ನವದೆಹಲಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಮುಂಚೆ ಯಡಿಯೂರಪ್ಪ ಅಂಡ್ ಸನ್ಸ್ ವಿರುದ್ಧ ಮಾತಿನ ಯುದ್ಧವನ್ನೇ ಸಾರುತ್ತಿದ್ದರು. ಆದರೆ ಈಗ ಕೇಂದ್ರ ಶಿಸ್ತು ಸಮಿತಿ ಮುಂದೆ ಹಾಜರಾದ ಬೆನ್ನಲ್ಲೇ ಯತ್ನಾಳ್ ಉಲ್ಟಾ ಹೊಡೆಯುತ್ತಿದ್ದಾರೆ. ಯಡಿಯೂರಪ್ಪ ಅವರ ಮಾತಿಗೆ ನನ್ನ ಸಮ್ಮತಿ ಇದೆ ಎಂದೇ ಹೇಳಿದ್ದಾರೆ. ಈ ಮೂಲಕ ರೆಬೆಲ್ ಆಗಿದ್ದವರು ಸೈಲೆಂಟ್ ಆಗಿದ್ದಾರೆ ಎನಿಸುವುದಕ್ಕೆ ಶುರುವಾಗಿದೆ. ಯತ್ನಾಳ್ ಬಣದಲ್ಲಿ ಹಲವರಿದ್ದರು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದೇ ಬಯಸಿದ್ದರು. ಈಗ ಯತ್ನಾಳ್ ತಣ್ಣಗಾಗಿದ್ದು, ಉಳಿದವರು ಏನು ಮಾಡ್ತಾರೆ ಎಂಬುದನ್ನು ನೋಡಬೇಕಿದೆ.
ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಮುಂದೆ ಸ್ಪಷ್ಟನೆ ನೀಡಿದ ಬಳಿಕ ಮಾತನಾಡಿದ ಯತ್ನಾಳ್, ‘1 ಗಂಟೆ 15 ನಿಮಿಷಗಳ ಕಾಲ ಎಲ್ಲವನ್ನು ಸವಿಸ್ತಾರವಾಗಿ ಹೇಳಿದ್ದೇನೆ.ನಾನು ಹೇಳಿರುವ ಎಲ್ಲವನ್ನು ಸ್ವೀಕಾರ ಮಾಡಿದ್ದಾರೆ. ಪಕ್ಷದ ಹಿತ ದೃಷ್ಟಿಯಿಂದ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ವಕ್ಫ್ ಬೋರ್ಡ್ ವಿರುದ್ಧದ ಹೋರಾಟಕ್ಕೆ ಪ್ರಶಂಸೆ ವ್ಯಕ್ಯಪಡಿಸಿದ್ದು, ಪಕ್ಷದ ಸಂಘಟನೆಯಿಂದ ಕೆಲಸ ಮಾಡಿ ಎಂದು ಹೇಳಿದ್ದಾರೆ. ನಿಮ್ಮ ಭಾವನೆಗಳನ್ನು ನಾಯಕರ ಗಮನಕ್ಕೆ ತರುವುದಾಗಿಯೂ ಹೇಳಿದ್ದಾರೆ. ಯಡಿಯೂರಪ್ಪ ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ನಿಮಗೆ ಭವಿಷ್ಯವನ್ನು, ಶಾಂತ ಸ್ವಭಾವದಿಂದ ಇರಿ ಎಂದು ಹೇಳಿದ್ದಾರೆ ಎಂದಿದ್ದಾರೆ.
ಇಂದು ಬೆಳಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಯಡಿಯೂರಪ್ಪ ಅವರು, ಯತ್ನಾಳ್ ಹೊರಗಿನವರಲ್ಲ, ನಮ್ಮವರೆ. ಯಾವುದೋ ಕಾರಣಕ್ಕೆ ಅವರು ಹಾಗೆ ಮಾತನಾಡುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಕೂತು ಬಗೆಹರಿಸುತ್ತದೆ ಎಂದು ಹೇಳಿದ್ದರು. ಈಗ ಯತ್ನಾಳ್ ಅವರು ಕೂಡ ಶಿಸ್ತು ಸಮಿತಿಯ ಸಭೆ ಆದ ಮೇಲೆ ತಣ್ಣಗಾಗಿದ್ದಾರೆ.