ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್.31 . ಆಂಗ್ಲ ಭಾಷಾ ವ್ಯಾಮೋಹದಲ್ಲಿರುವ ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಳಸುವ ಬಸ್ಸುಗಳ ಮೇಲೆ ನವೆಂಬರ್ 10 ರೊಳಗೆ ಕನ್ನಡದಲ್ಲಿ ಶಾಲೆಗಳ ಹೆಸರು ಬರೆಸದಿದ್ದಲ್ಲಿ ಕಪ್ಪು ಮಸಿ ಬಳಿದು ಪ್ರತಿಭಟನೆ ಮಾಡುವುದಾಗಿ, ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಎಚ್ಚರಿಸಿದ್ದಾರೆ.
ತಾಲೂಕಿನ ಕೊರ್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ಅಭಿಮಾನಿಗಳು ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಅವರಿಗೆ ಮನವಿ ಸಲ್ಲಿಸಿದ ವೇಳೆ ಮಾತನಾಡಿದರು.
2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಪೋಷಣೆ ಮಾಡಿಕೊಳ್ಳುವುದು ಒಂದು ಸವಾಲಾಗಿದೆ. ಕನ್ನಡ ನಾಡಿನಲ್ಲಿ ಕನ್ನಡದ ಅನಿವಾರ್ಯತೆ ಸೃಷ್ಟಿಸುವ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ. ಖಾಸಗಿ ಶಾಲಾ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುವ ಸಂಸ್ಕøತಿ ಬೆಳೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಖಾಸಗಿ ಶಾಲೆಗಳ ಬಸ್ಸುಗಳ ಮೇಲೆ ಆಂಗ್ಲ ಭಾಷೆಯ ಮೆರವಣಿಗೆ ಮಾಡಲಾಗುತ್ತಿದೆ.
ಖಾಸಗಿ ಶಾಲೆಗಳ ಸಾಂಸ್ಕೃತಿಕ ಮತ್ತು ಪೋಷಕರ ಸಭೆಗಳಲ್ಲೂ ಆಂಗ್ಲ ಭಾಷೆಗೆ ಒತ್ತು ನೀಡಲಾಗುತ್ತಿದೆ. ಕನ್ನಡ ನಾಡಿನಲ್ಲಿ ಸ್ಥಾಪಿತವಾಗಿರುವ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಇರಬೇಕು. ನಾಡಿನ ನೆಲ, ಜಲ, ಭಾಷೆ ಜಾಗೃತಿಗೆ ಪ್ರತಿಯೊಬ್ಬ ಕನ್ನಡಿಗರ ಜಾಗೃತಿ ಅಗತ್ಯವಿದೆ. ಖಾಸಗಿ ಶಾಲೆಗಳ ಇಂಗ್ಲೀಷ್ ವ್ಯಾಮೋಹಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕದಿದ್ದಲ್ಲಿ ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಬಿಇಒ ಕೆ.ಎಸ್. ಸುರೇಶ್ ಮಾತನಾಡಿ, ಖಾಸಗಿ ಶಾಲೆಗಳಿಗೆ ಕೂಡಲೇ ನೋಟೀಸ್ ಜಾರಿ ಮಾಡಲಾಗಿದೆ. ಕನ್ನಡ ಭಾಷೆಗೆ ಆದ್ಯತೆ ನೀಡಬೇಕೆಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಆಡಳಿತ ಭಾಷೆಯಾಗಿ ಕನ್ನಡ ಭಾಷೆಯ ಜಾಗೃತಿಗೆ ಅಧಿಕಾರಿ ವರ್ಗ ಮತ್ತು ಸಾರ್ವಜನಿಕರ ಒತ್ತಾಸೆ ಇರಬೇಕಾಗಿದೆ. ಖಾಸಗಿ ಶಾಲೆಗಳ ಬಸ್ಸುಗಳ ಮೇಲೆ ಕನ್ನಡ ಭಾಷೆಯಲ್ಲಿ ಶಾಲಾ-ಕಾಲೇಜುಗಳ ಹೆಸರು ಬರೆಸಲು ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಸಾಮಾಜಿಕ ಹೋರಾಟಗಾರ ಎಸ್.ಎಚ್. ಸೈಯದ್, ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ, ಕ್ಲಾಸಿಕ್ ಚಂದ್ರಶೇಖರ್, ಟಿ. ಸುರೇಶ್, ಜಿ.ಎನ್. ವೀರಣ್ಣರೆಡ್ಡಿ, ಪಿ. ರಮೇಶ, ಕೆ. ನಾಗರಾಜ್, ಎಚ್. ಮಹಾಂತೇಶ್, ಪಿ. ಸಿದ್ದೇಶ್, ಎಲ್. ಸುದೀಪ್, ಯೂನೀಸ್, ವಿ. ಗೋಪಿ, ಎನ್. ಶಿವು, ಬಿ. ಬೋರೇಶ್, ಎಂ.ರವಿ, ವೆಂಕಟೇಶ ಮತ್ತಿತರರು ಇದ್ದರು.