನು ಕಡೆಗಣಿಸಿ, ಅದರಲ್ಲಿ ವಿಶೇಷವಾಗಿ ದೊಡ್ಡ ಸಮುದಾಯವಾಗಿರುವ ಪಂಚಮಸಾಲಿ ನಾಯಕರನ್ನು ಕಡೆಗಣಿಸಿ, ನೀವೇನಾದ್ರೂ ಅಧಿಕಾರ ಮಾಡ್ತೀವಿ, ಪಕ್ಷ ಅಧಿಕಾರಕ್ಕೆ ತರ್ತೀವಿ ಎಂದು ಕನಸು ಕಾಣ್ತಾ ಇದ್ರೆ ಅದು ಕೇವಲ ನಿಮ್ಮ ಭ್ರಮೆ.

ಇವತ್ತು ಬಿಜೆಪಿಗೆ ಲಿಂಗಾಯತರು ದೊಡ್ಡ ಶಕ್ತಿ. ಅದರಲ್ಲೂ ಪಂಚಮಸಾಲಿ ಜನಾಂಗ ಯಾವಾಗಲೂಬಿಜೆಪಿ ಪರ ಇರುವುದು. ಕಳೆದ ಬಾರಿ ಈ ಜನಾಂಗ ಮೀಸಲಾತಿ ಹೋರಾಟ ಶುರು ಮಾಡಿದ ಮೇಲೆ, ಅಲ್ಲಿವರೆಗೂ ಅಪ್ಪ ಹೇಳಿದ್ದೆ ವೇದ ವಾಕ್ಯ ಎಂಬಂತೆ ಕೇಳುತ್ತಿದ್ದರು. ಹೋರಾಟ ಆದ್ಮೇಲೆ ನಮ್ಮ ಜನರಿಗೂ ಸತ್ಯ ಗೊತ್ತಾಯ್ತು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಮಾತನಾಡಿದ್ದಾರೆ.

